ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ನಿರ್ಮೂಲನ ಹಂತದಲ್ಲಿರುವ ಮಲೇರಿಯಾ ರೋಗದ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಗೆ ಖಾಸಗಿ ವೈದ್ಯರ ಹಾಗೂ ಪ್ರಯೋಗ ಶಾಲಾ ತಂತ್ರಜ್ಞರ ಸಹಕಾರ ಅತ್ಯಗತ್ಯ ಎಂದು ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಎನ್. ಕಾಂತರಾಜು ಹೇಳಿದರು.ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಲೇರಿಯಾ ವಿರೋಧ ಮಾಸಾಚರಣೆ ಕುರಿತ ತಾಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆ, ಕ್ಲಿನಿಕ್, ಪಾಲಿ ಕ್ಲಿನಿಕ್, ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಗಳ ವೈದ್ಯರು ಹಾಗೂ ಪ್ರಯೋಗ ಶಾಲಾ ತಂತ್ರಜ್ಞರು, ಆರ್‌ಎಂಪಿ, ಆಯುಷ್, ಹೋಮಿಯೋಪತಿ, ನ್ಯಾಚುರೋಪತಿ ಸೇರಿದಂತೆ ಇತರೆ ಪದ್ಧತಿಗಳ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಮಲೇರಿಯಾ ನಿರ್ಮೂಲನೆ ಕುರಿತು ಒಂದು ದಿನದ ಅಡ್ವೊಕೆಸಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಕಾರ್ಯಾಗಾರದಲ್ಲಿ ಮಲೇರಿಯಾ ರೋಗದ ವಿಧಗಳು, ಲಕ್ಷಣಗಳು, ಹರಡುವಿಕೆ, ಚಿಕಿತ್ಸೆ ಮತ್ತು ಮುಂಜಾಗ್ರತ ಕ್ರಮಗಳ ಕುರಿತು ಉಪನ್ಯಾಸವನ್ನು ಪಿಪಿಟಿ ಪ್ರದರ್ಶನದ ಮೂಲಕ ಮಾಹಿತಿ ನೀಡಿದರು. ರೋಗವನ್ನು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಅನಾಪಿಲಿಸ್ ಹೆಣ್ಣು ಸೊಳ್ಳೆಯ ಜೀವನ ಚಕ್ರದ ಕ್ರಮವನ್ನು ವಿವರಿಸಿದರು.ಮಲೇರಿಯಾ ರೋಗದ ಪರಿಣಾಮಕಾರಿ ಚಿಕಿತ್ಸೆಗಳಾದ ಪ್ರೈಮಾಕ್ವಿನ್ ತೀವ್ರ ಚಿಕಿತ್ಸೆ, ಎಸಿಟಿ ಚಿಕಿತ್ಸೆ ಹಾಗೂ ಕ್ವಿನೈನ್ ಚಿಕಿತ್ಸಾ ಕ್ರಮಗಳು ಹಾಗೂ ಅವುಗಳ ಅಡ್ಡ ಪರಿಣಾಮಗಳು ಮತ್ತು ಅಡ್ಡ ಪರಿಣಾಮಗಳ ನಿರ್ವಹಣೆ ಕುರಿ ಸುಧೀರ್ಘ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಗಣೇಶ್ ಪ್ರಸಾದ, ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಶಿವಕುಮಾರ, ತಾಲೂಕು ಮೇಲ್ವಿಚಾರಕ ಜಿ ಮೋಹನ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಅಭಿನಂದನ, ಪ್ರಭಾರಿ ತಾಲೂಕು ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಬಿ.ಮಂಗಳ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ, ಜಿ.ಬಿ.ಹೇಮಣ್ಣ, ಚಿಕ್ಕಬೋರಯ್ಯ, ಆರೋಗ್ಯ ನಿರೀಕ್ಷಣಾಧಿಕಾರಿ ಎ.ಎನ್.ಮೇಘ, ಡಾ.ಬಿ.ಸುಜಯ ಕುಮಾರ್ ಸೇರಿದಂತೆ ತಾಲೂಕಿನ ಎಲ್ಲ ಖಾಸಗಿ ವೈದ್ಯರು, ಪ್ರಯೋಗ ಶಾಲಾ ತಂತ್ರಜ್ಞರು ಉಪಸ್ಥಿತರಿದ್ದರು.