ಧುಮ್ಮವಾಡದಲ್ಲಿವೆ ಸಿದ್ಧಾರೂಢರ ಪಾದುಕೆಗಳು!

KannadaprabhaNewsNetwork |  
Published : Mar 07, 2024, 01:48 AM IST
ಧುಮ್ಮವಾಡದ ಬಸವರಾಜ ಅಗಂಡಿ ಅವರ ಮನೆಯಲ್ಲಿ ಪೂಜೆಗೊಳ್ಳುತ್ತಿರುವ ಸಿದ್ಧಾರೂಢರ ಪಾದುಕೆಗಳು. | Kannada Prabha

ಸಾರಾಂಶ

96 ವರ್ಷದಿಂದ ಇಲ್ಲಿ ನಿತ್ಯ ಪೂಜೆಗೊಳ್ಳುತ್ತಿವೆ ಅಜ್ಜನ ಪಾದುಕೆಗಳು. ಕೈಲಾಸಮಂಟಪ ಕಟ್ಟುವ ವೇಳೆ ಆಶೀರ್ವಾದ ರೂಪದಲ್ಲಿ ಪಾದುಕೆ ನೀಡಿದ್ದ ಅಜ್ಜ.

ಮಹೇಶ ಅರಳಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ನಾಡಿನ ಶ್ರೇಷ್ಠ ಸಂತರಲ್ಲಿ ಒಬ್ಬರಾದ ಹುಬ್ಬಳ್ಳಿಯ ಸಿದ್ಧಾರೂಢರು ಧರಿಸುತ್ತಿದ್ದ ಪಾದುಕೆ (ಪಾದರಕ್ಷೆ)ಗಳು ಕಲಘಟಗಿ ತಾಲೂಕಿನ ಧುಮ್ಮವಾಡ ಗ್ರಾಮದ ಭಕ್ತರೊಬ್ಬರ ಮನೆಯಲ್ಲಿ 96 ವರ್ಷದಿಂದ ಇಂದಿಗೂ ನಿತ್ಯ ಪೂಜೆಗೊಳ್ಳುತ್ತಿವೆ.

ಹೌದು, ಧುಮ್ಮವಾಡದ ಬಸವರಾಜ ಅಂಗಡಿ ಎಂಬವರ ಮನೆಯಲ್ಲಿ ಸಿದ್ಧಾರೂಢರು ಧರಿಸುತ್ತಿದ್ದ ಪಾದುಕೆ ಕಾಣಬಹುದು. ಬಸವರಾಜ ಅವರ ಮುತ್ತಜ್ಜಿಯಾದ ಬಸಮ್ಮ ಅಂಗಡಿ ಅವರು ಸಿದ್ಧಾರೂಢರ ಪರಮಭಕ್ತರು. ಸಿದ್ಧಾರೂಢರ ಕಾಲದಲ್ಲಿ ಕೈಲಾಸ ಮಂಟಪ ನಿರ್ಮಾಣ ಕಾರ್ಯದಲ್ಲಿ ಬಸಮ್ಮ ಅಂಗಡಿ, ಅವರ ಪುತ್ರಿ ಜಂಬಮ್ಮ ಮತ್ತು ಮೊಮ್ಮಗ ಶಿವಲಿಂಗಪ್ಪ ಅಂಗಡಿ ಕುಟುಂಬದವರು ತೊಡಗಿಸಿಕೊಂಡಿದ್ದರು.

1928ರಲ್ಲಿ ಕೈಲಾಸಮಂಟಪ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಆಗ ಈ ಕುಟುಂಬದವರು ತಮ್ಮ ಸೇವಾ ಕಾರ್ಯ ಮುಗಿಸಿ ತಮ್ಮೂರಿಗೆ ತೆರಳಲು ಸಿದ್ಧಾರೂಢರ ಅನುಮತಿ ಕೇಳಿದರು. ಇವರ ಸೇವಾ ಕಾರ್ಯದಿಂದ ಖುಷಿಗೊಂಡಿದ್ದ ಸಿದ್ಧಾರೂಢರು ತಾವು ಧರಿಸುತ್ತಿದ್ದ ಪಾದುಕೆಗಳನ್ನು ಆಶೀರ್ವಾದ ರೂಪದಲ್ಲಿ 1928ರಲ್ಲಿ ಈ ಕುಟುಂಬದವರಿಗೆ ನೀಡಿದ್ದರು. ಆಗ ಪಾದುಕೆಗಳನ್ನು ಮನೆಗೆ ತಂದು ನಿತ್ಯ ಮನೆಯ ಜಗುಲಿಯಲ್ಲಿ ಪೂಜೆ ಸಲ್ಲಿಸುತ್ತಿದ್ದರು.

