ಮಳಖೇಡ-ಕಾಗಿಣಾ ಸೇತುವೆ ಸಂಚಾರಕ್ಕೆ ಮುಕ್ತ

KannadaprabhaNewsNetwork |  
Published : Aug 26, 2024, 01:40 AM IST
ಫೋಟೋ- ಮಳಖೇಡ್‌ ಬ್ರಿಡ್ಜ್‌ 1 ಮತ್ತು ಮಳಖೇಡ್ ಬಿಡ್ಜ್‌ 2 | Kannada Prabha

ಸಾರಾಂಶ

ಮಳಖೇಡ- ಕಾಗಿಣಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಮುಗಿದಿದೆ. ಇದೀಗ ಸೇತುವೆ ಸಾರ್ವಜನಿರಿಗೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಸುದೀರ್ಘ 6 ವರ್ಷಗಳ ನಂತರ ಸದರಿ ಸೇತುವೆ ಸಂಚಾರಕ್ಕೆ ಅಣಿಗೊಂಡಂತಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಅಂತು ಇಂತೂ ಮಳಖೇಡ- ಕಾಗಿಣಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಮುಗಿದಿದೆ. ಇದೀಗ ಸೇತುವೆ ಸಾರ್ವಜನಿರಿಗೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಸುದೀರ್ಘ 6 ವರ್ಷಗಳ ನಂತರ ಸದರಿ ಸೇತುವೆ ಸಂಚಾರಕ್ಕೆ ಅಣಿಗೊಂಡಂತಾಗಿದೆ.

2018ರಲ್ಲೇ ಸೇತುವೆ ಕಾಮಗಾರಿಗೆ ಅಡಿಗಲ್ಲಿಡಲಾಗಿತ್ತು. ನಂತರದಲ್ಲಿ ಅನೇಕ ಎಡರು ತೊಡರುಗಳಲ್ಲೇ ಸೇತುವೆ ಕಾಮಗಾರಿ ಆಮೆ ವೇಗದಲ್ಲಿತ್ತು. ಕೊನೆಗೂ ಸೇತುವೆ ಮುಗಿತಲ್ಲ, ಸಂಚಾರಕ್ಕೆ ಮುಕ್ತವಾಯ್ತಲ್ಲ ಎಂದು ಈ ಸತುವೆ ರಸ್ತೆ ಬಳಕೆದಾರ ವಾಹನ ಸವಾರರು, ಜನತೆ ನಿಟ್ಟುಸಿರು ಬಿಡುತ್ತಿದ್ದಾರೆ.

ಕಾಗಿಣಾ ನದಿ ನೆರೆ ಬಂದೋ, ಮಳೆ ಹೆಚ್ಚಾಗಿಯೋ ಈ ಸೇತುವೆ ಕಾಮಗಾರಿ ನೆನೆಗುದಿಗೆ ಬಿದ್ದಿರೋದರಿಂದ ಜನ ಭಾರಿ ಮಸ್ಯೆ ಎದುಸುತ್ತಿದ್ದರು. ಹಳೇ ಸೇತುವೆ ತುಂಬ ಶಿಥಿಲಗೊಂಡಿದ್ದರಿಂದ ಜನತೆ ಜೀವ ಕೈಯಲ್ಲಿ ಹಿಡಿದೇ ಸಂಚರಿಸುವಂತಾಗಿತ್ತು. ಇದೀಗ ಸದರಿ ಸೇತುವೆ ಕಾಮಗಾರಿ ಕೊನೆಗೂ ಮುಗಿಯಿತಲ್ಲವೆಂದು ಜನ ಹೇಳುತ್ತಿದ್ದಾರೆ.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮತದ ಅನುದಾನದಿಂದ ನಿರ್ಮಿಸಲಾದ ಈ ಸೇತುವೆ 12 ಮೀಟರ್ ಅಗಲ ಮತ್ತು 270 ಮೀಟರ್ ಉದ್ದ ಹೊಂದಿದೆ. ಸೇತುವೆಗೆ ಎರಡು ಬದಿಯಲ್ಲಿ ಒಟ್ಟಾರೆ 390 ಮೀಟರ್ ಸಂಪರ್ಕ ರಸ್ತೆ ನಿರ್ಮಿಸಲಾಗಿದೆ. ಬೆಂಗಳೂರಿನ ಎನ್.ಸಿ.ಸಿ ಲಿಮಿಟೆಡ್ ಸಂಸ್ಥೆಯು ನಿರ್ಮಾಣದ ಜವಾಬ್ದಾರಿ ಪಡೆದು ಮಾರ್ಚ್ 2018 ರಲ್ಲಿ ಕೆಲಸ ಪ್ರಾರಂಭಿಸಿ 6 ವರ್ಷಗಳ ನಂತರ ಪೂರ್ಣಗೊಂಡು ಸುಗಮ ಸಂಚಾರಕ್ಕೆ ಇದು ಸೇತುವಾಗಿದೆ.

ನಾನೇ ಅಡಿಗಲ್ಲು- ನನ್ನಿಂದಲೇ ಉದ್ಘಾಟನೆ:

ಕಲಬುರಗಿ- ಸೇಡಂ ರಸ್ತೆಯ ಮಳಖೇಡ್ ಗ್ರಾಮದ ಬಳಿ ಕಾಗಿಣಾ ನದಿಗೆ ಅಡ್ಡಲಾಗಿ 27.90 ಕೋಟಿ ರು. ಮೊತ್ತದಲ್ಲಿ ನಿರ್ಮಿಸಲಾದ ಸೇತುವೆಯನ್ನು ಶನಿವಾರ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಹಿಂದೆ 2018ರಲ್ಲಿ ತಾವೇ ಇದಕ್ಕೆ ಅಡಿಗಲ್ಲು ನೆರವೇರಿಸಿದ್ದು, ಇದೀಗ ಉದ್ಘಾಟಿಸುತ್ತಿರುವುದು ಸಂತಸ ತಂದಿದೆ. ಅತಿವೃಷ್ಠಿ ಪ್ರವಾಹ ಸಂದರ್ಭದಲ್ಲಿ ಪ್ರತಿ ಬಾರಿ ಮಳಖೇಡ್ ಸೇತುವೆ ಮುಳಗಡೆಯಾಗಿ ಸಂಪರ್ಕ ಕಡಿತ ಸಾಮಾನ್ಯವಾಗಿತ್ತು. ನೂತನ ಸೇತುವೆ ನಿರ್ಮಾಣದಿಂದ ಸುಗಮ ಸಂಚಾರ ಸಾಧ್ಯವಾಗಲಿದೆ ಎಂದರು.

ನೂತನ ಮತ್ತು ಹಳೇ ಸೇತುವೆ ಎರಡು ಸಂಚಾರಕ್ಕೆ ಮುಕ್ತವಾಗಿರಿಸಬೇಕು. ಸೇತುವೆ ಮೇಲೆ ಅಪಘಾತವಾಗದಂತೆ ಡಿವೈಡರ್ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ಸಂಸದ ರಾಧಾಕೃಷ್ಣ ದೊಡ್ಡಮನಿ, ಎಂಎಲ್‌ಸಿ ಜಗದೇವ ಗುತ್ತೇದಾರ, ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಶೀಲ್ದಾರ ಶ್ರೇಯಾಂಕಾ ಧನಶ್ರೀ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ.ಪಾಟೀಲ ಇದ್ದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?