ಕನ್ನಡಪ್ರಭ ವಾರ್ತೆ ಬೆಳಗಾವಿ ಡಿ.2ರಿಂದ 11ರವರೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಭದ್ರತೆಗಾಗಿ ಪೊಲೀಸ್ ಇಲಾಖೆಯು 7 ಸಾವಿರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, 35 ಕೆಎಸ್ಆರ್ಪಿ ತುಕಡಿಗಳು ಹಾಗೂ 500 ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಡಿ.2ರಿಂದ 11ರವರೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಭದ್ರತೆಗಾಗಿ ಪೊಲೀಸ್ ಇಲಾಖೆಯು 7 ಸಾವಿರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, 35 ಕೆಎಸ್ಆರ್ಪಿ ತುಕಡಿಗಳು ಹಾಗೂ 500 ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ನಗರ ಹೊರತುಪಡಿಸಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ಪೊಲೀಸ್ ಘಟಕಗಳಿಂದ 4 ಎಸ್ಪಿ, 11 ಹೆಚ್ಚುವರಿ ಎಸ್ಪಿ, 35 ಡಿಎಸ್ಪಿ/ಎಸಿಪಿ, 90 ಪೊಲೀಸ್ ನಿರೀಕ್ಷಕರು, 200 ಪಿಎಸ್ಐ, 350 ಎಎಸ್ಐ ಹಾಗೂ 3 ಸಾವಿರ ಹೆಡ್ಕಾನ್ಸ್ಟೇಬಲ್ ಮತ್ತು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಒದಗಿಸುವಂತೆ ಪೊಲೀಸ್ ಕೇಂದ್ರ ಕಚೇರಿಗೆ ಮನವಿ ಸಲ್ಲಿಸಲಾಗಿದೆ ಎಂದರು.ಅಲ್ಲದೇ, ನಗರದಲ್ಲಿ ಈಗಿರುವ ಸಿಸಿಟಿವಿ ವ್ಯವಸ್ಥೆಯೊಂದಿಗೆ ಹೆಚ್ಚುವರಿಯಾಗಿ 600 ಸಿಸಿಟಿವಿ ಕ್ಯಾಮೆರಾಗಳನ್ನು ಸೂಕ್ಷ್ಮ ಸ್ಥಳಗಳಲ್ಲಿ ಅಳವಡಿಸಲಾಗುತ್ತಿದೆ. ಗಣ್ಯರು ಸಂಚರಿಸುವ ಸ್ಥಳಗಳ ನಿಗಾ ಮತ್ತು ಭದ್ರತೆಗಾಗಿ 6 ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಸುವರ್ಣಸೌಧದ ಪ್ರತಿಭಟನಾ ಸ್ಥಳ, ನಗರದ ವಿವಿಧ ಪ್ರತಿಭಟನೆಗಳು ಹಾಗೂ ಸಂಚಾರ ವ್ಯವಸ್ಥೆ ಮೇಲೆ ನಿಗಾ ಇರಿಸಲು 10 ಡ್ರೋನ್ಗಳನ್ನು ಬಳಸಲಾಗುತ್ತಿದ್ದು, ಒಂದು ಮೊಬೈಲ್ ಕಮಾಂಡ್ ಸೆಂಟರ್ ಒದಗಿಸುವಂತೆಯೂ ಕೋರಲಾಗಿದೆ. ಪ್ರತಿಭಟನಾ ಸ್ಥಳಗಳಲ್ಲಿ ಹಾಗೂ ನಗರದ ಸಂಚಾರ ವ್ಯವಸ್ಥೆ ಸುಗಮವಾಗಿಡಲು ಜಿಲ್ಲಾಡಳಿತದ ಸಹಕಾರದೊಂದಿಗೆ 2 ಸಾವಿರ ಫಿಕ್ಸ್ ಬ್ಯಾರಿಕೇಡ್ಗಳನ್ನು ಸಿದ್ಧಪಡಿಸಲಾಗುತ್ತಿದೆ. ಪ್ರತಿಭಟನಾ ಸ್ಥಳಗಳು, ಅಧಿಕಾರಿಗಳು ಮತ್ತು ಗಣ್ಯರು ಸಂಚರಿಸುವ ಹಾಗೂ ವಾಸ್ತವ್ಯ ಹೂಡುವ ಸ್ಥಳಗಳಲ್ಲಿ 24 ಗಂಟೆಯೂ ಅಗ್ನಿಶಾಮಕ ವಾಹನ ಮತ್ತು ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದರು.
