ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಮೂಡಿಸಿ: ಜಿಲ್ಲಾಧಿಕಾರಿ ದಿವಾಕರ್

KannadaprabhaNewsNetwork |  
Published : Nov 15, 2024, 12:39 AM IST
11ಎಚ್‌ಪಿಟಿ3- ಹೊಸಪೇಟೆಯಲ್ಲಿ ಸೋಮವಾರ ನಡೆದ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಭೆಯನ್ನು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಉದ್ಘಾಟಿಸಿದರು.   | Kannada Prabha

ಸಾರಾಂಶ

ಮಕ್ಕಳ ಸಂಖ್ಯೆಯನ್ನು ಶೂನ್ಯಕ್ಕೆ ತರಲು ಎಲ್ಲ ಮುಖ್ಯೋಪಾಧ್ಯಾಯರು ಕ್ರಿಯಾಶೀಲರಾಗಬೇಕು.

ಹೊಸಪೇಟೆ: ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಮೂಡಿಸಿ, ವರ್ಷಾಂತ್ಯಕ್ಕೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಸಂಖ್ಯೆಯನ್ನು ಶೂನ್ಯಕ್ಕೆ ತರಲು ಎಲ್ಲ ಮುಖ್ಯೋಪಾಧ್ಯಾಯರು ಕ್ರಿಯಾಶೀಲರಾಗಬೇಕು. ಕಲಿಕೆ ಹಿಂದುಳಿವಿಕೆಯನ್ನು ಶೂನ್ಯಕ್ಕೆ ತರುವ ಶಾಲಾ ಶಿಕ್ಷಕರನ್ನು ಜನವರಿ ತಿಂಗಳಲ್ಲಿ ಸನ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.ನಗರದ ಕ್ರೀಡಾಂಗಣ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಜಿಲ್ಲಾ ಸಂಘ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಭೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಕ್ರಿಯಾಶೀಲರಾದಷ್ಟು ಫಲಿತಾಂಶ ಹೆಚ್ಚು ಬರಲು ಸಾಧ್ಯವಿದೆ. ಮುಖ್ಯೋಪಾಧ್ಯಾಯರು ಶಾಲೆಗಳಲ್ಲಿ ನಿರಾಸಕ್ತಿ ವಹಿಸಿದರೇ ಸಹ ಶಿಕ್ಷಕರು, ವಿದ್ಯಾರ್ಥಿಗಳ ಫಲಿತಾಂಶದ ಬಗ್ಗೆ ಗಮನಹರಿಸಲು ಸಾಧ್ಯವಿಲ್ಲ. ಹೊಸಪೇಟೆ ಶಾಲೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ಫಲಿತಾಂಶ ಕುಸಿದಿದೆ ಎಂದು ಕಾರಣ ನೀಡಲಾಗಿತ್ತು. ಆದರೆ ಒಪ್ಪಲಾಗದು, ಹೆಚ್ಚು ಸಿಬ್ಬಂದಿಗಳನ್ನು ನೀಡಿರುವ ಹೊಸಪೇಟೆ ತಾಲೂಕು ಶಿಕ್ಷಕರ ಕೊರತೆಗೂ, ಫಲಿತಾಂಶ ಕುಸಿತಕ್ಕೂ ಸಂಬಂಧವಿಲ್ಲ. ಯಾವುದೇ ಶಾಲೆಯಲ್ಲಿ ವಿಷಯ ಶಿಕ್ಷಕರ ಕೊರತೆ ಇದ್ದರೇ, ಮಾಹಿತಿ ನೀಡಿ ಪರಿಶೀಲಿಸಿ ಶೀಘ್ರವೇ ಅತಿಥಿ ಶಿಕ್ಷಕರನ್ನು ನಿಯೋಜಿಸಲು ಕ್ರಮ ವಹಿಸಲಾಗುವುದು ಎಂದರು.

ಜಿಲ್ಲೆಯ ಫಲಿಶಾಂಶ ಹೆಚ್ಚಿಸಲು ಜಿಲ್ಲಾಧಿಕಾರಿಯಾಗಿ ಹೆಚ್ಚು ನಿರೀಕ್ಷೆ ಇದಿಯೋ, ಅದೇ ರೀತಿ ನಿಮ್ಮ ಶಾಲೆಗಳಿಗೆ ಮೂಲಭೂತ ಸೌಕರ್ಯ ನೀಡಲು ಕೇಳುವ ಹಕ್ಕು ನಿಮಗಿದೆ. ಇಡೀ ಜಿಲ್ಲೆಯ ಒಂದೂ ಶಾಲೆಯು ಸಹ ಸೋರದಂತೆ ಕ್ರಮವಹಿಸಲು ಕಾರ್ಯೋನ್ಮುಖರಾಗಿದ್ದೇವೆ. ಅಷ್ಟೇ ಅಲ್ಲ ಅಗತ್ಯವಿದ್ದೆಡೆ ಹೊಸ ಕೊಠಡಿಗಳ ನಿರ್ಮಾಣ, ಶೌಚಾಲಯ ವ್ಯವಸ್ಥೆ ಸೇರಿದಂತೆ ಮೂಲಭೂತ ಸಮಸ್ಯೆಗಳನ್ನು ಗುರುತಿಸಿ ವಿಶೇಷವಾದ ಅನುದಾನಗಳನ್ನು ನೀಡಲಾಗಿದೆ. ಶಾಲೆಗಳನ್ನು ಸಹ ಶಿಕ್ಷಕರು, ಮುಖ್ಯಗುರುಗಳಿಗೆ ಸಹಕಾರ ನೀಡಬೇಕು. ಎಲ್ಲ ಮುಖ್ಯೋಪಾಧ್ಯಾಯರಿಗೆ ತುಂಬ ಅನುಭವವಿದೆ. ಶಾಲೆಯ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಕೌಶಲ್ಯ ನಿಮ್ಮಲ್ಲಿದೆ. ನಿಮಗೆ ಕೌಶಲ್ಯ ಅಭಿವೃದ್ಧಿ ಅಗತ್ಯವಿಲ್ಲ. ಆದರೆ ಫಲಿತಾಂಶ ಕುರಿತು ಚಿಂತನ, ಮಂಥನ ಮಾಡುವ ಸಭೆ ಇದಾಗಿದೆ ಎಂದರು.

ಸಭೆಯಲ್ಲಿ ನೋಡಲ್ ಅಧಿಕಾರಿ ಹುಲಿಬಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ, ಅಕ್ಷರ ದಾಸೋಹ ಜಿಲ್ಲಾಧಿಕಾರಿ ಶೇಖರ್‌ ಹೊರಪೇಟೆ, ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷೆ ಅಕ್ಕಮಹಾದೇವಿ, ಶಿಕ್ಷಣಾಧಿಕಾರಿ ಪರಸಪ್ಪ ಭಜಂತ್ರಿ ಸೇರಿದಂತೆ ಜಿಲ್ಲೆಯ ಅನುದಾನಿತ, ಅನುದಾನ ರಹಿತ ಶಾಲೆಗಳ ಪ್ರೌಢಶಾಲಾ ಮುಖ್ಯಗುರುಗಳು ಸಭೆಯಲ್ಲಿ ಭಾಗವಹಿಸಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