-ಮಲೆನಾಡು ಕ್ರೀಡಾ-ಸಾಂಸ್ಕೃತಿಕ ಭವನ ಅಕ್ರಮ ಇಸ್ಪೀಟು ಜೂಜಾಟದ ಅಡ್ಡೆ । ದೂರು ನೀಡಿದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಹೌದು, ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ಮಲೆನಾಡಿನ ರಮಣೀಯ ಸೌಂದರ್ಯ ವೀಕ್ಷಣೆಗೆ ಮಾತ್ರ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರವಾಸಿಗರು ಆಗಮಿಸುತ್ತಾರೆ ಎಂಬ ಕಲ್ಪನೆ ಇತ್ತು. ಆದರೆ, ಇದೀಗ ಕಂಡು ಬಂದಿರುವ ದೃಶ್ಯಗಳನ್ನು ಗಮನಿಸಿದರೆ, ಜೂಜಾಟಕ್ಕೂ ಚಿಕ್ಕಮಗಳೂರಿಗೆ ಹಲವು ಜಿಲ್ಲೆಯಿಂದ ಜನರು ಪ್ರತಿದಿನ ಬಂದು ಹೋಗುತ್ತಾರೆ ಎಂಬ ವಿಷಯ ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿದೆ.
ಕಾಯಂ ಅಡ್ಡೆ:ಕಾನೂನಿನ ಭಯವಿಲ್ಲ, ಕಾನೂನು ಪಾಲಕರ ಕಟ್ಟುನಿಟ್ಟಿನ ಕ್ರಮದ ಆತಂಕ ಇಲ್ಲದೇ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ತರೀಕೆರೆ ಪಟ್ಟಣದ ಕೋಡಿಕ್ಯಾಂಪ್ ಸಮೀಪದ ಮಲೆನಾಡು ಕ್ರೀಡಾ ಮತ್ತು ಸಾಂಸ್ಕೃತಿಕ ಭವನದಲ್ಲಿ ಅಕ್ರಮ ಇಸ್ಪೀಟು ಜೂಜಾಟದ ಅಡ್ಡೆ ರಾಜಾರೋಷವಾಗಿ ಕಾರ್ಯನಿರ್ವಹಿಸುತ್ತಿದೆ.
ಬೆಂಗಳೂರು–ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಈ ಕಟ್ಟಡ ಹೆಸರಿಗಷ್ಟೇ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ತಾಣ. ಆದರೆ, ಇಲ್ಲಿ ಕಟ್ಟಡ ನೆಲ ಮತ್ತು ಮೊದಲ ಮಹಡಿಯ ಮೂರು ಕೊಠಡಿಗಳಲ್ಲಿ 19 ಟೇಬಲ್ ಅಳವಡಿಸಿ ಇಸ್ಪೀಟು ಜೂಜಾಟ ನಡೆಸಲಾಗುತ್ತಿದೆ. ಪ್ರತಿ ಟೇಬಲ್ನಲ್ಲಿ ಏಳರಿಂದ ಎಂಟು ಮಂದಿಗೆ ಅವಕಾಶ ಕಲ್ಪಿಸಲಾಗಿದ್ದು, ಜೂಜಾಟಕ್ಕೆ ವ್ಯವಸ್ಥಿತ ಸಿದ್ಧತೆ ಮಾಡಲಾಗಿದೆ.
ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಹಾವೇರಿ, ಹಾಸನ ಹಾಗೂ ತುಮಕೂರು ಜಿಲ್ಲೆಗಳಿಂದ ಜೂಜುಕೋರರು ಇಲ್ಲಿಗೆ ಬರುತ್ತಿದ್ದಾರೆ. ಶಿವಮೊಗ್ಗದಿಂದ ಬಂದಿರುವ ಮಧ್ಯವರ್ತಿಗಳು ಜೂಜಾಟದ ವ್ಯವಸ್ಥೆ ನಿರ್ವಹಿಸುತ್ತಿದ್ದಾರೆಂಬ ಮಾಹಿತಿ ಇದೆ. ಹೊರಗಿನಿಂದ ಬರುವವರಿಗೆ ಊಟ, ವಸತಿ, ಮದ್ಯ ಸೇರಿದಂತೆ ಆತಿಥ್ಯದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಪ್ರತಿ ಟೇಬಲ್ನಿಂದ ಗಂಟೆಯ ಲೆಕ್ಕದಲ್ಲಿ ಕಮಿಷನ್ ವಸೂಲಿ ಮಾಡಲಾಗುತ್ತಿದ್ದು, ದಿನವೊಂದಕ್ಕೆ ₹5 ರಿಂದ 6 ಲಕ್ಷ ವರೆಗೆ ಕೇವಲ ಕಮಿಷನ್ ಸಂಗ್ರಹಿಸಲಾಗಲಿದೆ. ಜೂಜಾಟಕ್ಕೆ ಬರುವವರಿಗೆ ಸ್ಥಳದಲ್ಲೇ ಪರ್ಸಂಟೇಜ್ ಆಧಾರದಲ್ಲಿ ಸಾಲ ನೀಡುವುದಕ್ಕೆ ಮತ್ತೊಂದು ಗ್ಯಾಂಗ್ ಇಲ್ಲಿ ಹಾಜರಿರಲಿದೆ.
