ರಾಮನಗರ: ಪ್ರತಿಯೊಂದು ಜೀವಿಯ ಉಳಿವಿಗೆ ಪರಿಸರವು ಮುಖ್ಯವಾಗಿದೆ. ಪ್ರಸ್ತುತ ಪರಿಸರ ರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಎಚ್. ಅಣ್ಣಯ್ಯನವರ ತಿಳಿಸಿದರು
ರಾಮನಗರ: ಪ್ರತಿಯೊಂದು ಜೀವಿಯ ಉಳಿವಿಗೆ ಪರಿಸರವು ಮುಖ್ಯವಾಗಿದೆ. ಪ್ರಸ್ತುತ ಪರಿಸರ ರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಎಚ್. ಅಣ್ಣಯ್ಯನವರ ತಿಳಿಸಿದರು.
ನಗರದ ಬಸವನಪುರದ ರಣಹದ್ದು ವನ್ಯಜೀವಿ ಧಾಮದ ಶ್ರೀ ರಾಮದೇವರ ಬೆಟ್ಟದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಧರೆ ಫೌಂಡೇಷನ್, ಜಿಲ್ಲಾ ವಕೀಲರ ಸಂಘ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸುತ್ತಮುತ್ತಲಿನ ಮರ, ಗಿಡಗಳು ಕ್ರಿಮಿ–ಕೀಟಗಳು, ಪ್ರಾಣಿ–ಪಕ್ಷಿಗಳು ಸೇರಿದಂತೆ ಸಂಪೂರ್ಣ ಪರಿಸರವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿವಿಧ ಜಾತಿಯ ಗಿಡಗಳನ್ನು ಬೆಳೆಸಿ, ಪೋಷಿಸಬೇಕು. ರಸ್ತೆ ಬದಿಗಳಲ್ಲಿ ಹಾಗೂ ಶಾಲಾ-ಕಾಲೇಜು, ಕಚೇರಿ ಆವರಣಗಳಲ್ಲಿ ಸಸಿ ನೆಟ್ಟು, ಪೋಷಿಸುವ ಮೂಲಕ ಪರಿಸರದ ಬಗ್ಗೆ ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಒಂದು ಗಿಡ ನೆಟ್ಟರೆ ಅದು ಯಾವುದೇ ಜಾತಿ, ಧರ್ಮ, ಮತಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ನೆರಳು, ಶುದ್ಧ ಗಾಳಿ ಮತ್ತು ಆಮ್ಲಜನಕವನ್ನು ಉಚಿತವಾಗಿ ನೀಡುತ್ತದೆ. ಸರ್ಕಾರದ 5 ಗ್ಯಾರಂಟಿಗಳಂತೆ ಪರಿಸರವೂ ಜನರಿಗೆ ಗಾಳಿ, ನೀರು, ಬೆಳಕು, ಮಣ್ಣು ಹಾಗೂ ಆಮ್ಲಜನಕ ಎಂಬ ಐದು ಅಮೂಲ್ಯ ಕೊಡುಗೆಗಳನ್ನು ನೀಡುತ್ತದೆ. ಪ್ಲಾಸ್ಟಿಕ್ ಭೂಮಿಯಲ್ಲಿ ಕರಗಲು ಸುಮಾರು 400 ವರ್ಷಗಳ ಕಾಲ ಬೇಕಾಗುತ್ತದೆ. ಅದನ್ನು ಸುಟ್ಟರೆ ವಾಯುಮಾಲಿನ್ಯ ಉಂಟಾಗುತ್ತದೆ. ರಸ್ತೆಬದಿಯಲ್ಲಿ ಎಸೆದರೆ ಸೊಳ್ಳೆ ಹಾಗೂ ಇತರ ಸಮಸ್ಯೆಗಳು ಹೆಚ್ಚಾಗುತ್ತವೆ. ಮಣ್ಣಿನಲ್ಲಿ ಪ್ಲಾಸ್ಟಿಕ್ ಸೇರುವುದರಿಂದ ಗಿಡಗಳ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ತಿಳಿಸಿ, ಪ್ಲಾಸ್ಟಿಕ್ ನಿಷೇಧಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಣ್ಣಯ್ಯನವರ ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ. ಕೆಂಪಯ್ಯ ಮಾತನಾಡಿ, ಭೂಮಿ ಮತ್ತು ವಿಶ್ವದ ಆರಂಭಿಕ ಅವಧಿಯಲ್ಲಿ ಪ್ರಕೃತಿ ಸಂಪತ್ತು ಹಾಗೂ ಜೀವ ಸಂಪತ್ತು ಸಮತೋಲನದಿಂದ ಅಸ್ತಿತ್ವದಲ್ಲಿದ್ದವು, ಕಾಲಕ್ರಮೇಣ ಜೀವ ಸಂಪತ್ತಿನಲ್ಲಿ ಮನುಷ್ಯನು ಬುದ್ಧಿವಂತಿಕೆಯೊಂದಿಗೆ ಅಭಿವೃದ್ಧಿ ಹೊಂದಿದ್ದರೂ, ತಂತ್ರಜ್ಞಾನ ಮತ್ತು ಮಾನವ ಚಟುವಟಿಕೆಗಳ ಹೆಚ್ಚಳದಿಂದ ಪರಿಸರ ಸಮತೋಲನದ ಹದಗೆಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಪರಿಸರದೊಂದಿಗೆ ಸ್ನೇಹ ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದ್ದು, ಇದರಿಂದ ಪ್ರಕೃತಿಯ ಮಧ್ಯೆ ನೆಮ್ಮದಿ ಮತ್ತು ಆರೋಗ್ಯಕರ ವಾತಾವರಣ ದೊರೆಯುತ್ತದೆ. ದೂರದ ಪ್ರದೇಶಗಳಿಗೆ ಪ್ರಯಾಣ ಮಾಡಿದರೂ ಸ್ವಾಭಾವಿಕ ಪರಿಸರ ನೀಡುವ ಅನುಭವ ವಿಭಿನ್ನವಾಗಿರುತ್ತದೆ. ಪ್ರಕೃತಿ ಎಲ್ಲರಿಗೂ ಸಮಾನವಾಗಿ ಸಂಪನ್ಮೂಲಗಳನ್ನು ಹಂಚುವ ಶಕ್ತಿಯಾಗಿದೆ. ಪರಿಸರ ಸಂರಕ್ಷಣೆಗೆ ಮಾದರಿಯಾಗಿರುವ ಸಾಲುಮರದ ತಿಮ್ಮಕ್ಕ ಅವರ ಉದಾಹರಣೆಯನ್ನು ಉಲ್ಲೇಖಿಸಿ, ಮರ ನೆಡುವ ಮೂಲಕ ಪರಿಸರ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಾಲುಮರದ ತಿಮ್ಮಕ್ಕ ಹಾಗೂ ರಾಮನಗರ ತಾಲೂಕಿನ ಅರಳ್ಳಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ (ಪರಿಸರ) ಸಾಲುಮರದ ನಿಂಗಣ್ಣ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಪಂಚಾಕ್ಷರಿ, ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎ. ಹಿದಾಯತ್ ಉಲ್ಲಾ ಷರೀಫ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಲೋಕೇಶ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಎಂ.ನಿವೇದಿತ , ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್. ಅವಿನಾಶ್ ಚಿಂದು , ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸಿ.ಪುಟ್ಟರಾಜ , ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್. ಸವಿತಾ, ಪ್ರಾದೇಶಿಕ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ರಾಮಕೃಷ್ಣಪ್ಪ , ಸಾಮಾಜಿಕ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ವಿ.ಎನ್. ಜಯರಾಮ್, ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರ್ , ಖಜಾಂಚಿ ಎಚ್.ಡಿ.ಜ್ಯೋತಿ , ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಮಂಜುನಾಥ, ಮಾತೃ ಫೌಂಡೇಶನ್ ಅಧ್ಯಕ್ಷ ಆರ್. ಚಂದ್ರಕುಮಾರ್, ಬಿ.ಟಿ. ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.
5ಕೆಆರ್ ಎಂಎನ್ 3.ಜೆಪಿಜಿ
ನಗರದ ಬಸವನಪುರದ ರಣಹದ್ದು ವನ್ಯಜೀವಿ ಧಾಮದ ಶ್ರೀ ರಾಮದೇವರ ಬೆಟ್ಟದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಣ್ಣಯ್ಯನವರ ಗಿಡ ನೆಟ್ಟರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.