ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನ ಕಲ್ಲಾಯ್ಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶಿವಮೂರ್ತಿ ಸಂಕೋಡನಹಳ್ಳಿ ಹಾಗೂ ಉಪಾಧ್ಯಕ್ಷರಾಗಿ ಚಂದ್ರಶೇಖರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಸಿ. ದೇವರಾಜು ಘೋಷಿಸಿದರು. ಕಲ್ಲಾಯ್ಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಗುರುವಾರ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 11 ನಿರ್ದೇಶಕರುಗಳ ಬಲವಿರುವ ಸಂಘದಲ್ಲಿ ನಿಕಟಪೂರ್ವ ಅಧ್ಯಕ್ಷರಾಗಿದ್ದ ವೀರಭದ್ರಪ್ಪ ಹಾಗೂ ಉಪಾಧ್ಯಕ್ಷರಾಗಿದ್ದ ಚಂದ್ರಪ್ಪ ಅವರು ಕ್ರಮವಾಗಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದು, ತೆರವಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಶಿವಮೂರ್ತಿ ಸಂಕೋಡನಹಳ್ಳಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರಪ್ಪ ಅವರುಗಳನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಶಿವಮೂರ್ತಿ ಸಂಕೋಡನಹಳ್ಳಿ ಅವರು ಅಧ್ಯಕ್ಷರಾಗಿ ಹಾಗೂ ಚಂದ್ರಶೇಖರಪ್ಪ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದರು. ಸಂಘದ ಎಲ್ಲಾ ನಿರ್ದೇಶಕರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು, ಸಂಘದ ಕೆಲವು ಷೇರುದಾರ ಸದಸ್ಯರುಗಳು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದಿಸಿ ಶುಭ ಕೋರಿದರು.ನೂತನ ಅಧ್ಯಕ್ಷ ಶಿವಮೂರ್ತಿ ಸಂಕೋಡನಹಳ್ಳಿ ಮಾತನಾಡಿ, ಸ್ಥಳೀಯ ಶಾಸಕ ಕೆ. ಎಂ. ಶಿವಲಿಂಗೇಗೌಡರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಕಲ್ಲಾಯ್ಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಉತ್ತಮವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ, ಸಂಘದ ಎಲ್ಲಾ ನಿರ್ದೇಶಕರುಗಳು ಹಾಗೂ ಷೇರುದಾರ ಸದಸ್ಯರ ವಿಶ್ವಾಸ ಮತ್ತು ಸಹಕಾರದೊಂದಿಗೆ ಸಂಘದ ಇನ್ನಷ್ಟು ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಉಪಾಧ್ಯಕ್ಷ ಚಂದ್ರಶೇಖರಪ್ಪ , ಜಾಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್. ಎಲ್. ಶೇಖರ್ ನಾಯ್ಕ್, ಮುಖಂಡರುಗಳಾದ ಅಂಬರೀಷ್ ಸಂಕೋಡನಹಳ್ಳಿ, ಶಶಿಧರ್ ಜಾಜೂರು, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯ ಜೆ. ಸಿ. ಸಿದ್ದೇಶ್, ಗಂಗಾಧರಪ್ಪ ಜಾಜೂರು, ಜೆ. ಆರ್. ಸಿದ್ದೇಶ್, ಉಮೇಶ್ ನಾಗತಿಹಳ್ಳಿ, ಓಂಕಾರಮೂರ್ತಿ ನಾಗತಿಹಳ್ಳಿ, ಗಂಗಾಧರಪ್ಪ ಚಿಕ್ಕೂರು, ಸಿದ್ದಮಲ್ಲಪ್ಪ, ನಿಕಟ ಪೂರ್ವ ಅಧ್ಯಕ್ಷ ವೀರಭದ್ರಪ್ಪ, ರವಿಕುಮಾರ್ ಹೊಸಹಳ್ಳಿ, ಕಲ್ಲಾಯ್ಕನಹಳ್ಳಿ ಸಿದ್ದಪ್ಪ, ಮರಿಯಪ್ಪ, ನೀಲಕಂಠಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.