ಮೂಲಭೂತ ಸೌಕರ್ಯ ಒದಗಿಸಿ ಜಾತ್ರೆ ಯಶಸ್ವಿಗೊಳಿಸಿರಿ

KannadaprabhaNewsNetwork | Published : Dec 5, 2024 12:30 AM

ಸಾರಾಂಶ

ಬರುವ ಜ.13 ರಂದು ನಡೆಯಲಿರುವ ದಕ್ಷಿಣ ಭಾರತದ ದೊಡ್ಡ ಜಾತ್ರೆಯಾಗಿರುವ ಸುಕ್ಷೇತ್ರ ಬಾದಾಮಿ ಬನಶಂಕರಿದೇವಿ ಜಾತ್ರೆಗೆ ಆಗಮಿಸುವ ಎಲ್ಲ ಭಕ್ತರಿಗೆ ಸೌಲಭ್ಯಗಳನ್ನು ಒದಗಿಸುವ ಮೂಲಕ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ಜವಾಬ್ದಾರಿ ವಹಿಸಿ ಯಶಸ್ವಿಗೊಳಿಸಬೇಕು ಎಂದು ಬಾದಾಮಿ ಮತಕ್ಷೇತ್ರದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಬರುವ ಜ.13 ರಂದು ನಡೆಯಲಿರುವ ದಕ್ಷಿಣ ಭಾರತದ ದೊಡ್ಡ ಜಾತ್ರೆಯಾಗಿರುವ ಸುಕ್ಷೇತ್ರ ಬಾದಾಮಿ ಬನಶಂಕರಿದೇವಿ ಜಾತ್ರೆಗೆ ಆಗಮಿಸುವ ಎಲ್ಲ ಭಕ್ತರಿಗೆ ಸೌಲಭ್ಯಗಳನ್ನು ಒದಗಿಸುವ ಮೂಲಕ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ಜವಾಬ್ದಾರಿ ವಹಿಸಿ ಯಶಸ್ವಿಗೊಳಿಸಬೇಕು ಎಂದು ಬಾದಾಮಿ ಮತಕ್ಷೇತ್ರದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಪಟ್ಟಣದ ತಾ.ಪಂ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬನಶಂಕರಿದೇವಿ ಜಾತ್ರೆಯ ಪೂರ್ವಭಾವಿ ಸಭೆಯ ತಾಲೂಕಾಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ಬಾರಿಯೂ ಜಾತ್ರೆಯೂ ಅತ್ಯಂತ ಯಶಸ್ವಿಗೊಳಿಸಬೇಕು. ಎಲ್ಲ ಇಲಾಖೆಯ ಅಧಿಕಾರಿಗಳು ಜೊತೆಯಾಗಿ ಉತ್ತಮವಾಗಿ ಜಾತ್ರೆ ಮಾಡಬೇಕು. ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಮೊಬೈಲ್ ಶೌಚಾಲಯ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಮಾಡಬೇಕು. ಬರುವ ಭಕ್ತರಿಗೆ ಸ್ನಾನಕ್ಕೆ ಅನುಕೂಲವಾಗುವಂತೆ ಬನಶಂಕರಿ ಹೊಂಡಕ್ಕೆ ನೀರು ಬಿಡಿಸಲು ಎಂ.ಎಲ್.ಬಿ.ಸಿ ಅಧಿಕಾರಿಗಳಿಗೆ ಸೂಚಿಸಿದರು.

