ಸ್ವಚ್ಛತ, ಶುದ್ಧ ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಿ

KannadaprabhaNewsNetwork | Published : Jun 23, 2024 2:10 AM

ಸಾರಾಂಶ

ಮಳೆಯಿಂದಾಗುವ ಅನಾಹುತ ತಪ್ಪಿಸಲು ನಗರ ಪಾಲಿಕೆ ಮಾಡಿಕೊಂಡಿರುವ ಸಿದ್ಧತೆ ಕುರಿತು ಮಾಹಿತಿ ಪಡೆದರು. ದೊಡ್ಡ ಮಳೆ ನೀರು ಚರಂಡಿಯಲ್ಲಿ ಹೂಳು ಎತ್ತುವುದು, ಚರಂಡಿ ಸ್ವಚ್ಛಗೊಳಿಸುವುದು ಹಾಗೂ ಮಳೆ ನೀರು ಸರಾಗವಾಗಿ ಹೋಗಲು ಮತ್ತು ರಸ್ತೆಯಲ್ಲಿ ಮಳೆ ನೀರಿ ನಿಲ್ಲುವ ರಸ್ತೆ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕು. ಮಳೆ ನೀರು ಚರಂಡಿ ದುರಸ್ತಿಯಾಗಬೇಕಾದರೆ ಜರೂರಾಗಿ ದುರಸ್ತಿ ಮಾಡಿ.

ಕನ್ನಡಪ್ರಭ ವಾರ್ತೆ ಮೈಸೂರು

ಸ್ವಚ್ಛ ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡಬೇಕು ಹಾಗೂ ಕ್ಷೇತ್ರದಲ್ಲಿ ಕೆಟ್ಟಿರುವ ಬೋರ್ ವೆಲ್ ದುರಸ್ತಿ ಹಾಗೂ ಬೋರ್ ವೆಲ್ಕೊರೆಯಲು ಶಾಸಕ ಕೆ. ಹರೀಶ್ ಗೌಡ ಸೂಚಿಸಿದರು.

ನಗರ ಪಾಲಿಕೆಯ ಶ್ರೀ ಜಯಚಾಮರಾಜ ಒಡೆಯರ್ಸಭಾಂಗಣದಲ್ಲಿ ಶುಕ್ರವಾರ ನಡೆದ ಚಾಮರಾಜ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ನಗರ ಪಾಲಿಕೆ ಆಯುಕ್ತರು, ವಿವಿಧ ಶಾಖೆಯ ಅಧಿಕಾರಿ, ಸಿಬ್ಬಂದಿಯು ಚುನಾವಣಾ ನೀತಿ ಸಂಹಿತೆ ಮುಗಿದಿರುವುದರಿಂದ ಕ್ಷೇತ್ರದಲ್ಲಿನ ಕೆಲಸ, ಕಾಮಗಾರಿ ಕಡೆ ಗಮನ ನೀಡಿ ತ್ವರಿತಗತಿಯಲ್ಲಿ ಸಾರ್ವಜನಿಕ ಸಮಸ್ಯೆಯನ್ನು ಇಚ್ಛಾಶಕ್ತಿಯಿಂದ ಬಗೆಹರಿಸುವಂತೆ ಸೂಚಿಸಿದರು.

ಮಳೆಯಿಂದಾಗುವ ಅನಾಹುತ ತಪ್ಪಿಸಲು ನಗರ ಪಾಲಿಕೆ ಮಾಡಿಕೊಂಡಿರುವ ಸಿದ್ಧತೆ ಕುರಿತು ಮಾಹಿತಿ ಪಡೆದರು. ದೊಡ್ಡ ಮಳೆ ನೀರು ಚರಂಡಿಯಲ್ಲಿ ಹೂಳು ಎತ್ತುವುದು, ಚರಂಡಿ ಸ್ವಚ್ಛಗೊಳಿಸುವುದು ಹಾಗೂ ಮಳೆ ನೀರು ಸರಾಗವಾಗಿ ಹೋಗಲು ಮತ್ತು ರಸ್ತೆಯಲ್ಲಿ ಮಳೆ ನೀರಿ ನಿಲ್ಲುವ ರಸ್ತೆ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕು. ಮಳೆ ನೀರು ಚರಂಡಿ ದುರಸ್ತಿಯಾಗಬೇಕಾದರೆ ಜರೂರಾಗಿ ದುರಸ್ತಿ ಮಾಡಿಸಲು ಅವರು ಸೂಚಿಸಿದರು.

