ರಾಜ್ಯದಲ್ಲಿ ಶಾಲೆ ಪುನಾರಂಭ: ಮಕ್ಕಳಲ್ಲಿ ಸಂಭ್ರಮ!

KannadaprabhaNewsNetwork |  
Published : Jun 02, 2026, 02:15 AM IST
ಶಾಲಾರಂಭ | Kannada Prabha

ಸಾರಾಂಶ

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೋಮವಾರದಿಂದ ರಾಜ್ಯಾದ್ಯಂತ ಪುನಾರಂಭಗೊಂಡಿವೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ನಿಗದಿಯಂತೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೋಮವಾರದಿಂದ ರಾಜ್ಯಾದ್ಯಂತ ಪುನಾರಂಭಗೊಂಡಿದ್ದು, ಈ ಶೈಕ್ಷಣಿಕ ವರ್ಷದ ಮೊದಲ ದಿನದಂದು ಶಾಲೆಗಳನ್ನು ತಳಿರು-ತೋರಣಗಳಿಂದ ಸಿಂಗಾರ ಮಾಡಿ, ರಂಗೋಲಿ ಬಿಡಿಸಿ, ಮಕ್ಕಳಿಗೆ ಗುಲಾಬಿ ನೀಡಿ, ಸಿಹಿ ಹಂಚಿ ಹಬ್ಬದ ರೀತಿಯಲ್ಲಿ ಸಡಗರ-ಸಂಭ್ರಮದಿಂದ ಸ್ವಾಗತಿಸಲಾಯಿತು.

ಬೆಂಗಳೂರಿನಲ್ಲಿ ಮಹಾಲಕ್ಷ್ಮಿ ಲೇಔಟ್‌ನ ಕರ್ನಾಟಕ ಪಬ್ಲಿಕ್‌ ಶಾಲೆಯ ಮಕ್ಕಳನ್ನು ಸ್ಥಳೀಯ ಶಾಸಕ ಗೋಪಾಲಯ್ಯ ಹೂ ನೀಡಿ, ಸಿಹಿ ಹಂಚಿ ಸ್ವಾಗತಿಸಿದರು. ಮೈಸೂರು ತಾಲೂಕಿನ ರಟ್ನಹಳ್ಳಿಯಲ್ಲಿ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವವನ್ನು ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸಿದರು. ಈ ವೇಳೆ, ಜಿ.ಟಿ.ದೇವೇಗೌಡರು ಎತ್ತಿನ ಗಾಡಿಯಲ್ಲಿ ಮಕ್ಕಳನ್ನು ಮೆರವಣಿಗೆ ಮೂಲಕ ಕರೆ ತಂದರು. ಗದಗ ತಾಲೂಕಿನ ಅಸುಂಡಿಯ ಕುವೆಂಪು ಶತಮಾನೋತ್ಸವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಕೂರಿಸಿಕೊಂಡು ಮೆರವಣಿಗೆ ಮೂಲಕ ಶಾಲೆಗೆ ಕರೆತರಲಾಯಿತು. ಮೆರವಣಿಗೆಯುದ್ದಕ್ಕೂ ಗ್ರಾಮಸ್ಥರು ಮಕ್ಕಳನ್ನು ಹರ್ಷೋದ್ಘಾರಗಳೊಂದಿಗೆ ಸ್ವಾಗತಿಸಿದರು.

