ಮಲಪ್ರಭಾ ಕಾಲುವೆ ನವೀಕರಣ ಕಾಮಗಾರಿ ಕಳಪೆ: ಆರೋಪ

KannadaprabhaNewsNetwork |  
Published : Apr 06, 2026, 02:30 AM IST
(5ಎನ್.ಆರ್.ಡಿ1 ಸುದ್ದಿಗೋಷ್ಟಿಯಲ್ಲಿ ರೈತ ಮುಖಂಡ ವೀರೇಶ ಸೊಬರದಮಠ ಮಾತನಾಡಿದರು.)     (5ಎನ್.ಆರ್.ಡಿ1 ಸುದ್ದಿಗೋಷ್ಟಿಯಲ್ಲಿ ರೈತ ಮುಖಂಡ ವೀರೇಶ ಸೊಬರದಮಠ ಮಾತನಾಡಿದರು.)        | Kannada Prabha

ಸಾರಾಂಶ

ಈ ಬಗ್ಗೆ ಕಾಮಗಾರಿ ತನಿಖೆ ಮಾಡಬೇಕೆಂದು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದರೂ ಪಾರದರ್ಶಕವಾಗಿಲ್ಲ. ಆದ್ದರಿಂದ ಸರ್ಕಾರ ಲೋಕಾಯುಕ್ತರಿಂದ ಪಾರದರ್ಶಕವಾಗಿ ತನಿಖೆ ಮಾಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು.

ನರಗುಂದ: ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಬಲದಂಡೆ ಹಾಗೂ ಎಡದಂಡೆ ಕಾಲುವೆಗಳ ನವೀಕರಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ರೈತಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಆರೋಪಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 20028- 09ರ ಸಾಲಿನಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಿಂದ ಅತಿವೃಷ್ಟಿ ಸಂಭವಿಸಿ ಈ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿ ಸಾಕಷ್ಟು ಹಾನಿಗೊಳಗಾಗಿತ್ತು. ಅಂದಿನ ಸರ್ಕಾರ ಹಾನಿ ಪರಿಶೀಲಿಸಿಲು ಡಾ. ಪರಮಶಿವಯ್ಯನವರ ಅಧ್ಯಕ್ಷತೆಯಲ್ಲಿ ಆಯೋಗ ರಚನೆ ಮಾಡಿತ್ತು. ಆಯೋಗದ ವರದಿ ಪ್ರಕಾರ 7 ಟಿಎಂಸಿ ನೀರು ಮಲಪ್ರಭಾ ಕಾಲುವೆಗಳಿಂದ ಸೋರಿಕೆ ಮೂಲಕ ಜಲಾವೃತವಾಗಿದೆ ಎಂದು ವರದಿಯಲ್ಲಿ ಪ್ರಸ್ತಾಪವಾಗಿತ್ತು. ಅಲ್ಲದೆ ಬೇರೆ ಬೇರೆ ಹಳ್ಳಗಳ ಮೂಲಗಳಿಂದ ಹೆಚ್ಚುವರಿ ನೀರಿನಿಂದ ಗದಗ, ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳ ಗ್ರಾಮಗಳಲ್ಲಿ ಹಾನಿಯಾಗಿದೆ. ಅಂದಿನ ಸರ್ಕಾರ ಮಲಪ್ರಭಾ ಬಲ ಹಾಗೂ ಎಡದಂಡೆ ಕಾಲುವೆಗಳ ಸೋರಿಕೆಯಾಗದ ರೀತಿಯಲ್ಲಿ ಪುನಃ ನವೀಕರಣ ಮಾಡಲು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ 2012ರಲ್ಲಿ ಕರ್ನಾಟಕ ನೀರಾವರಿ ನಿಗಮದಿಂದ ಬ್ಯಾಹಟ್ಟಿ ಡಿವಿಜನ್ ಬಲ- ಎಡದಂಡೆ ಕಾಲುವೆಗಳ ನವೀಕರಣ ಮಾಡಲು ಯೋಜನೆ ಸಿದ್ಧಪಡಿಸಿದ ನಂತರ ಡಿವಿಜನ್ ಕಾರ್ಯನಿರ್ವಾಹಕ ಅಭಿಯಂತರರು ಆ ಕಾಮಗಾರಿ ಅಂದಾಜು ಡಿಪಿಆರ್ ಪತ್ರಿಕೆಯನ್ನು ಸಿದ್ಧಪಡಿಸಿ ಅಂದಾಜು ಮೊತ್ತ ₹450 ಕೋಟಿ ಮಾಡಿತ್ತು.

