ಎಚ್‌.ವಿ.ವೀರೇಗೌಡರು ಸ್ಪೂರ್ತಿದಾಯಕ ರಾಜಕಾರಣಿ

KannadaprabhaNewsNetwork |  
Published : Jun 23, 2024, 02:10 AM IST
22ಕೆಎಂಎನ್ ಡಿ30 | Kannada Prabha

ಸಾರಾಂಶ

ಮಂಡ್ಯ ಕೆವಿಎಸ್‌ ಭವನದಲ್ಲಿ ಹಿರಿಯ ರಾಜಕಾರಣಿ ಮಳವಳ್ಳಿಯ ಎಚ್.ವಿ.ವೀರೇಗೌಡ ಅವರ ಜೀವನಾಧಾರಿತ ಹಳ್ಳಿಗಾಡಿನ ರೂವಾರಿ ಕೃತಿಯನ್ನು ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶ ಚಂದ್ರಶೇಖರಯ್ಯ ಲೋಕಾರ್ಪಣೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯಸ್ಫೂರ್ತಿದಾಯಕ ರಾಜಕಾರಣಿಯಾಗಿದ್ದ ಎಚ್‌.ವಿ.ವೀರೇಗೌಡರು ಸಮಾಜ ಸುಧಾರಕರಾಗಿ ಜನಮನ್ನಣೆಗಳಿಸಿದ್ದರು ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶ ಚಂದ್ರಶೇಖರಯ್ಯ ಶ್ಲಾಘಿಸಿದರು.ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಎಚ್.ವಿ.ವೀರೇಗೌಡ ಕುಟುಂಬ ವರ್ಗದಿಂದ ಆಯೋಜಿಸಿದ್ದ ಮಂಡ್ಯ ಜಿಲ್ಲೆಯ ಹಿರಿಯ ರಾಜಕಾರಣಿ ಮಳವಳ್ಳಿಯ ಎಚ್.ವಿ.ವೀರೇಗೌಡರ ಜೀವನಾಧಾರಿತ ಹಳ್ಳಿಗಾಡಿನ ರೂವಾರಿ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಎಚ್.ವಿ.ವೀರೇಗೌಡರು ಒಂದು ಬಾರಿ ವಿಧಾನಸಭಾ ಸದಸ್ಯರಾಗಿದ್ದರೂ ಅವರನ್ನು ರಾಜಕಾರಣಿ ಎನ್ನಲು ಸಾಧ್ಯವಿಲ್ಲ. ಸಮಾಜ ಸುಧಾರಕರಾಗಿ ಸಾಮಾಜಿಕವಾಗಿ ಹೋರಾಡಿದವರು. ವೀರೇಗೌಡರಂತಹ ಹತ್ತಾರು ವ್ಯಕ್ತಿಗಳು ಮತ್ತೆ ಹುಟ್ಟಿ ಬರಬೇಕು ಎಂದರು. ಚುನಾವಣೆಯಲ್ಲಿ ಕೇವಲ 12 ಸಾವಿರ ಖರ್ಚು ಮಾಡಿದ್ದ ವೀರೇಗೌಡರು ಎಂದೂ ರಾಜಕಾರಣಕ್ಕೆ ಅಂಟಿಕೊಂಡವರಲ್ಲ. ಜೊತೆಗೆ ತಮ್ಮ ಕುಟುಂಬದ ಯಾವೊಬ್ಬ ಸದಸ್ಯರಿಗೂ ರಾಜಕಾರಣ ಗೀಳು ಅಂಟಿಕೊಳ್ಳದಂತೆ ನೋಡಿಕೊಂಡರು.

ಇಂದು ನೂರಾರು ಕೋಟಿಗೂ ಮಿಗಿಲಾಗಿ ಖರ್ಚು ಮಾಡುವ ರಾಜಕಾರಣಿಗಳಿದ್ದಾರೆ. ಜೊತೆಗೆ ತಮ್ಮ ಕುಟುಂಬವೇ ರಾಜಕಾರಣದಲ್ಲಿ ಬೆಳೆಯಬೇಕು ಎಂಬ ಮನಸ್ಥಿತಿಯನ್ನು ಹೊಂದಿದ್ದಾರೆ. ಇಂತವರ ನಡುವೆ ವೀರೇಗೌಡರ ನಡೆ ಎಲ್ಲರಿಗೂ ಮಾದರಿ ಎಂದರು.ಕಾಂಗ್ರೆಸ್‌ ಮುಖಂಡ ಮರಿತಿಬ್ಬೇಗೌಡ ಮಾತನಾಡಿ, ಗಾಂಧೀಜಿ ತತ್ವಗಳನ್ನೇ ಬದುಕನ್ನಾಗಿ ಆಧರಿಸಿ ಸಹಕಾರಿ ಆಂದೋಲನ ಪ್ರಾರಂಭ ಮಾಡಿ ಎಷ್ಟೇ ಕಷ್ಟ ಬಂದರೂ ಸಮಾಜಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ದೊಡ್ಡ ವ್ಯಕ್ತಿತ್ವ ಹೆಚ್.ವಿ.ವೀರೇಗೌಡರದ್ದಾಗಿತ್ತು ಎಂದರು.

