ಹಗರಿಬೊಮ್ಮನಹಳ್ಳಿ: ಕಳೆದ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳೇ ತಾಲೂಕಿನ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಪಾರಮ್ಯ ಮೆರೆದಿದ್ದು, ಈ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಜಿಲ್ಲೆಯ ಪ್ರಥಮ ಮೂರೂ ಸ್ಥಾನಗಳನ್ನು ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳೇ ಬಾಚುವಂತಾಗಬೇಕು ಎಂದು ಶಾಸಕ ನೇಮರಾಜ್ ನಾಯ್ಕ್ ಆಶಿಸಿದರು.
ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಈಗಾಗಲೇ ಒಂದು ನೂರು ಕೋಟಿಗೂ ಹೆಚ್ಚು ಅನುದಾನ ಒದಗಿಸಿ ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆ. ಶಾಸಕರ ಅನುದಾನದಡಿ ಸುಮಾರು ೩ ಸಾವಿರ ಮಕ್ಕಳು ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಹಿಂದಿನ ಕಾಲದಲ್ಲಿ ಶಿಕ್ಷಣ ಕೆಲವೇ ಜನರಿಗೆ ಸೀಮಿತವಾಗಿದೆ. ಅಗತ್ಯ ಸೌಲಭ್ಯಗಳ ಕೊರತೆ ಸದಾ ಕಾಡುತ್ತಿತ್ತು ಆದರೆ, ಈಗ ಸರ್ಕಾರ ಮಕ್ಕಳಿಗೆ ಬಿಸಿಯೂಟ, ಸಮವಸ್ತ್ರ, ಮೊಟ್ಟೆ, ಹಾಲು, ಬಾಳೆಹಣ್ಣು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದರು.ಪೋಷಕರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕಷ್ಟಪಟ್ಟು ದುಡಿದು ಶಾಲೆಗೆ ಕಳುಹಿಸುತ್ತಿದ್ದಾರೆ. ಅವರ ನಿರೀಕ್ಷೆಗಳಿಗೆ ತಕ್ಕಂತೆ ಉತ್ತಮ ಶಿಕ್ಷಣ ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಕೂಡ ಮೊಬೈಲ್‌ಗಳ ಬಳಕೆಯನ್ನು ಕಡಿಮೆ ಮಾಡಿ ಪುಸ್ತಕಗಳತ್ತ ಹೆಚ್ಚು ಗಮನ ಹರಿಸುವ ಮೂಲಕ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಬೇಕು ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಆರ್. ಕವಿತಾ, ತಾಪಂ ಇಒ ಪಿ.ವಿಶ್ವನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಜಗದೀಶ್, ಕ್ಲಸ್ಟರ್ ಬಿಆರ್‌ಸಿ ಕನಕಪ್ಪ ಮಾತನಾಡಿದರು.