ಹೊನ್ನಾವರ: ಜನರು ಈಗ ದುಡಿಮೆಯ ಬಗ್ಗೆ ಆಲೋಚಿಸುವುದೇ ಹೆಚ್ಚಾಗಿದೆ. ದೂರದ ಊರುಗಳಿಗೆ ತೆರಳಿ ತಮ್ಮ ದುಡಿಮೆಯ ಕ್ಷೇತ್ರವನ್ನು ನೋಡಿಕೊಳ್ಳುವ ಜತೆಗೆ ತಾವು ಹುಟ್ಟಿ ಬೆಳೆದ ಸ್ಥಳದ ಬಗ್ಗೆಯೂ ಆಲೋಚಿಸಬೇಕು. ಹಣ ಸಂಪಾದಿಸಿ ಆದರೆ ಹೃದಯವಂತಿಕೆ ಬೆಳೆಸಿಕೊಳ್ಳಿ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಮಂಕಿಯ ಬೋಳೆಬಸ್ತಿ ಗ್ರಾಮದಲ್ಲಿ ನಡೆದ ಶ್ರೀ ಹೊನ್ನ ಮಹಾಸತಿ ದೇವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಕರಾವಳಿಯ ಉದ್ದಕ್ಕೂ ದೇವಾಲಯಗಳು ಹೆಚ್ಚಿವೆ. ದೇವಸ್ಥಾನಗಳೇ ಇಲ್ಲದ ಗ್ರಾಮ ನಮ್ಮಲ್ಲಿಲ್ಲ. ಮನುಷ್ಯನ ಜೀವನದಲ್ಲಿ ದೇವಾಲಯಗಳು ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತದೆ. ನಾವು ಆಧುನಿಕತೆಯಲ್ಲಿ ಎಲ್ಲವನ್ನೂ ಪಡೆದಿದ್ದೇವೆ. ಆದರೆ ನಮಗೆ ಸಂತೋಷ ಇಲ್ಲ. ನೆಮ್ಮದಿ ಇಲ್ಲ. ಇವೆಲ್ಲದರ ನಡುವೆ ಸಂಬಂಧಗಳು ಶಿಥಿಲ ಆಗುತ್ತಿವೆ. ದೇವಾಲಯಕ್ಕೆ ಹೋದರೆ ನಮಗೆ ನೆಮ್ಮದಿ ಸಿಗುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ. ದೇವಾಲಯಗಳು ಈ ಹಿಂದೆ ಶ್ರದ್ಧಾ ಕೇಂದ್ರಗಳು ಮಾತ್ರ ಆಗಿರಲಿಲ್ಲ. ಅದೊಂದು ಶಾಲೆ ಆಗಿತ್ತು, ನ್ಯಾಯಾಲಯ ಆಗಿತ್ತು. ಈಗ ದೇವಾಲಯಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಕಾರಣ ಮನುಷ್ಯನಲ್ಲಿ ಶಾಂತಿ ಮತ್ತು ನೆಮ್ಮದಿ ಇಲ್ಲದಿರುವುದು. ಈ ಊರನ್ನು ಕಾಯುತ್ತಿರುವ ಹೊನ್ನಮಹಾಸತಿ ಶಕ್ತಿಯಾಗಿ ರೂಪುಗೊಂಡಿದ್ದಾಳೆ. ನಂಬಿಕೆಯೆ ದೇವರು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹೆತ್ತ ತಾಯಿಯನ್ನು ಗೌರವಿಸಿ ಮತ್ತು ಈ ಮಹಾಸತಿ ನಿಮ್ಮ ತಾಯಿ ಎಂದು ಭಾವಿಸಿ ಪೂಜಿಸಿ ಎಂದು ಹೇಳಿದರು.ಮೂಡಬಿದಿರೆಯ ಶ್ರೀ ಕ್ಷೇತ್ರ ದಿಗಂಬರ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಮಾತನಾಡಿ, ಈ ಊರು ಜೈನ ಮತ್ತು ಹಿಂದುಗಳ ಸಂಗಮ ಕ್ಷೇತ್ರವಾಗಿದೆ. ಹಲವು ಕ್ಷತ್ರಿಯರಿಗೂ ಮತ್ತು ಜೈನರಿಗೂ ಮೊದಲಿಂದಲೂ ಒಳ್ಳೆಯ ಸಂಬಂಧವಿತ್ತು. ದೇಶ ಮತ್ತು ಜಗತ್ತು ಶಾಂತಿಯಿಂದ ಬೆಳಗಬೇಕು. ಅದು ಸನಾತನ ಧರ್ಮದಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಎಲ್ಲರೂ ಸಾಮರಸ್ಯದಿಂದ ಬಾಳಿ ಎಂದು ಆಶೀರ್ವದಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮೀನುಗಾರಿಕಾ ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ, ಮಾಜಿ ಶಾಸಕ ಸುನೀಲ್ ನಾಯ್ಕ, ಸಂಘ ಪರಿವಾರದ ಮಂಗೇಶ್ ಬೆಂಡೆ ಮಾತನಾಡಿದರು.ಗೋಲ್ ಇಂಟರ್ ನ್ಯಾಶನಲ್ ಶಾಲೆಯ ಚೇರ್‌ಮನ್ ಎ.ಆರ್. ನಾಯ್ಕ, ಪರ್ವ ಕಂಪನಿಯ ಮುಖ್ಯಸ್ಥ ನಿಲೇಶ್ ಎಂ.ಪಿ., ಪರ್ವ ಕಂಪನಿಯ ಕೋ-ಫೌಂಡರ್ ಶಶಿಧರ ನಾಗರಾಜಪ್ಪ ಉಪಸ್ಥಿತರಿದ್ದರು. ದೇವಾಲಯದ ಆಡಳಿತ ಮೊಕ್ತೇಸರ ಬಾಳಸು ಬಾಬಯ್ಯ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.ಊರಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉದ್ಯಮಿ ರವಿರಾಜ್ ನಾಯ್ಕ ಸ್ವಾಗತಿಸಿದರು. ಗೋಲ್ ಇಂಟರ್ ನ್ಯಾಶನಲ್ ಶಾಲೆಯ ಚೇರ್‌ಮನ್ ಎ.ಆರ್. ನಾಯ್ಕ ವಂದಿಸಿದರು. ಆನಂದ್ ನಾಯ್ಕ ಹಾಗೂ ಅಣ್ಣಪ್ಪ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.