ಯಾರು ಜನರಿಗಾಗಿ ಬದುಕುತ್ತಾರೋ ಅವರೇ ನಿಜವಾದ ಶ್ರೇಷ್ಠ ಸೇವಕರು ಎನ್ನುವ ಸ್ವಾಮಿ ವಿವೇಕಾನಂದರ ವಾಣಿಯಂತೆ 1957 ರಲ್ಲಿ ಶಾಸಕರಾಗಿ ವೀರೇಗೌಡರು ಅಂದಿನ ಆರ್ಥಿಕ ಪರಿಸ್ಥಿತಿ, ನಾಡಿನ ಜನಜೀವನ ವ್ಯವಸ್ಥೆಗೆ ಹೊಂದಿಕೊಂಡು ತನ್ನ ಕುಟುಂಬವನ್ನೇ ಒಂದು ಕಡೆ ಇಟ್ಟು ಸ್ವಾತಂತ್ರ‍್ಯ ಚಳವಳಿಯಲ್ಲಿ ಭಾಗವಹಿಸಿದ ಕೀರ್ತಿ ಅವರದ್ದು ಎಂದು ತಿಳಿಸಿದರು.ಜೆಡಿಎಸ್‌ ಮುಖಂಡ ಡಿ.ಸಿ.ತಮ್ಮಣ್ಣ ಮಾತನಾಡಿ, ವೀರೇಗೌಡರ ಸೇವೆಯ ಮಹತ್ವವನ್ನು ದೇವಿಕಾ ಅವರು ಹೆಕ್ಕಿ ತೆಗೆದು ಅದಕ್ಕೆ ಹೊಳಪು ನೀಡಿ ಪ್ರಕಾಶಮಾನವಾಗಿ ಮಾಡಿದ್ದಾರೆ. ಇದರ ಉದ್ದೇಶ ಮುಂದಿನ ತಲೆಮಾರಿನವರು ನಮ್ಮ ಹಿರಿಯರ ಕೊಡುಗೆ ಏನಿದೆ? ಎಂಬುದನ್ನು ಅರಿಯುವ ಬಗ್ಗೆ ಈ ಕೃತಿ ಬೆಳಕು ಚೆಲ್ಲುತ್ತದೆ ಎಂದು ವಿವರಿಸಿದರು.

ಕೃತಿ ಕುರಿತು ಲೇಖಕ ಲೋಕೇಶ್‌ ಚಂದಗಾಲು ಮಾತನಾಡಿದರು. ಇದೇ ವೇಳೆ ಹಳ್ಳಿಗಾಡಿನ ರೂವಾರಿ ಕೃತಿ ಲೋಕಾರ್ಪಣೆ ಮಾಡಲಾಯಿತು. ಕೃತಿ ಕತೃ ಎನ್.ಎಸ್.ದೇವಿಕಾ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ವೀರೇಗೌಡರ ಹಿರಿಯ ಪುತ್ರ ಎಚ್.ವಿ.ಜಯರಾಮ್, ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶಗೌಡ, ಪದಾಧಿಕಾರಿಗಳಾದ ಅನಿತಾ, ಮಂಜುಳಾ ಉದಯಶಂಕರ್, ಕೆಂಪಮ್ಮ ಭಾಗವಹಿಸಿದ್ದರು.

PREV

Recommended Stories

ಕುಕ್ಕೆ ಸುಬ್ರಹ್ಮಣ್ಯದಲ್ಲಿ 40 ಸೇವೆಗಳ ದರ ಪರಿಷ್ಕರಣೆ
ಟಾಕ್ಸಿಕ್‌ ಮುಂಬೈ ಶೂಟ್‌ ಮುಗಿಸಿ ಲಂಡನ್‌ಗೆ ಹಾರಿದ ಯಶ್‌