ಹೊರ ಜಿಲ್ಲೆಗಳಿಂದ ಆಗಮಿಸುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವಾಸ್ತವ್ಯಕ್ಕಾಗಿ ಸುವರ್ಣಸೌಧದ ಹಿಂಭಾಗದ ಶಿಂದೊಳ್ಳಿ ವ್ಯಾಪ್ತಿಯಲ್ಲಿ ಬೃಹತ್ ಟೆಂಟ್ ಟೌನ್ಶಿಪ್ ನಿರ್ಮಿಸಲಾಗುತ್ತಿದೆ. ನಗರದ ವಿವಿಧ ಅತಿಥಿಗೃಹ, ಕಲ್ಯಾಣ ಮಂಟಪ, ಸರ್ಕಾರಿ ಕಟ್ಟಡಗಳು, ಹೋಟೆಲ್ ಹಾಗೂ ಲಾಡ್ಜ್ಗಳಲ್ಲಿಯೂ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಸುಮಾರು 7 ಸಾವಿರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಬೆಳಗಿನ ಉಪಾಹಾರ, ಊಟ, ಬಿಸಿನೀರು, ಹಾಸಿಗೆ ಹಾಗೂ ಶೌಚಗೃಹ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆದಿದೆ. ವೈದ್ಯಾಧಿಕಾರಿಗಳ ತಂಡವನ್ನೂ ನಿಯೋಜಿಸಲಾಗುತ್ತಿದೆ. ವಾಸ್ತವ್ಯ ಮತ್ತು ಪ್ರತಿಭಟನಾ ಸ್ಥಳಗಳು ಸೇರಿದಂತೆ ಸುಮಾರು 10 ಕಡೆಗಳಲ್ಲಿ ಊಟದ ಪೊಟ್ಟಣ ಪೂರೈಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.300 ವಾಹನಗಳಿಗೆ ಬೇಡಿಕೆ:
ಅಧಿವೇಶನಕ್ಕೆ ಆಗಮಿಸುವ ಗಣ್ಯರು ಮತ್ತು ಅತಿಗಣ್ಯರ ಬೆಂಗಾವಲು, ಪೈಲಟ್ ಹಾಗೂ ಕಾನ್ವಾಯ್ ಕರ್ತವ್ಯಕ್ಕಾಗಿ ವಿವಿಧ ಪೊಲೀಸ್ ಘಟಕಗಳಿಂದ ಸುಮಾರು 300 ವಾಹನಗಳನ್ನು ಒದಗಿಸುವಂತೆ ಕೋರಲಾಗಿದೆ. ಇದರಲ್ಲಿ ಸ್ಕಾರ್ಪಿಯೊ, ಬೊಲೆರೊ, ಇನ್ನೋವಾ ಸೇರಿದಂತೆ ವಿವಿಧ ವಾಹನಗಳು, ವಾಟರ್ ಟ್ಯಾಂಕರ್, ಓಪನ್ ಟ್ರಕ್, ಬುಲೆಟ್ಪ್ರೂಫ್ ಕಾರು ಹಾಗೂ ಜಾಮರ್ ವಾಹನಗಳು ಸೇರಿವೆ ಎಂದು ಅವರು ತಿಳಿಸಿದರು.2 ತಿಂಗಳ ಕಾಲ ನಿಷೇಧಾಜ್ಞೆ ಜಾರಿ
ಸುವರ್ಣಸೌಧದ ಭದ್ರತೆ, ಗಣ್ಯರ ಸುರಕ್ಷತೆ ಹಾಗೂ ಅಧಿವೇಶನ ಸುಗಮವಾಗಿ ನಡೆಯುವ ದೃಷ್ಟಿಯಿಂದ ನ.15ರಿಂದ 2027ರ ಜ.15ರವರೆಗೆ ಸುವರ್ಣಸೌಧದ ಕಟ್ಟಡದಿಂದ 2 ಕಿ.ಮೀ. ವ್ಯಾಪ್ತಿಯಲ್ಲಿ ಕಲಂ 163 ಬಿಎನ್ಎಸ್ಎಸ್ (ಹಿಂದಿನ ಕಲಂ 144 ಸಿಆರ್ಪಿಸಿ) ಅಡಿ ನಿಷೇಧಾಜ್ಞೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಪ್ರಕಾಶ್ ನಿಕ್ಕಂ ಅವರು ತಿಳಿಸಿದ್ದಾರೆ.