ಇದೀಗ ಧುಮ್ಮವಾಡ ಗ್ರಾಮದ ಅಂಗಡಿ ಕುಟುಂಬದ ಬಸವರಾಜ ಅವರ ಮನೆಯಲ್ಲಿ ಸಿದ್ಧಾರೂಢ ಅಜ್ಜನ ಪಾದುಕೆಗಳು ಇವೆ. ಇವರು ಹಿರಿಯರ ಪದ್ಧತಿಯಂತೆ ನಿತ್ಯ ಜಗುಲಿಯಲ್ಲಿ ಪಾದುಕೆ ಪೂಜಿಸುತ್ತಿದ್ದಾರೆ. ಅಲ್ಲದೇ ಇವರ ಮನೆಗೆ 1958ರಲ್ಲಿ ಸಿದ್ಧಾರೂಢರ ಶಿಷ್ಯರಾದ ಗುರುನಾಥರೂಢರು ಆಗಮಿಸಿ ಕುಟುಂಬದವರಿಗೆ ಆಶೀರ್ವಾದ ನೀಡಿದ್ದರು ಎಂದು ಸ್ಮರಿಸುತ್ತಾರೆ ಬಸವರಾಜ ಅವರು.

ಭಕ್ತಿಸೇವೆ:

ಬಸವರಾಜ ಅಂಗಡಿ ಅವರು ಅನಕ್ಷಸ್ಥರು. ಆದರೂ ಹಲವು ಸ್ತೋತ್ರಗಳನ್ನು ನಿತ್ಯ ಪಠಿಸುತ್ತಾರೆ. ಅಲ್ಲದೇ ಪಾದುಕೆಗಳನ್ನು ಪ್ರತಿನಿತ್ಯ ಪೂಜಿಸುತ್ತಾರೆ. ಪ್ರತಿ ಸೋಮವಾರ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಆಗಮಿಸಿ ದರ್ಶನ ಪಡೆಯುತ್ತಾರೆ. ಜಾತ್ರೆಯ ಮುನ್ನ ತಮ್ಮ ಕೈಲಾದಷ್ಟು ಸೇವೆಯನ್ನು ಸಲ್ಲಿಸುತ್ತಾರೆ. ವೃತ್ತಿಯಲ್ಲಿ ಕೃಷಿಕ. ಅಲ್ಲದೇ ಕಡಿ, ಕಲ್ಲಿನ ವ್ಯಾಪಾರ ಮಾಡುತ್ತಾರೆ. ಇದರ ಮಧ್ಯೆ ಪ್ರತಿ ಸೋಮವಾರ ಅಜ್ಜನ ಮಠಕ್ಕೆ ಬರುವುದನ್ನು ತಪ್ಪಿಸಿಲ್ಲ ಎಂದು ಹೇಳುತ್ತಾರೆ.

ಪಾದುಕೆ ದರ್ಶನಕ್ಕೆ ಭಕ್ತರ ಭೇಟಿ:

ಇತ್ತೀಚಿಗಷ್ಟೇ ಸಿದ್ಧಾರೂಢ ಪಾದುಕೆಗಳು ಧುಮ್ಮವಾಡದ ಬಸವರಾಜ ಅಂಗಡಿಯವರ ಮನೆಯಲ್ಲಿರುವುದು ಹಲವರಿಗೆ ಗೊತ್ತಾಗುತ್ತಿದ್ದಂತೆ ಜನ ತಂಡೋಪ ತಂಡವಾಗಿ ಇವರ ಮನೆಗೆ ಆಗಮಿಸಿ ಪಾದುಕೆಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ನಮ್ಮ ಕೈಬಿಟ್ಟಿಲ್ಲ

ನಮ್ಮ ಅಜ್ಜನ ಕಾಲದಿಂದಲೂ ಮನೆಯಲ್ಲಿ ಸಿದ್ಧಾರೂಢರ ಪಾದುಕೆಗಳು ಪೂಜೆಗೊಳ್ಳುತ್ತಿವೆ. ಅಜ್ಜನ ಮೇಲಿನ ಭಕ್ತಿಯಿಂದ ಜೀವನದಲ್ಲಿ ನೆಮ್ಮದಿ ನೆಲೆಸಿದೆ. ಕಷ್ಟ ಕಾಲದಲ್ಲೂ ಅಜ್ಜ ನಮ್ಮನ್ನು ಕೈಬಿಟ್ಟಿಲ್ಲ. ಹೀಗಾಗಿ ಸಿದ್ಧಾರೂಢರ ಮಹಿಮೆ ಅಪಾರವಾಗಿದೆ.

ಬಸವರಾಜ ಅಂಗಡಿ, ಸಿದ್ಧಾರೂಢರ ಭಕ್ತ

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು