ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಪುರಸಭೆಯಲ್ಲಿ ಆಡಳಿತಾಧಿಕಾರಿ ಬಿ.ಆರ್.ಮಹೇಶ್ 2024-25ನೇ ಸಾಲಿನ ಆಯವ್ಯಯ ಮಂಡನೆ ಮಾಡಿದರು.ಪುರಸಭೆ ಸಭಾಂಗಣದಲ್ಲಿ ಆಯವ್ಯಯ ಮಂಡಿಸಿ, ಒಟ್ಟು 26.8 ಕೋಟಿ ರು. ಆದಾಯದ ನಿರೀಕ್ಷೆ ಹೊಂದದ್ದು, 26 ಕೋಟಿ ರು ವೆಚ್ಚದ ಅಂದಾಜು ಮಾಡಲಾಗಿದೆ. ಸುಮಾರು 75 ಲಕ್ಷ ಉಳಿತಾಯ ಮಾಡಬಹುದು. ಪುರಸಭೆ ವ್ಯಾಪ್ತಿ ಜನರಿಗೆ ಮೂಲ ಸೌಲಭ್ಯ ನೀಡಲು ಬದ್ದವಾಗಿದೆ ಎಂದರು.
ಪುರಸಭೆಗೆ ಬರುವ ಆದಾಯ ವಿವರ:ಆಸ್ತಿ ತೆರಿಗೆಯ ಆದಾಯ 1.12 ಕೋಟಿ ರು., ಉದ್ದಿಮೆ ಪರವಾನಗಿಯಿಂದ ಆದಾಯ 15 ಲಕ್ಷ ರು., ನೀರಿನ ದರದಿಂದ 49 ಲಕ್ಷ ರು., ವಾರದ ಸಂತೆಯ ನೆಲಬಾಡಿಗೆ ಆದಾಯ 16 ಲಕ್ಷ ರು., ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 2 ಕೋಟಿ ರು., ಎಎಫ್ ಸಿ ಅನುದಾನ 1 ಕೋಟಿ ರು., 15ನೇ ಹಣಹಾಸು ಆಯೋಗದ ಅನುದಾನ 2 ಕೋಟಿ ರು., ಎಸ್ಎಫ್ ಸಿ ವೇತನ ಅನುದಾನ 3.8 ಕೋಟಿ ರು., ಸ್ವೀಕೃತಗೊಂಡ ಎಸ್ಎಫ್ ಸಿ ವಿದ್ಯುತ್ಚ್ಛಕ್ತಿ 1 ಕೋಟಿ ರು. ಸೇರಿದಂತೆ 20.99 ಕೋಟಿ ರು. ಆದಾಯ ಹಾಗೂ ಆರಂಭ ಶಿಲ್ಕು 58 ಲಕ್ಷ ಉಳಿಕೆಯೊಂದಿಗೆ 26.8 ಕೋಟಿಯ ನಿರೀಕ್ಷೆ ಇದೆ.
ಖರ್ಚು:ಬೀದಿ ದೀಪಗಳ ವಿದ್ಯುತ್ ವೆಚ್ಚ 2 ಕೋಟಿ ರು., ಶಕಿ ಮತ್ತು ಇಂದನಕ್ಕೆ 3 ಕೋಟಿ ರು., ಬೋರ್ ವೆಲ್ ದುರಸ್ಥಿ, ಯಂತ್ರಗಳು ಹಾಗೂ ಸ್ಥಾವರಗಳ ಅಭಿವೃದ್ಧಿಗೆ 45 ಲಕ್ಷ ರು., ಸಿಡಿ ಹಬ್ಬ ಆಚರಣೆಗೆ 5 ಲಕ್ಷ ರು., ಸಾರ್ವಜನಿಕ ಶೌಚಾಲಯ ನಿರ್ಮಾನಕ್ಕೆ 37 ಲಕ್ಷ ರು., ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸ್ಮಶಾನಗಳ ಅಭಿವೃದ್ಧಿ 50 ಲಕ್ಷ ರು., ಕಲ್ಲು ಹಾಸುಗಳು ಹಾಗೂ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ 1 ಕೋಟಿ ರು., ಚರಂಡಿಗಳು, ಮಳೆ ನೀರಿನ ಚರಂಡಿಗಳು, ಸಣ್ಣ ಸೇತುವೆ ಹಾಗೂ ಮಾರ್ಗಗಳ ಅಭಿವೃದ್ಧಿಗೆ 1.1 ಸಣ್ಣ ನೀರು ಸರಬರಾಜು ಹಾಗೂ ತೊಂಬೆಗಳ ನಿರ್ಮಾಣಕ್ಕೆ 20 ಲಕ್ಷ ರು., ಉದ್ಯಾನಗಳ ನಿರ್ಮಾಣ ಹಾಗೂ ಅಭಿವೃದ್ಧಿಗೆ 30 ಲಕ್ಷ ರು. ಸೇರಿದಂತೆ ಹಲವು ಕಾಮಗಾರಿಗಳಿಗೆ ಅನುದಾನ ಬಳಕೆಗೆ ಯೋಜನೆ ರೂಪಿಸಲಾಗಿದೆ.
