ದೊಡ್ಡಬಳ್ಳಾಪುರ: ಪ್ರತಿದಿನ ಒಂದಷ್ಟು ದೈಹಿಕ ಚಟುವಟಿಕೆಗಳನ್ನು ಒಳಗೊಂಡಂತೆ ಆರೋಗ್ಯಪೂರ್ಣ ಜೀವನ ಶೈಲಿ ಅಳವಡಿಸಿಕೊಳ್ಳುವುದು ಇಂದಿನ ಯುವಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಅವಶ್ಯಕ ಎಂದು ಶ್ರೀ ಮಾರುತಿ ವ್ಯಾಯಾಮಶಾಲೆ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಬಿ.ಗುರುದೇವ್ ಹೇಳಿದರು.
ನೇತ್ರದಾನದ ಬಗ್ಗೆ ಮಾಹಿತಿ ನೀಡಿ ಇಂದಿಗೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 3014 ನೇತ್ರಗಳ ದಾನದ ಕಾರ್ಯ ನೇತ್ರದಾನ ಪ್ರೇರಕರ ಸಹಕಾರದೊಂದಿಗೆ ನೆರವೇರಿದ್ದು ದಾನವಾದ ನೇತ್ರಗಳು ಅಂಧರ ಬಾಳಿಗೆ ಬೆಳಕಾಗಿವೆ. ವ್ಯಕ್ತಿಯ ಮರಣಾನಂತರ ಮಾಡುವ ನೇತ್ರದಾನ ಹಾಗೂ ದಾನವಾದ ನೇತ್ರಗಳನ್ನು ಅರ್ಹ ಅಂಧ ಫಲಾನುಭವಿಗಳಿಗೆ ಅಳವಡಿಸುವ ಕಾರ್ಯವು ಸಂಪೂರ್ಣವಾಗಿ ಉಚಿತವಾಗಿದ್ದು ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಸೇವಾ ಮನೋಭಾವದಿಂದ ಈ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದರು.
ನೇತ್ರದಾನಿ ಡಾ.ರಾಜಕುಮಾರ್ ಅವರು ತಮ್ಮ ನೇತ್ರಗಳನ್ನು ದಾನ ಮಾಡಿ ರಾಜ್ಯದಲ್ಲಿ ನೇತ್ರದಾನ ಕ್ರಾಂತಿಗೆ ನಾಂದಿ ಹಾಡಿದರು ಎಂದರು.ನಾಗದಳ ಸಂಸ್ಥಾಪಕ ಸಂಚಾಲಕ ಸಿ.ನಟರಾಜ ಮಾತನಾಡಿ, ನಾಗದಳದ ನೇತೃತ್ವದಲ್ಲಿ ಗಾನೋದಯ ಗಾಯನ ವೇದಿಕೆ ಹೆಸರಲ್ಲಿ ನಿರಂತರ ಮೂರು ವರ್ಷಗಳಿಂದ ನಾಗರಕೆರೆ ಕಟ್ಟೆಯ ಮೇಲಿನ ಆಚೆಗುಡಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಪ್ರತಿ ತಿಂಗಳು ಎರಡನೆ ಹಾಗೂ ನಾಲ್ಕನೇ ಭಾನುವಾರ ಬೆಳಿಗ್ಗೆ ಸಂಪೂರ್ಣ ಉಚಿತ ಗಾನೋದಯ ಗಾಯನ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು ಅಬಾಲವೃದ್ಧರಾದಿಯಾಗಿ ಗಾಯನ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.ನಾಗದಳ ಸಂಘಟನೆಯ ಪರಿಸರ ಹಾಗೂ ಸಾಮಾಜಿಕ ಕಾರ್ಯಗಳ ಕಿರುಪರಿಚಯ ಮಾಡಿಕೊಟ್ಟರು.ಕಾರ್ಯದರ್ಶಿ ಎಂ.ಎನ್. ಶಿವಶಂಕರ್ (ವ್ಯಾಯಾಮ ರತ್ನ), ಕೋಟೆ ಗರಡಿಯ ಪೈಲ್ವಾನ್ ಚೌಡಪ್ಪ (ಶಕ್ತಿ ರತ್ನ), ಮಹಾಮಾರುತಿ ವ್ಯಾಮಶಾಲೆಯ ಯೋಗಪಟು ಹೆಚ್.ಎಸ್.ಮಧುಸೂದನ್ (ಯೋಗ ರತ್ನ) ಹಾಗೂ ನಾಗದಳದ ಸೈಕ್ಲಿಂಗ್ ಕ್ರೀಡಾಪಟು ಆರ್.ಪಿ.ರಘೋತ್ತಮ (ಸೈಕ್ಲಿಂಗ್ ರತ್ನ) ರವರುಗಳಿಗೆ ಅವರ ಸಾಧನೆಗೆ ಅನ್ವರ್ಥವಾದ ಬಿರುದುಗಳೊಂದಿಗೆ ಸನ್ಮಾನಿಸಲಾಯಿತು.ನಾಗದಳ ಸಂಚಾಲಕರಾದ ಎ.ವಿ.ರಘು, ಎ.ವೆಂಕಟೇಶ್, ನುನ್ನ ನಾಗರಾಜ್, ಸುಧೀರ್, ಯುವಸಂಚಲನದ ಚಿದಾನಂದ್, ಗಾನೋದಯ ಗಾಯನ ತಂಡದ ಸದಾಶಿವರೆಡ್ಡಿ, ಪುಷ್ಪ ಚಂದ್ರಮೋಹನ್, ರಾಮಮೂರ್ತಿ, ಆರ್.ವೆಂಕಟರಾಜು, ಲತಾ, ನಿವೃತ್ತ ಶಿಕ್ಷಕಿ ರಾಜಮ್ಮ ಹಾಗೂ ನಾಗರಕೆರೆಯ ವಾಯುವಿಹಾರಿಗಳು ಉಪಸ್ಥಿತರಿದ್ದರು.
ದೊಡ್ಡಬಳ್ಳಾಪುರದಲ್ಲಿ ನಾಗರಕೆರೆ ಕಟ್ಟೆಯ ಆಚೆಗುಡಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಾಗದಳ ಹಾಗೂ ಗಾನೋದಯ ಗಾಯನ ವೇದಿಕೆ ಹಮ್ಮಿಕೊಂಡಿದ್ದ 71ನೇ ಕನ್ನಡ ರಾಜ್ಯೋತ್ಸವ, ಮಹಾತ್ಮ ಗಾಂಧೀಜಿ 157 ನೇ ಜನ್ಮವರ್ಷಾಚರಣೆ ಹಾಗೂ ಗಾನೋದಯ ಗಾಯನ ವೇದಿಕೆ 75ನೇ ಗಾಯನೋತ್ಸವದ ಸವಿನೆನಪಿನ ಕಾರ್ಯಕ್ರಮದಲ್ಲಿ ಐವರು ಹಿರಿಯ ಸಾಧಕರನ್ನು ಸನ್ಮಾನಿಸಲಾಯಿತು.