ಶ್ರೀ ಬನಶಂಕರಿ ಟ್ರಸ್ಟ್ ಕಮಿಟಿಯವರು ದೇವಸ್ಥಾನ ಸುತ್ತ-ಮುತ್ತಲು ಭದ್ರತೆ ವ್ಯವಸ್ಥೆ, ಎಲ್.ಇ.ಡಿ ವ್ಯವಸ್ಥೆ ಮಾಡಬೇಕು. ಆರೋಗ್ಯ ಇಲಾಖೆಯವರು ಸ್ವಚ್ಛತೆ ಬಗ್ಗೆ ಪ್ರತಿದಿನ ಮೇಲ್ವಿಚಾರಣೆ ಮಾಡಬೇಕು. ಜಾತ್ರೆಯ ನೀಲನಕ್ಷೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ಮಾತನಾಡಿ, ಬನಶಂಕರಿ ದೇವಸ್ಥಾನ ಕಮಿಟಿ, ಜಿಲ್ಲಾಡಳಿತ, ತಾಲೂಕಾಡಳಿತ, ಗ್ರಾಪಂ ವತಿಯಿಂದ ನಡೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಬೇಕು. ಜ.13 ರಂದು ನಡೆಯಲಿರುವ ಜಾತ್ರೆಗೆ ಅವಶ್ಯಕವಾದ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಿ ಕ್ರಮವಹಿಸಬೇಕು. ಪ್ರತಿ ವರ್ಷದಂತೆ ಈ ವರ್ಷವೂ ತಯಾರಿ ಮಾಡಬೇಕು. ಸ್ವಚ್ಛತೆ, ವಾಹನ ನಿಲುಗಡೆಗೆ ಸ್ಥಳ ತಯಾರಿ, ಕುಡಿಯುವ ನೀರಿನ ಸೌಕರ್ಯ, ವಿದ್ಯುತ್ ಸಂಪರ್ಕ, ಕಾರ್ಮಿಕರ ಬಳಕೆ, ಶೌಚಾಲಯ ವ್ಯವಸ್ಥೆ ಮಾಡಬೇಕಾಗಿದೆ. ಸಿಸಿ ಕ್ಯಾಮೆರಾ ಅಳವಡಿಕೆ, ಮಾರಾಟ ಮಳಿಗೆ ಪೆಂಡಾಲ್‌ ವ್ಯವಸ್ಥೆ ಮಾಡಬೇಕಾಗಿದೆ ಎಂದು ತಿಳಿಸಿದರು.ಬಾದಾಮಿಯಿಂದ ಬನಶಂಕರಿಯವರೆಗೆ ವಿದ್ಯುತ್ ದೀಪ ವ್ಯವಸ್ಥೆ ಮಾಡಬೇಕು. ಜಾತ್ರೆಯ ಯಶಸ್ವಿಗಾಗಿ ಕ್ರಿಯಾ ಯೋಜನೆ ತಯಾರಿಸಿ ಕೊಡಲು ಸೂಚಿಸಿದರು. ಎನ್.ಒ.ಸಿ ಪಡೆದು ಹೆಸ್ಕಾಂ, ಸ್ಥಳೀಯ ಆಡಳಿತದವರು ಜಾಗ ನೀಡಿ ಅಂಗಡಿ ಹಾಕಬೇಕು. ಮೇಲ್ವಿಚಾರಣೆ ಮಾಡಬೇಕು. ಸಂಕ್ರಮಣ ಇರುವುದರಿಂದ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಸ್ನಾನಕ್ಕಾಗಿ ಹೊಂಡದಲ್ಲಿ ನೀರು ಬಿಡಸಬೇಕು. ಸ್ವಯಂಸೇವಕರನ್ನು ನೇಮಿಸಬೇಕು. ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಭಕ್ತರಿಗೆ ಕುಡಿಯುವ ನೀರು, ಶೌಚಾಲಯ, ವಸತಿ ವ್ಯವಸ್ಥೆ ಮಾಡಬೇಕು. ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ, ಹೆಚ್ಚಿನ ಪೊಲೀಸ್ ವ್ಯವಸ್ಥೆ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.