ಗದಗಿನ ವಿಶ್ವಕಲ್ಯಾಣ, ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ವಿಶೇಷ ಮಕ್ಕಳಿಗೆ ಗುಲಾಬಿ ಹೂವು ಹಾಗೂ ಸಿಹಿ ತಿನ್ನಿಸುವುದರ ಮೂಲಕ ಸ್ವಾಗತಿಸಲಾಯಿತು. ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದ ಶಾಲೆಗಳಲ್ಲಿ ಮಕ್ಕಳು, ಅಧಿಕಾರಿಗಳನ್ನು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ಶಾಲೆಗೆ ಬರಮಾಡಿಕೊಳ್ಳಲಾಯಿತು. ನವವಧುವಿನಂತೆ ಸಿಂಗಾರಗೊಂಡ ಶಾಲೆಗಳಿಗೆ ಹೊಸ ಬಟ್ಟೆಗಳನ್ನುಟ್ಟು ಆಗಮಿಸಿದ ಶಿಕ್ಷಕ/ಶಿಕ್ಷಕಿಯರು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಶಿವಮೊಗ್ಗದ ದುರ್ಗಿಗುಡಿಯಲ್ಲಿರುವ ಸರ್ಕಾರಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ಹೂವು, ಚಾಕೋಲೆಟ್‌ ಕೊಟ್ಟು, ಆರತಿ ಬೆಳಗಿ ಸ್ವಾಗತಿಸಿದರು. ಚಾಮರಾಜನಗರದ ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜಿನ ಪ್ರೌಢಶಾಲಾ ವಿಭಾಗದ ಮಕ್ಕಳನ್ನು ಸಾರೋಟಿನಲ್ಲಿ ಕರೆ ತರಲಾಯಿತು.

ಚಿತ್ರದುರ್ಗ ಜಿಲ್ಲೆ ಯಳಗೋಡು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ಪುಸ್ತಕ ಹಾಗೂ ಗುಲಾಬಿ ಹೂ ನೀಡಿ ಸೋಮವಾರ ಶಿಕ್ಷಕರು ಆತ್ಮೀಯವಾಗಿ ಸ್ವಾಗತಿಸಿದರು. ಮಕ್ಕಳಿಗೆ ಸ್ವಾಗತ ಕೋರುವ ಫ್ಲೆಕ್ಸ್‌, ಬ್ಯಾನರ್‌ನ್ನು ಶಾಲೆಯ ಮುಖ್ಯದ್ವಾರದಲ್ಲಿ ಹಾಕಲಾಗಿತ್ತು. ಮೈಸೂರಿನ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಸಕ ಕೆ.ಹರೀಶ್ ಗೌಡ ಅವರು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸ್ಕೂಲ್ ಬ್ಯಾಗ್‌ ವಿತರಿಸಿ ಶುಭಾಶಯ ಕೋರಿದರು.

ಪಠ್ಯಪುಸ್ತಕ ಅರ್ಧ ಬಂದಿವೆ, ಸಮವಸ್ತ್ರ, ಶೂ, ಸಾಕ್ಸ್‌ ಬಂದಿಲ್ಲ:

ಸರ್ಕಾರಿ ಶಾಲೆಗಳು ಆರಂಭವಾದರೂ ಸರ್ಕಾರದಿಂದ ಮಕ್ಕಳಿಗೆ ಉಚಿತವಾಗಿ ನೀಡುವ ಪಠ್ಯಪುಸ್ತಕಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಶಾಲೆಗಳಿಗೆ ತಲುಪಿಲ್ಲ. ಸಮವಸ್ತ್ರ ಮತ್ತು ಶೂ ಸಾಕ್ಸ್‌ ಇನ್ನೂ ಬಂದಿಲ್ಲ.ವಿವಿಧ ಶಾಲಾ ಮುಖ್ಯಶಿಕ್ಷಕರನ್ನು ಮಾತನಾಡಿಸಿದಾಗ, ಕೆಲ ಶಾಲೆಗಳಿಗೆ ಶೇ.50 ರಷ್ಟು ಮಾತ್ರ ಪುಸ್ತಕಗಳು ಬಂದಿದ್ದರೆ, ಇನ್ನು ಕೆಲ ಶಾಲೆಗಳಿಗೆ ಶೇ.30ರಷ್ಟು ಮಾತ್ರ ಸರಬರಾಜಾಗಿವೆ ಎಂಬುದು ತಿಳಿದು ಬಂತು. ಗ್ರಾಮೀಣ ಭಾಗದಲ್ಲಿ ಇನ್ನೂ ಕೆಲ ಶಾಲೆಗಳಿಗೆ ಪಠ್ಯಪುಸ್ತಕ ಸರಬರಾಜು ಆಗಿಲ್ಲ. ಪಠ್ಯಪುಸ್ತಕಗಳು ತಾಲೂಕು ಗೋಡೌನ್‌ಗಳಿಗೆ ತಲುಪಿದರೂ ಅಲ್ಲಿಂದ ಶಾಲೆಗಳಿಗೆ ಸರಬರಾಜಾಗುವುದು ತಡವಾಗುತ್ತಿದೆ ಎನ್ನಲಾಗಿದೆ.

