ಅವಕಾಶ ಸದ್ಬಳಿಸಿಕೊಂಡು ಸಾಧನೆ ಮಾಡಿ: ಶಾಸಕ ಬೇಳೂರು ಗೋಪಾಲಕೃಷ್ಣ

KannadaprabhaNewsNetwork | Published : Aug 26, 2024 1:33 AM

ಸಾರಾಂಶ

ಹೊಸನಗರ ತಾಲೂಕಿನಲ್ಲಿ ಅತೀ ಹೆಚ್ಚು ಅಂಕ ಪಡೆದು ಕಾಲೇಜಿನ ಕೀರ್ತಿ ಪತಾಕೆ ಹಾರಿಸಿ ಸನ್ಮಾನ ಪಡೆದ ವಿದ್ಯಾರ್ಥಿಗಳೊಂದಿಗೆ ಶಾಸಕ ಬೇಳೂರು ಗೋಪಾಲಕೃಷ್ಣ

ಕನ್ನಡಪ್ರಭ ವಾರ್ತೆ ಹೊಸನಗರ

ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಅವಕಾಶ ಸಿಕ್ಕಾಗ ಬಳಸಿಕೊಂಡು ಸಾಧನೆ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆಯುವ ಮಕ್ಕಳಿಗೂ ಇಂದು ಅವಕಾಶಗಳಿಗೆ ಕೊರತೆಯಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಷ್ಟರ ಮಟ್ಟಿಗೆ ಬೆಳೆಯುಷ್ಟು ಅವಕಾಶಗಳಿವೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ವಿದ್ಯಾರ್ಥಿಗಳಿಗೆ ತಿಳಿಸಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಯ ಈಡಿಗರ ಭವನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಜೀವನವು ಅಮೂಲ್ಯವಾದದ್ದು ಅದನ್ನು ಹೆಚ್ಚಾಗಿ ಸಂಸ್ಕ್ರತಿ ಹಾಗೂ ಸಂಪ್ರದಾಯಗಳನ್ನು ಮೈಗೂಡಿಸಿಕೊಳ್ಳಿ. ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳು ಅಧ್ಯಯನಕ್ಕೆ ಮಾತ್ರ ಮಹತ್ವ ನೀಡಬೇಕು. ಈ ಪುರಸ್ಕಾರ ಕಾರ್ಯಕ್ರಮವು ಸ್ಪೂರ್ತಿಯಾಗಿ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಎಲ್ಲಾ ವಿದ್ಯಾರ್ಥಿಗಳು ಪರಿಶ್ರಮದಿಂದ ಓದಿ ಅವಕಾಶವನ್ನು ಕಲ್ಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಬಳಸುವುದು ಕಡಿಮೆ ಮಾಡಬೇಕು. ಸಂಸ್ಕೃತಿ ಮತ್ತು ಆಚಾರ, ವಿಚಾರ, ಸಂಪ್ರದಾಯ ಮೈಗೂಡಿಸಿಕೊಂಡು ಮುಂದಿನ ಜೀವನ ಉಜ್ವಲ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು. ಮೊಬೈಲ್ ಗೀಳಿಗೆ ಮಕ್ಕಳು ಬಲಿಯಾಗುತ್ತಿದ್ದಾರೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ದೂರು. ಆದರೆ ವೈಜ್ಞಾನಿಕವಾಗಿ ದಿನೇ ದಿನೇ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ತಮ್ಮ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು. ಮೊಬೈಲ್‌ ಅನ್ನು ದೂರುತ್ತಾ ಕುಳಿತರೆ ಫಲವಿಲ್ಲ. ಸದುದ್ದೇಶದೊಂದಿಗೆ ಮಿತವಾಗಿ ಬಳಸಿಕೊಳ್ಳುವ ಜಾಣ್ಮೆಯನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪೋಷಕರು ತಮ್ಮ ಮಕ್ಕಳ ಯಶಸ್ಸಿನ ಕುರಿತು ಅದೆಷ್ಟೋ ಕನಸು ಕಂಡಿರುತ್ತಾರೆ. ಗುರು-ಹಿರಿಯರು ಸಹಾ ವಿದ್ಯಾರ್ಥಿಗಳ ಒಳಿತನ್ನು ಬಯಸಿರುತ್ತಾರೆ. ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಅದು ಹುಸಿಯಾಗದಂತೆ ನೋಡಿಕೊಳ್ಳುವುದು ಪ್ರತಿ ವಿದ್ಯಾರ್ಥಿಯ ಕೈಯಲ್ಲಿದೆ. ಈ ದಿನಗಳಲ್ಲಿ ಅವಕಾಶಗಳು ವಿಫಲವಾಗಿವೆ. ಬಳಸಿಕೊಂಡಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ಓದಿದ ವಿದ್ಯಾರ್ಥಿಯೂತನ್ನ ಪ್ರತಿಭೆಯನ್ನು ಬಳಸಿಕೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಬಹುದಾಗಿದೆ ಎಂದರು.

ತಹಸೀಲ್ದಾರ್ ಎಚ್.ಜೆ.ರಶ್ಮಿ, ತಾಪಂ ಇಒ ನರೇಂದ್ರಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಂ.ಪಿ.ಸುರೇಶ್, ಸದಸ್ಯರಾದ ರುದ್ರೇಶ್, ಹುಲುಗಾರು ಕೃಷ್ಣಮೂರ್ತಿ, ಲತಾ, ಗ್ಯಾರಂಟಿ ಅನುಷ್ಠಾನ ಸಮಿತಿಯ ಎಚ್.ಬಿ.ಚಿದಂಬರ, ಪಟ್ಟಣ ಪಂಚಾಯಿತಿ ಸದಸ್ಯರಾದ ಅಶ್ವಿನಿಕುಮಾರ್, ಗುರುರಾಜ್, ಶಾಹಿನಾನಾಸಿರ್, ಪ್ರಾಂಶುಪಾಲರಾದ ಸ್ವಾಮಿರಾವ್, ಗಗ್ಗ ಬಸವರಾಜ್, ಸಣ್ಣಕ್ಕಿ ಮಂಜು, ಗುಲಾಬಿ ಮರಿಯಪ್ಪ ಹಾಗೂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

Share this article