ಘಟಕ ವ್ಯವಸ್ಥಾಪಕ ಎನ್.ಬಿ.ಕೋರಿ ಮಾತನಾಡಿ, ಈಗಾಗಲೇ ಘಟಕದಲ್ಲಿ 82 ಬಸ್‌ಗಳಿದ್ದು, ಹೆಚ್ಚುವರಿಯಾಗಿ ಬೇರೆ ಘಟಕದಿಂದ ಹೆಚ್ಚುವರಿಯಾಗಿ 25 ಬಸ್‌ಗಳನ್ನು ವ್ಯವಸ್ಥೆಗೊಳಿಸಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್‌ ಮಧೂರಾಜ್, ತಾಪಂ ಇಒ ಸುರೇಶ ಕೊಕೇರಿ, ಚೊಳಚಗುಡ್ಡ ಗ್ರಾಪಂ ಅಧ್ಯಕ್ಷೆ ರಕ್ಷಿತಾ ಮರಡಿತೋಟದ, ಡಾ.ಎಂ.ಎಚ್.ಚಲವಾದಿ, ಮಲ್ಲಿಕಾರ್ಜುನ ಬಡಿಗೇರ ಹಾಜರಿದ್ದರು. ಸಭೆಯಲ್ಲಿ ಪುರಸಭೆ ಸದಸ್ಯ ಮಂಜುನಾಥ ಹೊಸಮನಿ, ಬನಶಂಕರಿ ಟ್ರಸ್ಟ್ ಕಮಿಟಿ ಸದಸ್ಯರು, ಪುರಸಭೆ ಮುಖ್ಯಾಧಿಕಾರಿ ಬಂದೇನಮಾಜ ಡಾಂಗೆ, ಟಿ.ಎಚ್.ಒ.ಡಾ.ಎಂ.ಬಿ.ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಪಶುಸಂಗೋಪನಾ ಇಲಾಖೆಯ ಶ್ರೀಕಾಂತ ಸಬನೀಸ್, ಗುಳೇದಗುಡ್ಡ ತಾ.ಪಂ ಇಒ ಮಲ್ಲಿಕಾರ್ಜುನ ಬಡಿಗೇರ, ಚೊಳಚಗುಡ್ಡ ಗ್ರಾ.ಪಂ ಸದಸ್ಯ ವಿರುಪಾಕ್ಷಗೌಡ ಪಾಟೀಲ, ಅಶೋಕ ಅಂಬಿಗೇರ, ಚಿದಾನಂದ ಮೆಣಸಗಿ, ವಿರೇಶ ಅಂಗಡಿ, ಪ್ರಕಾಶ ದೇಸಾಯಿ, ಮುಖಂಡರಾದ ಬಸವರಾಜ ಹಂಪಿಹೊಳಿ, ಪೂಜಾರ ಕುಟುಂಬದವರು ಸೇರಿದಂತೆ ತಾಲೂಕಾಮಟ್ಟದ ಅಧಿಕಾರಿಗಳು ಹಾಜರಿದ್ದರು. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಮತ್ತು ಸರ್ಕಾರದ ಸಾಧನೆಗಳ ಬಗ್ಗೆ ಬನಶಂಕರಿ ಜಾತ್ರೆಯಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲು ಜಾಗೃತಿ ಸ್ಟಾಲ್‌ಗಳನ್ನು ಹಾಕಬೇಕು. ಗೈರು ಹಾಜರಾದ ಅಧಿಕಾರಿಗಳಿಗೆ ಕಾರಣ ಕೇಳುವ ನೋಟಿಸ್ ನೀಡಿರಿ.

-ಭೀಮಸೇನ ಚಿಮ್ಮನಕಟ್ಟಿ, ಶಾಸಕರು ಬಾದಾಮಿ.

ಜಾನುವಾರುಗಳಿಗೆ ಚರ್ಮ ಗಂಟಲು ಸಾಂಕ್ರಾಮಿಕ ರೋಗ ಇರುವುದರಿಂದ ಬೇರೆ ಜಿಲ್ಲೆಯ ಜಾನುವಾರುಗಳು ಭಾಗವಹಿಸದಂತೆ ಮಾಡಿ ಜಿಲ್ಲೆಯ ಜಾನುವಾರುಗಳು ಮಾತ್ರ ಭಾಗವಹಿಸುವಂತಾಗಬೇಕು.

-ಡಾ.ಶ್ರೀಕಾಂತ ಸಬನೀಸ್, ಸಹಾಯಕ ನಿರ್ದೇಶಕ ಪಶುಪಾಲನಾ ಇಲಾಖೆ ಬಾದಾಮಿ.

Share this article