ಮಲೆ ಮಹದೇಶ್ವರ ಬೆಟ್ಟದಲ್ಲಿ ಜಾತ್ರೆ ಶುರು

KannadaprabhaNewsNetwork | Published : Apr 7, 2024 1:52 AM

ಸಾರಾಂಶ

ಚಂದ್ರಮಾನ ಯುಗಾದಿ ಹಬ್ಬದ ಜಾತ್ರಾ ಮಹೋತ್ಸವ ಶನಿವಾರ ಪ್ರಾರಂಭವಾಗಿದ್ದು, ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳು ಸಂಭ್ರಮ ಸಡಗರದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಹನೂರು

ಚಂದ್ರಮಾನ ಯುಗಾದಿ ಹಬ್ಬದ ಜಾತ್ರಾ ಮಹೋತ್ಸವ ಶನಿವಾರ ಪ್ರಾರಂಭವಾಗಿದ್ದು, ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳು ಸಂಭ್ರಮ ಸಡಗರದಿಂದ ಜರುಗಿತು.ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಡೆಯುತ್ತಿರುವ ಚಂದ್ರಮಾನ ಯುಗಾದಿ ಜಾತ್ರಾ ಮಹೋತ್ಸವದ ನಾಲ್ಕು ದಿನಗಳ ಜಾತ್ರೆಗೆ ಶನಿವಾರ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಬುಡಕಟ್ಟು ಸಮುದಾಯದ ಬೇಡಗಂಪಣ ಅರ್ಚಕರಿಂದ ಪೂಜಾ ಕಾರ್ಯಕ್ರಮಗಳು ಮಲೆ ಮಾದೇಶ್ವರನಿಗೆ ವಿಶೇಷವಾದ ದ್ರವ್ಯಗಳಿಂದ ಅಭಿಷೇಕ ಮಾಡಿ ಮಹಾ ಮಂಗಳಾರತಿಯೊಂದಿಗೆ ತ್ರಿಕಾಲ ಪೂಜೆ ಸಲ್ಲಿಸಿ ಪ್ರಾರಂಭಿಸಲಾಯಿತು. ವಿಶೇಷ ಪ್ರಸಾದ ವಿತರಣೆ : ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಲೆ ಮಾದೇಶ್ವರನ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಬರಬಿಸಿಲು ಎನ್ನದೆ ದಣಿದು ಬರುತ್ತಿರುವ ಭಕ್ತಾದಿಗಳಿಗೆ ದಣಿವು ನೀಗಿಸಲು ಮಡಕೆ ನೀರು, ಮೊಸರನ್ನ ವಿತರಣೆ ಕಾರ್ಯಕ್ರಮವನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಶೇಷ ದಾಸೋಹ ವ್ಯವಸ್ಥೆಯನ್ನು ಭಕ್ತಾದಿಗಳ ಅನುಕೂಲಕ್ಕಾಗಿ ಕಲ್ಪಿಸಲಾಗಿದ್ದು, ದೇವಾಲಯದ ಸುತ್ತಲೂ ಬರಿಗಾಲಿನಲ್ಲಿ ಬರುವ ಭಕ್ತರಿಗೆ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಸುತ್ತಲೂ ಟ್ಯಾಂಕರ್ ನಲ್ಲಿ ರಸ್ತೆಗೆ ನೀರು ಹಾಕುವ ಮೂಲಕ ಭಕ್ತಾದಿಗಳ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು.

ಪುಟ್ಬಾತ್ ತೆರವು : ಮಲೆ ಮಾದೇಶ್ವರ ಬೆಟ್ಟದಲ್ಲಿ ಚಂದ್ರಮಾನ ಯುಗಾದಿ ಜಾತ್ರಾ ಮಹೋತ್ಸವ ಪ್ರಾರಂಭವಾಗಿರುವುದರಿಂದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಅಂಗಡಿ ಮುಂಗಟ್ಟುಗಳ ಮುಂಭಾಗ ಪುಟ್ಬಾತ್ ತೆರವುಗೊಳಿಸಿ, ಮಾಲೀಕರುಗಳು ಅಂಗಡಿ ಮುಂಭಾಗ ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಹಾಕಬಾರದು ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಮಾಲೀಕರುಗಳಿಗೆ ಎಚ್ಚರಿಕೆ ನೀಡಿದರು. ತ್ಯಾಜ್ಯಗಳನ್ನು ಡಸ್ಟ್ ಬಿನ್ ಗಳಲ್ಲಿ ಶೇಖರಣೆ ಮಾಡಿ ಕಸದ ವಾಹನ ಬರುವ ವೇಳೆಯಲ್ಲಿ ಹಾಕುವಂತೆ, ಇದನ್ನು ಮೀರಿ ರಸ್ತೆಯಲ್ಲಿ ಹಾಕಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಿಡಾರಗಳಲ್ಲಿ ಭಕ್ತ ವೃಂದ:

ಮಲೆ ಮಹದೇಶ್ವರ ಬೆಟ್ಟಕ್ಕೆ ತಮಿಳುನಾಡು ಹಾಗೂ ರಾಜ್ಯದ ಬೆಂಗಳೂರು ಮೈಸೂರು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ಭಕ್ತಾದಿಗಳು ವಾಸ್ತವ್ಯ ಮಾಡಲು ದೇವಾಲಯದ ಮುಂಭಾಗ ಇರುವ ಡಾರ್ಮೆಂಟರಿ ಮತ್ತು ಇನ್ನಿತರ ಕಡೆ ಪೆಂಡಲ್‌ಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುವುದರಿಂದ ಭಕ್ತಾದಿಗಳಿಗೆ ಅನುಕೂಲಕರ ವ್ಯವಸ್ಥೆಗಳನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಲ್ಪಿಸಿದೆ.

ವಿಶೇಷ ಉತ್ಸವಗಳು:

ಚಾಂದ್ರಮಾನ ಯುಗಾದಿ ಜಾತ್ರಾ ಮಹೋತ್ಸವ ಪ್ರಾರಂಭವಾಗಿರುವ ಶನಿವಾರ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಸುವಂತೆ ಮಲೆ ಮಾದೇಶ್ವರನಲ್ಲಿ ಹರಕೆ ಹೊತ್ತು ಚಿನ್ನದ ರಥೋತ್ಸವ ಹಾಗೂ ಬೆಳ್ಳಿ ರಥೋತ್ಸವ ಮತ್ತು ಹುಲಿವಾಹನ ಉತ್ಸವ, ರುದ್ರಾಕ್ಷಿ ಮಂಟಪೋತ್ಸವ, ಬಸವ ವಾಹನ ಉತ್ಸವ, ದೂಪದ ಸೇವೆ, ಪಂಜಿನ ಸೇವೆ, ಉರುಳು ಸೇವೆ ಮತ್ತು ಮುಡಿಸೇವೆ ಯೊಂದಿಗೆ ಆರಾಧ್ಯ ದೈವ ಮಾದಪ್ಪನ ದರುಶನ ಪಡೆಯಲು ಸರತಿ ಸಾಲಿನಲ್ಲಿ ನಿಂತು ಭಕ್ತ ಸಮೂಹ ದರ್ಶನ ಪಡೆಯಿತು.

ಬಿಗಿ ಪಹರೆ : ಮಲೆ ಮಹದೇಶ್ವರ ಬೆಟ್ಟದಲ್ಲಿ ನಾಲ್ಕು ದಿನಗಳು ನಡೆಯುತ್ತಿರುವ ಯುಗಾದಿ ಹಬ್ಬ ಜಾತ್ರಾ ಮಹೋತ್ಸವದ ಪ್ರಯುಕ್ತ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ದೇವಾಲಯ, ಬಸ್ ನಿಲ್ದಾಣ , ಶಂಕಮ್ಮನ ನಿಲಯ ಮತ್ತು ಸಾಲೂರು ಮಠ ಮತ್ತು ತಮಿಳುನಾಡಿನ ರಸ್ತೆ ಹಾಗೂ ತಾಳುಬೆಟ್ಟದಲ್ಲಿಹಾಗೂ ಇನ್ನಿತರ ಆಯಾ ಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಶ್ರೀ ಕ್ಷೇತ್ರದಲ್ಲಿ ಚಂದ್ರಮಾನ ಯುಗಾದಿ ಹಬ್ಬದ ಪ್ರಯುಕ್ತ ನಾಲ್ಕು ದಿನಗಳು ಜಾತ್ರೆ ನಡೆಯುವುದರಿಂದ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಮೊದಲ ಆದ್ಯತೆ ಸ್ವಚ್ಛತೆಗೆ ನೀಡಬೇಕು. ಜೊತೆಗೆ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆ ಬ್ಯಾಗ್ ಬಳಸಬೇಕು. ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ದಣಿದು ಬರುವ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ದಣಿವು ನೀಗಿಸಿಕೊಳ್ಳಲು ಮೊಸರನ್ನ, ವಿಶೇಷ ದಾಸೋಹ ವ್ಯವಸ್ಥೆ, ನೆರಳಿನ ವ್ಯವಸ್ಥೆ ಹಾಗೂ ಮೂಲಭೂತ ಸೌಲಭ್ಯಗಳ ಕಲ್ಪಿಸುವಲ್ಲಿ ಕ್ರಮ ಕೈಗೊಳ್ಳಲಾಗಿದೆ.

ರಘು ,ಕಾರ್ಯದರ್ಶಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಲೆ ಮಹದೇಶ್ವರ ಬೆಟ್ಟ

Share this article