ನಂತರ 2015- 16ರಲ್ಲಿ ಕಾಮಗಾರಿ ಅಂದಾಜು ಪತ್ರಿಕೆ ₹1250 ಕೋಟಿ ಮಾಡಿದ್ದು, ಅವೈಜ್ಞಾನಿಕ ಡಿಪಿಆರ್ ಬಗ್ಗೆ ಅಂದಿನ ವಿರೋಧ ಪಕ್ಷದ ನಾಯಕರು ವಿರೋಧಿಸಿದ್ದರು. ಆದರೂ ಸರ್ಕಾರ ಮತ್ತೊಂದು ಸಲ ಡಿಪಿಆರ್ ಮಾಡಿ ₹2,168 ಕೋಟಿ ಅಂದಾಜು ಪತ್ರಿಕೆ ಮಾಡಿ ಕಾಮಗಾರಿಯನ್ನು ಕ್ಲಾಸ್- 1 ಗುತ್ತಿಗೆದಾರ ಡಿ.ವೈ. ಉಪ್ಪಾರ ಅವರಿಗೆ ಟೆಂಡರ್ ನೀಡಿತ್ತು. ಆದರೆ ಈ ಗುತ್ತಿಗೆದಾರ ಕಾಮಗಾರಿಯನ್ನು ಸಂಪೂರ್ಣವಾಗಿ ಕಳಪೆ ಮಾಡಿ ಸಾವಿರಾರು ಕೋಟಿ ಹಣವನ್ನು ನುಂಗಿದ್ದಾರೆ ಎಂದರು.

ಈ ಬಗ್ಗೆ ಕಾಮಗಾರಿ ತನಿಖೆ ಮಾಡಬೇಕೆಂದು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದರೂ ಪಾರದರ್ಶಕವಾಗಿಲ್ಲ. ಆದ್ದರಿಂದ ಸರ್ಕಾರ ಲೋಕಾಯುಕ್ತರಿಂದ ಪಾರದರ್ಶಕವಾಗಿ ತನಿಖೆ ಮಾಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಲ್ಲಣ್ಣ ಅಲೇಕಾರ, ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಎಸ್.ಬಿ. ಜೋಗಣ್ಣವರ, ಸುಭಾಸ ಗಿರಿಯಣ್ಣವರ, ಹನುಮಂತ ಸರನಾಯ್ಕರ, ಯಲ್ಲಪ್ಪ ಚಲವಣ್ಣವರ, ಅರ್ಜುನ ಮಾನೆ, ಶಂಕ್ರಪ್ಪ ಜಾಧವ, ಶಿವಪ್ಪ ಸಾತಣ್ಣವರ, ಫಕೀರಪ್ಪ ಅಣ್ಣಿಗೇರಿ, ವಾಸು ಚವಾಣ, ಮಲ್ಲೇಶ ಅಣ್ಣಿಗೇರಿ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಪನಹಳ್ಳಿ ಹಿರೇಕೆರೆ ಅಭಿವೃದ್ಧಿಗೆ ₹3 ಕೋಟಿ ಅನುದಾನ ಮಂಜೂರು: ಶಾಸಕಿ ಎಂ.ಪಿ.ಲತಾ
ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್‌ ರಾಂ: ಶಾಸಕ ಕೃಷ್ಣನಾಯ್ಕ