ಕೆಲವು ಪ್ರದೇಶಗಳಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದೆ. ಪ್ರತಿಯೊಂದು ವಾರ್ಡ್ಗಳಲ್ಲಿ ಫಾಗಿಂಗ್ಮಾಡಬೇಕು. ಮಳೆಯಿಂದ ಬೀಳಬಹುದಾದ ಮರಗಳ ರಂಬೆ, ಕೊಂಬೆ ಗುರುತಿಸಿ ಕತ್ತರಿಸಲು ಅವರು ಸೂಚಿಸಿದರು.

ಸ್ವಚ್ಛ ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡುವುದು ಹಾಗೂ ಕ್ಷೇತ್ರದಲ್ಲಿ ಕೆಟ್ಟಿರುವ ಬೋರ್ ವೆಲ್ ದುರಸ್ತಿ ಹಾಗೂ ಹೊಸ ಬೋರ್ವೆಲ್ಕೊರೆಯಬೇಕು. ಕ್ಷೇತ್ರದ ಜನರಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಲು ವಾಣಿವಿಲಾಸ ನೀರು ಪೂರೈಕೆ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.

ಕ್ಷೇತ್ರದಲ್ಲಿ ಯುಜಿಡಿ ಸಮಸ್ಯೆ ಹೆಚ್ಚಾಗಿದ್ದು, ಸಂಬಂಧಪಟ್ಟ ವಾರ್ಡಿನ ಎಂಜಿನಿಯರ್ಗಳು ಕಡ್ಡಾಯವಾಗಿ ವಾರ್ಡಿನ ಸಮಸ್ಯೆ ಗುರಿತಿಸಿ ತ್ವರಿತವಾಗಿ ಬಗೆಹರಿಸಬೇಕು ಎಂದು ಅವರು ಸೂಚಿಸಿದರು.

ಕ್ಷೇತ್ರದಲ್ಲಿ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಬೇಕು, ಕಸ ವಿಲೇವಾರಿ ಸಮರ್ಪಕವಾಗಿ ನಡೆಸಬೇಕು. ಈ ಬಗ್ಗೆ ದೂರು ಕೇಳಿ ಬಂದಿದೆ ಎಂದು ಆರೋಗ್ಯಾಧಿಕಾರಿ ಮತ್ತು ಮೇಸ್ತ್ರಿಗಳನ್ನು ಪ್ರಶ್ನಿಸಿದರು. ಅನೇಕ ಮುಖ್ಯ ರಸ್ತೆಗಳಲ್ಲಿಯೇ ರಾಶಿ ರಾಶಿ ಕಸ ಇದ್ದರೂ ಕೂಡ ಅದನ್ನು ಗಮನಿಸುತ್ತಿಲ್ಲ. ಪ್ರತನಿತ್ಯ ಸ್ವಚ್ಛತೆಗೆ ಹಾಗೂ ಕಸ ವಿಲೇವಾರಿ ಮಾಡುವಂತೆ ಅವರು ಸೂಚಿಸಿದರು.

ನಗರ ಪಾಲಿಕೆ ವತಿಯಿಂದ ಶೇ. 24.10 ಹಾಗೂ 7.25ರ ಯೋಜನೆಯ ಸೌಲಭ್ಯಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಫಲಾನುಭವಿಗಳ ಆಯ್ಕೆಯಲ್ಲಿ ಯಾವುದೇ ತಾರತಮ್ಯ ಮಾಡದೆ ಹಾಲಿ ಇರುವ ಅನುದಾನದಲ್ಲಿ ಸಾರ್ವಜನಿಕರಿಗೆ ಸಹಾಯಧನ ಹಾಗೂ ಪ್ರೋತ್ಸಾಹ ಧನ ತಲುಪಿಸಲು ಕ್ರಮವಹಿಸಬೇಕು ಎಂದು ಅವರು ಆಗ್ರಹಿಸಿದರು.

ಕ್ಷೇತ್ರದಲ್ಲಿನ ಕೆಲವು ಇಂದಿರಾ ಕ್ಯಾಂಟೀನ್ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವ ಕುರಿತು ದೂರು ಬಂದಿದ್ದು, ಕೂಡಲೇ ಸಂಬಂಧಪಟ್ಟವರು ಪ್ರತಿನಿತ್ಯ ಭೇಟಿ ನೀಡಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಆಹಾರ ಪೂರೈಸಬೇಕು ಎಂದರು.

ಸಭೆಯಲ್ಲಿ ನಗರ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್, ವಿವಿಧ ವಲಯ ಕಚೇರಿ ಆಯುಕ್ತರು ಇದ್ದರು.

Share this article