ಪ್ರಭಾವಿ ರಾಜಕಾರಣಿಗಳ ಕೃಪಾಕಟಾಕ್ಷ, ರಾಜಕಾರಣಿಗಳು ಹಾಗೂ ಪೊಲೀಸ್ ಸಿಬ್ಬಂದಿಗೆ ದಿನದ ಲೆಕ್ಕದಲ್ಲಿ ಮಾಮೂಲಿ ತಲುಪುತ್ತಿದೆ ಎಂಬ ಆರೋಪಗಳು ಸ್ಥಳೀಯ ವಲಯದಲ್ಲಿ ಹರಿದಾಡುತ್ತಿವೆ. ಮೂಲದ ಮಾಹಿತಿ ಪ್ರಕಾರ, ಪೊಲೀಸ್ಗೆ ಇಲಾಖೆಯ ಹಿರಿಯ ಅಧಿಕಾರಿಗೆ ತಿಂಗಳಿಗೆ ₹12 ಲಕ್ಷ ರು., ಕಿರಿಯ ಅಧಿಕಾರಿಗೆ ತಲಾ 3 ಲಕ್ಷ ರು. ಸೇರಿದಂತೆ ಬೇರೆ ಬೇರೆ ಅವರಿಗೆ ತಿಂಗಳಿಗೆ ಇಷ್ಟು ಎಂಬಂತೆ ಮಾಮೂಲಿ ನೀಡಲಾಗುತ್ತದೆ ಎಂಬ ಆರೋಪ ಕೇಳಿ ಬಂದಿವೆ.
ಅಕ್ರಮ ಇಸ್ಪೀಟು ಕ್ಲಬ್ ಬಂದ್ ಮಾಡಿಸುವಂತೆ ಸ್ಥಳೀಯರು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ದೂರುಗಳಿದ್ದರೂ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಅನುಮಾನ ಮೂಡಿಸಿದೆ.
ಕಾರ್ಪೋರೇಟ್ ಕಂಪನಿಗೂ ಕಮ್ಮಿ ಇಲ್ಲದ ಅಡ್ಡೆ!
ತರೀಕೆರೆಯಲ್ಲಿರುವ ಈ ಜೂಜು ಅಡ್ಡೆಯು ಯಾವುದೇ ಕಾರ್ಪೋರೇಟ್ ಕಂಪನಿಯ ಕಚೇರಿಗೆ ಕಮ್ಮಿ ಇಲ್ಲದಂತ್ತಿದೆ. ಗ್ಲಾಸ್ ಪಾರ್ಟಿಷಿಯನ್, ಫ್ಯಾನ್, ಲೈಟ್, ಕುಡಿಯುವುದಕ್ಕೆ ಮಿನರಲ್ ವಾಟರ್ ಸೇರಿದಂತೆ ಕುರ್ಚಿ, ಟೇಬಲ್ ಎಲ್ಲವೂ ಇದೆ. ಕಟ್ಟಡದಲ್ಲಿ ನಡೆಯುವ ಚಟುವಟಿಕೆ ಯಾರಿಗೂ ಕಾಣದಂತೆ ಕಟ್ಟಡಕ್ಕೆ ಮೆಟಲ್ ಶೀಟ್ನ ತಡೆಗೋಡೆ ನಿರ್ಮಾಣ ಮಾಡಲಾಗಿದೆ.(ಎಲ್ಲ ಫೋಟೋಗಳನ್ನು ಬಳಸಿ)