ಮಳವಳ್ಳಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹ

KannadaprabhaNewsNetwork |  
Published : Apr 12, 2026, 02:00 AM IST
9ಕೆಎಂಎನ್ ಡಿ11 | Kannada Prabha

ಸಾರಾಂಶ

ಸರ್ಕಾರ ಒಂದೆಡೆ ಆಡಳಿತ ಯಂತ್ರವನ್ನು ಸಾರ್ವಜನಿಕರ ಮನೆ ಬಾಗಿಲಿಗೆ ಕೊಂಡೊಯ್ಯುತ್ತೇವೆ ಎಂದು ಹಲವು ಯೋಜನೆ ಜಾರಿಗೆ ತಂದರೂ ಅಧಿಕಾರಿಗಳ ದುರಾಡಳಿತದಿಂದ ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ಪಂಡಿತಹಳ್ಳಿ ನಾಡಕಚೇರಿಗೆ ಕಾಯಂ ಕಂಪ್ಯೂಟರ್ ಆಪರೇಟರ್ ನೇಮಕ ಸೇರಿ ಹಲವು ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿ ಮುಂಭಾಗ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್ ರಾಜ್ ನೇತೃತ್ವದಲ್ಲಿ ಸೇರಿದ ಸದಸ್ಯರು ನಾಡ ಕಚೇರಿಯಲ್ಲಿ ಇರುವ ನ್ಯೂನತೆಗಳನ್ನು ಕೂಡಲೇ ಸರಿಪಡಿಸುವಂತೆ ಒತ್ತಾಯಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಎನ್.ಎಲ್.ಭರತ್ ರಾಜ್ ಮಾತನಾಡಿ, ಪಂಡಿತಹಳ್ಳಿ ನಾಡ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ರಜೆ ಮೇಲೆ ತೆರಳಿ 15 ದಿನಗಳ ಕಳೆದಿದೆ. ರೈತರು ತಮ್ಮ ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಸರ್ಕಾರ ಒಂದೆಡೆ ಆಡಳಿತ ಯಂತ್ರವನ್ನು ಸಾರ್ವಜನಿಕರ ಮನೆ ಬಾಗಿಲಿಗೆ ಕೊಂಡೊಯ್ಯುತ್ತೇವೆ ಎಂದು ಹಲವು ಯೋಜನೆ ಜಾರಿಗೆ ತಂದರೂ ಅಧಿಕಾರಿಗಳ ದುರಾಡಳಿತದಿಂದ ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಂಡಿತಹಳ್ಳಿಯ ನಾಡಕಚೇರಿಗೆ ಕನಿಷ್ಠ ಮೂಲ ಸೌಕರ್ಯ ಕಲ್ಪಿಸುವಲ್ಲಿ ತಾಲೂಕು ಆಡಳಿತ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ತಾಲೂಕಿನ ಹಲವೆಡೆ ನಾಡಕಚೇರಿಗಳಲ್ಲಿ ಸುಸಜ್ಜಿತ ಕಟ್ಟಡಗಳಿಲ್ಲ, ವಿದ್ಯುತ್ ಪರಿಕರಗಳು ಸೇರಿದಂತೆ ಸವಲತ್ತುಗಳಿಲ್ಲ, ಮತ್ತೊಂದೆಡೆ ಸಿಬ್ಬಂದಿ ಕೊರತೆ ಕಾಡುತ್ತಿದೆ ಎಂದು ದೂರಿದರು.

ಅಗತ್ಯ ದಾಖಲೆ ಪಡೆಯಲು ಅವಶ್ಯಕತೆ ಇರುವ ಯಂತ್ರೋಪಕರಣ ಪೂರೈಸಿಲ್ಲ. ಕಂಪ್ಯೂಟರ್ ಆಪರೇಟರ್ ರಜೆ ಮೇಲೆ ತೆರಳಿ 15 ದಿನಗಳು ಕಳೆದಿದೆ. ಬೇರೆಯೆಡೆಯಿಂದ ಬರುವ ಸಿಬ್ಬಂದಿ ವಾರದಲ್ಲಿ ಎರಡು ದಿನಗಳ ಮಾತ್ರ ಲಭ್ಯವಿರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಹ ಸಂಚಾಲಕ ಎನ್.ಲಿಂಗರಾಜಮೂರ್ತಿ ಮಾತನಾಡಿ, ಕಚೇರಿಯಲ್ಲಿ ಯುಪಿಎಸ್ ಸೌಲಭ್ಯವಿಲ್ಲ. ವಿಷಯ ನಿರ್ವಾಹಕರು ಇಲ್ಲದೇ ಯಾವ ಕೆಲಸವೂ ಆಗುತ್ತಿಲ್ಲ. ಹೀಗಾಗಿ ಅಲ್ಲಿಗೆ ಕನಿಷ್ಠ ಮೂಲ ಸೌಕರ್ಯ ಕಲ್ಪಿಸಬೇಕು. ಕೂಡಲೇ ಕಂಪ್ಯೂಟರ್ ಆಪರೇಟರ್ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್ ಎಸ್.ವಿ.ಲೋಕೇಶ್ ಮನವಿ ಸ್ವೀಕರಿಸಿ ಮಾತನಾಡಿ, ಸದ್ಯದಲ್ಲಿಯೇ ಪಂಡಿತಹಳ್ಳಿ ನಾಡಕಚೇರಿಯಲ್ಲಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಗುರುಸ್ವಾಮಿ, ಪ್ರಮೀಳಾ, ಎನ್.ಮಹದೇವಯ್ಯ, ನಂಜುಂಡಸ್ವಾಮಿ, ಪರಿಮಳಾ, ಕೆ.ಎನ್.ಮೂರ್ತಿ, ಗಣೇಶ್, ಬಿ.ಪಿ.ಸೋಮಶೇಖರಮೂರ್ತಿ, ಮರಿಲಿಂಗೇಗೌಡ, ಎಂ.ಶಿವರಾಮು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೊಲೀಸರ ಕರ್ತವ್ಯ ವಿಶ್ರಾಂತಿ ರಹಿತವಾದದ್ದು: ಅಂಬರೀಷ್
ಪಠ್ಯ ಶಿಕ್ಷಣದ ಜೊತೆಗೆ ಜೀವನದ ಮೌಲ್ಯ ಕಲಿಕೆ: ಫಾ.ಬೆನ್ನಿ ಮ್ಯಾಥ್ಯೂ