ಶಾಲೆ, ಸರ್ಕಾರಿ ಕಚೇರಿಗಳ ಮೊದಲು ತಂಬಾಕು ಮುಕ್ತಗೊಳಿಸಿ

KannadaprabhaNewsNetwork |  
Published : Jun 18, 2026, 01:15 AM IST
ಚಿತ್ರದುರ್ಗ  ಮೂರನೇ ಪುಟದ ಬಾಟಂ     | Kannada Prabha

ಸಾರಾಂಶ

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಷಶ್ ವಿಶ್ವ ತಂಬಾಕು ರಹಿತ ದಿನದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯ ಶಾಲಾ-ಕಾಲೇಜು, ದೇವಸ್ಥಾನ ಹಾಗೂ ಸರ್ಕಾರಿ ಕಚೇರಿಗಳನ್ನು ತಂಬಾಕು ಮುಕ್ತ ವಲಯ ಎಂದು ಘೋಷಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದನ್ವಯ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಸಮನ್ವಯ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಂಬಾಕು ಉತ್ಪನ್ನಗಳ ನಿಯಂತ್ರಣ ಮತ್ತು ಕೋಟ್ಪಾ ಕಾಯ್ದೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸ್, ಆರೋಗ್ಯ, ಶಿಕ್ಷಣ ಮತ್ತು ಸ್ಥಳೀಯ ಸಂಸ್ಥೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು.

ಶಿಕ್ಷಣ ಇಲಾಖೆಯು ಜಿಲ್ಲೆಯ ಎಲ್ಲಾ ಶಾಲೆ ಹಾಗೂ ಕಾಲೇಜುಗಳ ಆವರಣವನ್ನು ಕಡ್ಡಾಯವಾಗಿ ‘ತಂಬಾಕು ಮುಕ್ತ ವಲಯ’ ಎಂದು ಘೋಷಿಸಬೇಕು. ವಿಶೇಷವಾಗಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳ ಆವರಣದಲ್ಲಿ ಯಾವುದೇ ರೀತಿಯ ತಂಬಾಕು ಬಳಕೆಗೆ ಅವಕಾಶ ನೀಡಬಾರದು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಕಚೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರು ತಂಬಾಕು ಪದಾರ್ಥಗಳನ್ನು ಬಳಸುವುದು ಕಂಡುಬಂದರೆ ಕ್ರಮ ಕೈಗೊಳ್ಳಬೇಕು ಹಾಗೂ ನಿರಂತರ ಮಾನಿಟರಿಂಗ್ ಮೂಲಕ ಜಾಗೃತಿ ಮೂಡಿಸಬೇಕು. ಕೋಟ್ಪಾ ಕಾಯ್ದೆಯಡಿ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದ್ದು, ವಿವಿಧ ಇಲಾಖೆಗಳ ಜಂಟಿ ಕಾರ್ಯಾಚರಣೆ ಮೂಲಕ ದಾಳಿಗಳನ್ನು ನಡೆಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಹಾಗೂ ನಿಯಮ ಬಾಹಿರವಾಗಿ ತಂಬಾಕು ಮಾರಾಟ ಮಾಡುವವರಿಗೆ ದಂಡ ವಿಧಿಸಲಾಗುತ್ತಿದ್ದು, ತಂಬಾಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕರಪತ್ರಗಳು ಮತ್ತು ಪೋಸ್ಟರ್‍ಗಳ ಮೂಲಕ ವ್ಯಾಪಕ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯ ತಂಬಾಕು ನಿಯಂತ್ರಣ ಕೋಶದ ವಿಭಾಗೀಯ ಸಂಯೋಜಕ ಮಹಂತೇಶ್ ಉಳ್ಳಾಗಡ್ಡಿ ಮಾತನಾಡಿ, ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡಿದರೆ ವಿಧಿಸಲಾಗುತ್ತಿದ್ದ ದಂಡದ ಮೊತ್ತವನ್ನು 200 ರಿಂದ 1,000 ರು. ಹೆಚ್ಚಿಸಲಾಗಿದೆ.

ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾತ್ರವಲ್ಲದೆ ಯಾವುದೇ ತಂಬಾಕು ಉತ್ಪನ್ನಗಳ ಬಳಕೆಯನ್ನೂ ನಿಷೇಧಿಸಲಾಗಿದೆ. ತಂಬಾಕು ಉತ್ಪನ್ನಗಳ ಖರೀದಿಯ ವಯೋಮಿತಿಯನ್ನು 18 ವರ್ಷದಿಂದ 21 ವರ್ಷಕ್ಕೆ ಏರಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ತಂಬಾಕು ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಬಾರ್ ಕೌಂಟರ್‌ಗಳ ಬಳಿ ಧೂಮಪಾನ ನಿಷೇಧದ ಫಲಕಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. 30ಕ್ಕಿಂತ ಹೆಚ್ಚು ಆಸನ ಸಾಮರ್ಥವಿರುವ ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ನಗರಸಭೆ ಅಥವಾ ಪಿಡಿಒ ಅವರಿಂದ ಅನುಮತಿ ಪಡೆದ ನಂತರವೇ ಪ್ರತ್ಯೇಕ ಧೂಮಪಾನ ವಲಯ ಗುರುತಿಸಲು ಅವಕಾಶ ನೀಡಲಾಗುವುದು. ಧೂಮಪಾನ ವಲಯಗಳಲ್ಲಿ ಯಾವುದೇ ರೀತಿಯ ಆಶ್ ಟ್ರೇ ಇಡಲು ಅವಕಾಶವಿಲ್ಲ. ಎಲ್ಲಾ ಪರವಾನಗಿ ಪಡೆದ ಮಳಿಗೆಗಳಲ್ಲಿ 21 ವರ್ಷದೊಳಗಿನವರಿಗೆ ತಂಬಾಕು ಮತ್ತು ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂಬ ಬೋರ್ಡ್‍ಗಳನ್ನು ಕಡ್ಡಾಯವಾಗಿ ಹಾಕಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ಸಭೆಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ವಿಶ್ವ ತಂಬಾಕು ರಹಿತ ದಿನದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಾಶೀ, ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ರೇಷ್ಮ ಹಾನಗಲ್, ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಲಕ್ಷ್ಮೀ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಧಿಕಾರಿಗಳಿಂದ ರೈತರಿಂದ ಅರ್ಜಿಗಳ ಸ್ವೀಕಾರ
ಕಾಮಗಾರಿಗೆ ಶಾಸಕ ಸುರೇಶ್‌ಗೌಡ ಚಾಲನೆ