ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆಗಳು ಕಟಾವಿನ ಹಂತದಲ್ಲಿದ್ದು, ಬೆಳೆ ಕಟಾವು ಪ್ರಯೋಗವನ್ನು ಮೊಬೈಲ್ ತಂತ್ರಾಂಶದಲ್ಲಿ ನಿಗದಿತ ಅವಧಿಯೊಳಗೆ ಕೈಗೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದ್ದಾರೆ.
ಕೊಪ್ಪಳ: ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆ ಕಟಾವು ಪ್ರಯೋಗವನ್ನು ಕೈಗೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಉಪ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆಗಳು ಕಟಾವಿನ ಹಂತದಲ್ಲಿದ್ದು, ಬೆಳೆ ಕಟಾವು ಪ್ರಯೋಗವನ್ನು ಮೊಬೈಲ್ ತಂತ್ರಾಂಶದಲ್ಲಿ ನಿಗದಿತ ಅವಧಿಯೊಳಗೆ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಬೆಳೆ ಸಮೀಕ್ಷೆಯ ಮೂಲ ಕಾರ್ಯಕರ್ತರಿಗೆ ತರಬೇತಿ ಹಮ್ಮಿಕೊಳ್ಳಬೇಕು. ಪ್ರಸ್ತುತ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಯಾವ ಹಳ್ಳ, ನಾಲೆಗಳಲ್ಲಿ ಹೆಚ್ಚು ನೀರು ಬರುತ್ತದೆ ಎಂಬುದರ ಬಗ್ಗೆ ಪರಿಶೀಲಿಸಿ, ಮುಂದಿನ ಕ್ರಮಕ್ಕೆ ವರದಿ ಸಲ್ಲಿಸಬೇಕು. ಬೆಳೆ ನಷ್ಟ ಉಂಟಾದಲ್ಲಿ ಕೂಡಲೇ ಅದರ ಮಾಹಿತಿಯನ್ನು ತಂತ್ರಾಂಶದಲ್ಲಿ ನಮೂದಿಸಲು ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಅಲ್ಲದೇ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಫರಿಹಾರ ವಿತರಣೆ ಕ್ರಮದಡಿ ಯಾವುದೇ ಪ್ರಕರಣ ಬಾಕಿ ಉಳಿಯದಂತೆ ನೋಡಿಕೊಳ್ಳಬೇಕು. ಪ್ರತಿ ಮಾಹೆಯಲ್ಲಿ ತಾಲೂಕು ಮಟ್ಟದಲ್ಲಿಯೂ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಭೆಗಳನ್ನು ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಕೊಪ್ಪಳ ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆ ಮಳೆ 281 ಮಿಮಿ ಇದ್ದು, ವಾಸ್ತವಿಕವಾಗಿ 396 ಮಿಮೀ ಆಗಿದೆ. ಶೇ. 41ರಷ್ಟು ಹೆಚ್ಚು ಮಳೆಯಾಗಿದೆ. ಜಿಲ್ಲೆಯ ಒಟ್ಟು 3,19,356 ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಪೈಕಿ 3,04,270 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬತ್ತ, ಶಕ್ತಿಮಾನ್ ಜೋಳ, ಮೆಕ್ಕೆ ಜೋಳ, ಸಜ್ಜೆ, ನವಣೆ, ತೊಗರಿ, ಹುರಳಿ, ಹೆಸರು, ಅಲಸಂದಿ, ಅವರೆ, ಮಡಕೆ, ಶೇಂಗಾ, ಸೂರ್ಯಕಾಂತಿ, ಎಳ್ಳು, ಗುರೆಳ್ಳು, ಔಡಲು, ಹತ್ತಿ, ಕಬ್ಬು ಒಳಗೊಂಡಂತೆ ಕೊಪ್ಪಳ ತಾಲೂಕಿನಲ್ಲಿ ಶೇ. 103, ಕುಷ್ಟಗಿ ಶೇ. 100, ಯಲಬುರ್ಗಾ ಶೇ. 99, ಕುಕನೂರು ಶೇ. 99, ಗಂಗಾವತಿ ಶೇ. 78, ಕಾರಟಗಿ ಶೇ. 67, ಕನಕಗಿರಿ ಶೇ. 98ರಷ್ಟು ಸೇರಿ ಜಿಲ್ಲೆಯಲ್ಲಿ ಶೇ. 95ರಷ್ಟು ಬಿತ್ತನೆಯಾಗಿದೆ ಎಂದು ಮಾಹಿತಿ ನೀಡಿದರು.
ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಸಿ. ಉಕ್ಕುಂದ, ಪಶು ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ. ಮಲ್ಲಯ್ಯ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುಧಾಕರ ಮಾನೆ ಹಾಗೂ ರೇಷ್ಮೆ, ಮೀನುಗಾರಿಕೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಹಸೀಲ್ದಾರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.