ನಂತರ ಬಜೆಟ್ ಮೇಲಿನ ಚರ್ಚೆ ವೇಳೆ ಬಜೆಟ್ ಪ್ರತಿಯಲ್ಲಿ ಹೆಚ್ಚಿನ ಇಂಗ್ಲೀಷ್ ಪದ ಬಳಕೆ ಸರಿಯಲ್ಲ. ಅಲ್ಲದೇ ಕಳೆದ ಹಲವು ವರ್ಷಗಳಿಂದ ಕೋತಿ, ಬೀದಿ ನಾಯಿಗಳ ಹಾವಳಿ ತಡೆಯಲು ಆಗ್ರಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿಯಾದರೂ ಕ್ರಮ ವಹಿಸಬೇಕು ಹಾಗೂ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 3 ಲಕ್ಷ ರು ಮೀಸಲಿಡಬೇಕು. ಒತ್ತುವರಿಯಾಗಿರುವ ಸಾರ್ವಜನಿಕ ಸ್ಮಶಾನದ ಜಾಗವನ್ನು ತೆರವು ಮಾಡಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಪುರಸಭೆ ಸದಸ್ಯ ನಂದಕುಮಾರ್ ಒತ್ತಾಯಿಸಿದರು.ನ್ಯಾಯಾಲಯಗಳಲ್ಲಿ ಆಸ್ತಿಗಳ ಸಂಬಂಧ ಪುರಸಭೆ ಪರವಾಗಿ ಹಲವು ತೀರ್ಪುಗಳು ಬಂದಿದ್ದು, ಅವುಗಳನ್ನು ವಶಕ್ಕೆ ಪಡೆಯಲು ಕ್ರಮ ವಹಿಸುವುದರ ಮೂಲಕ ಪುರಸಭೆ ಆಸ್ತಿಯನ್ನು ರಕ್ಷಣೆ ಮಾಡಬೇಕು ಎಂದು ಮತ್ತೊರ್ವ ಸದಸ್ಯ ಎಂ.ಎನ್.ಶಿವಸ್ವಾಮಿ ಆಗ್ರಹಿಸಿದರು.
ಐತಿಹಾಸಿಕ ಸಿಡಿಹಬ್ಬ ಆಚರಣೆಗೆ ಹೆಚ್ಚುವರಿ ಹಣ ನೀಡಬೇಕು. ಹಿಂದು, ಮುಸ್ಲಿಂ, ಕೈಸ್ತ ಸೇರಿದಂತೆ ಹಲವು ಧರ್ಮಗಳ ಸ್ಮಶಾನ ಅಭಿವೃದ್ದಿಗೆ ಅನುದಾನ ಬಿಡುಗಡೆಗೊಳಿಸಿರುವುದು ಸ್ವಾಗತರ್ಹ ಎಂದು ಪುರಸಭೆ ಸದಸ್ಯ ನೂರುಲ್ಲಾ ಹೇಳಿದರು.ಎಸ್‌ಸಿಪಿ ಅನುದಾನದಲ್ಲಿ ಪರಿಶಿಷ್ಟಜಾತಿ ಮಕ್ಕಳಿಗೆ ಸೌಲಭ್ಯವನ್ನು ನೀಡಿಲ್ಲ. ಕೂಡಲೇ ಅನುದಾನ ಸದ್ಬಳಕೆ ಮಾಡಬೇಕು. ಅಂಗವಿಲರಿಗೆ ಸೌಲಭ್ಯವನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ಸಿದ್ದರಾಜು, ರಾಜಶೇಖರ್ ಒತ್ತಾಯಿಸಿದರು.
ಸಭೆಯಲ್ಲಿ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಸದಸ್ಯರಾದ ಪುಟ್ಟಸ್ವಾಮಿ, ರಾಧಾ ನಾಗರಾಜು, ಬಸವರಾಜು, ಸಿದ್ದರಾಜು, ಇಂದ್ರಮ್ಮ ದೊಡ್ಡಯ್ಯ, ಸವಿತಾ, ಮಹೇಶ್ವರಿ, ಎಂ.ಆರ್.ರಾಜಶೇಖರ್, ಭಾಗ್ಯಮ್ಮ, ಮಣಿ, ಆತೀಯಾ ಬೇಗಂ, ರವಿ, ನಾಗೇಶ್ ಇದ್ದರು.