ಕರ್ನಾಟಕ ಪಠ್ಯಪುಸ್ತಕ ಸಂಘದ ಅಧಿಕಾರಿಗಳು ಹೇಳುವ ಪ್ರಕಾರ, ಬಹುತೇಕ ಪುಸ್ತಕಗಳು ಆಯಾ ತಾಲೂಕು ಗೋದಾಮುಗಳಿಗೆ ಸರಬರಾಜಾಗಿದ್ದು, ಅಲ್ಲಿಂದ ಶಾಲೆಗಳಿಗೆ ಸರಬರಾಜು ಮಾಡುವ ಜವಾಬ್ದಾರಿ ಬಿಇಒಗಳದ್ದಾಗಿದೆ. ಪಠ್ಯಪುಸ್ತಕವನ್ನು ಪೂರ್ಣ ಪ್ರಮಾಣದಲ್ಲಿ ಸರಬರಾಜು ಮಾಡಲು ಜೂ.15ರ ವರೆಗೆ ಕಾಲಾವಕಾಶವಿದೆ. ಅಷ್ಟರಲ್ಲಿ ತಲುಪದೆ ಇದ್ದರೆ ದೂರು ನೀಡಬಹುದು.

ಈ ಮಧ್ಯೆ, ಸರ್ಕಾರ ಪ್ರಸಕ್ತ ಸಾಲಿನಲ್ಲಿ ಶೂ, ಸಾಕ್ಸ್‌ ಖರೀದಿಗೆ ಆಯಾ ಶಾಲಾ ಎಸ್‌ಡಿಎಂಸಿಗಳಿಗೆ ಹಣ ನೀಡುವ ಬದಲು ತಾನೇ ಏಕೀಕೃತ ಟೆಂಡರ್‌ ಕರೆದು ಸರಬರಾಜು ಮಾಡುತ್ತಿದೆ. ಟೆಂಡರ್‌ ಪ್ರಕ್ರಿಯೆ ತಡವಾಗಿರುವುದರಿಂದ ಇನ್ನೂ ಕೂಡ ಮಕ್ಕಳಿಗೆ ಶೂ, ಸಾಕ್ಸ್‌ ಸಿಕ್ಕಿಲ್ಲ. ಶೇ.50ರಿಂದ 60ರಷ್ಟು ಪ್ರಮಾಣದ ಸಮವಸ್ತ್ರ ಮಾತ್ರ ಇದುವರೆಗೆ ಬಿಇಒ ಕಚೇರಿಗಳಿಗೆ ತಲುಪಿವೆ. ಇನ್ನೂ, ಶೇ.40ರಷ್ಟು ಪೂರೈಕೆಯಾಗಬೇಕಿದೆ. ಇದರಿಂದ ಸದ್ಯಕ್ಕೆ ಹಿಂದಿನ ವರ್ಷದ ಸಮವಸ್ತ್ರವನ್ನೇ ಧರಿಸಿ ಮಕ್ಕಳು ಶಾಲೆಗೆ ಬಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿವೇಶನ ಹಂಚಿಕೆಗಾಗಿ ಪಟ್ಟಣ ಪಂಚಾಯಿತಿಗೆ ಮುತ್ತಿಗೆ
ಜಿಲ್ಲಾದ್ಯಂತ ಶಾಲೆಗಳ ಪ್ರಾರಂಭೋತ್ಸವ