ಕನಕಗಿರಿಯಲ್ಲಿ ಮೈನವಿರೇಳಿಸಿದ ಹೊಳೆಆಲೂರಿನ ಜ್ಞಾನಸಿಂಧು ಶಾಲಾ ಅಂಧಮಕ್ಕಳ ಮಲ್ಲಗಂಬ ಪ್ರದರ್ಶನ

KannadaprabhaNewsNetwork | Published : Mar 1, 2024 2:22 AM

ಸಾರಾಂಶ

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಗ್ರಾಮದ ಜ್ಞಾನಸಿಂಧು ಪ್ರೌಢ ಶಾಲೆಯ ೧೦ಕ್ಕೂ ಹೆಚ್ಚು ಅಂಧಮಕ್ಕಳು ಕನಕಗಿರಿ ಉತ್ಸವದ ಕ್ರೀಡಾಕೂಟದಲ್ಲಿ ಭಾಗವಹಿಸಿ ನೆರೆದವರು ಅಚ್ಚರಿಯಾಗುವಂತೆ ಮಲ್ಲಗಂಬ ಪ್ರದರ್ಶನ ಮಾಡಿದರು.

ಎಂ.ಪ್ರಹ್ಲಾದ

ಕನಕಗಿರಿ: ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಅಂಧಮಕ್ಕಳ ತಂಡವೊಂದು ಕನಕಗಿರಿ ಉತ್ಸವದ ಕ್ರೀಡಾಕೂಟದಲ್ಲಿ ಮಲ್ಲಗಂಬ ಹಾಗೂ ಯೋಗ ಪ್ರದರ್ಶಿಸುವ ಮೂಲಕ ಗಮನ ಸೆಳೆದಿದೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಗ್ರಾಮದ ಜ್ಞಾನಸಿಂಧು ಪ್ರೌಢ ಶಾಲೆಯ ೧೦ಕ್ಕೂ ಹೆಚ್ಚು ಅಂಧಮಕ್ಕಳು ಕನಕಗಿರಿ ಉತ್ಸವದ ಕ್ರೀಡಾಕೂಟದಲ್ಲಿ ಭಾಗವಹಿಸಿ ನೆರೆದವರು ಅಚ್ಚರಿಯಾಗುವಂತೆ ಮಲ್ಲಗಂಬ ಪ್ರದರ್ಶನ ಮಾಡಿದರು.

ಹೀಗೆ ಮಲ್ಲಗಂಬ ಪ್ರದರ್ಶನ ವೇಳೆ ರಾಜಾಸನ, ಮಯೂರಾಸನ, ನಟರಾಜಸನ, ಪರ್ವತಾಸನ ಸೇರಿದಂತೆ ವಿವಿಧ ಆಸನಗಳು ಮತ್ತು ಯೋಗದ ಭಂಗಿಗಳ ಪ್ರದರ್ಶನಕ್ಕೆ ಜನರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ೧೫ ನಿಮಿಷಕ್ಕೂ ಹೆಚ್ಚು ಸಮಯ ನಡೆದ ಮಲ್ಲಗಂಬ ಪ್ರದರ್ಶನವನ್ನು ಸಾವಿರಾರು ಜನ ಕಣ್ತುಂಬಿಕೊಂಡರು.

ಅಂಧಮಕ್ಕಳ ತಂಡವನ್ನು ಕರೆದುಕೊಂಡು ಬಂದಿದ್ದ ಶಿಕ್ಷಕ ಶಿವಾನಂದ ಕೆಲ್ಲೂರು ಮಲ್ಲಗಂಬದ ಜತೆಗೆ ಯೋಗಾಸನಕ್ಕೆ ಸಾಥ್ ನೀಡಿದರು. ತಂಡದಲ್ಲಿ ಆರು ವರ್ಷದ ಸಾಕ್ಷಿ ಎನ್ನುವ ಅಂಧಮಗು ಭಾರತದ ರಾಷ್ಟ್ರಪತಿ, ಪ್ರಧಾನಮಂತ್ರಿ ಯಾದಿಯನ್ನು ಕಂಠಪಾಠವಾಗಿ ಪ್ರಸ್ತುತಪಡಿಸಿ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದಳು.

ಮಲ್ಲಗಂಬ ವೀಕ್ಷಿಸಿದ ಡಿಸಿ: ೧೦ಕ್ಕೂ ಹೆಚ್ಚು ಮಕ್ಕಳ ಪೈಕಿ ಏಳೆಂಟು ಅಂಧಮಕ್ಕಳು ಭಾಗವಹಿಸಿ ಮೈನವಿರೇಳಿಸುವಂತೆ ಪ್ರದರ್ಶನ ತೋರಿದ್ದನ್ನು ಕಂಡ ಜಿಲ್ಲಾಧಿಕಾರಿ ನಳಿನ್‌ ಅತುಲ್ ಭಾವುಕರಾದರು. ಕಣ್ಣಿದ್ದವರಿಗೆ ಈ ಕಲೆ ಕಷ್ಟವಾದರೂ ಕಣ್ಣಿಲ್ಲದ ಮಕ್ಕಳು ಬೆರಗಾಗುವಂತೆ ತೋರಿದ ಪ್ರದರ್ಶನಕ್ಕೆ ಅಧಿಕಾರಿ ವರ್ಗವೂ ಮೆಚ್ಚುಗೆ ವ್ಯಕ್ತಪಡಿಸಿತು.

ಮಹಾರಾಷ್ಟ್ರ ಗೋವಾ, ದೆಹಲಿ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಈ ಅಂಧಮಕ್ಕಳು ಮಲ್ಲಗಂಬ, ಯೋಗ ಪ್ರದರ್ಶನ ಇತರೆ ವಿಶೇಷಚೇತನರಿಗೆ ಮಾದರಿಯಾಗಿದ್ದು, ರಾಜ್ಯದ ವಿವಿಧ ಉತ್ಸವಗಳಲ್ಲಿ ಈ ಮಕ್ಕಳು ಈ ಪ್ರದರ್ಶನ ಮಾಡಿ ಮಲ್ಲಗಂಬ ಕಲೆಯನ್ನು ಶ್ರೀಮಂತಗೊಳಿಸುತ್ತಿದ್ದಾರೆ.

ಹೊಳೆ ಆಲೂರು ಗ್ರಾಮದಲ್ಲಿ ಜ್ಞಾನಸಿಂಧು ವಸತಿ ಶಾಲೆ ಆರಂಭಿಸಿದ್ದು, ೯೪ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ನನ್ನ ಪತ್ನಿ ಮಹಾಲಕ್ಷ್ಮೀ ಚಕ್ಕಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೧ರಿಂದ೧೦ನೇ ತರಗತಿಯವರೆಗೆ ಶಾಲೆ ಇದ್ದು, ಬಾಗಲಕೋಟೆ, ಬಿಜಾಪುರ, ಗದಗ, ಕೊಪ್ಪಳ, ಯಾದಗಿರಿ ಜಿಲ್ಲೆಯ ಮಕ್ಕಳು ನಮ್ಮ ಶಾಲೆಯಲ್ಲಿ ಓದುತ್ತಿದ್ದಾರೆ. ಅಂಧ ಮಕ್ಕಳ ಸೇವೆ ಮೆಚ್ಚಿ ೨೦೧೬ರಲ್ಲಿ ನನ್ನ ತಾಯಿ ತುಳಸಮ್ಮ ಕೆಲ್ಲೂರಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ನನ್ನ ಉಸಿರು ಇರುವವರೆಗೂ ಅಂಧ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ. ನನ್ನ ಹಾಗೂ ನನ್ನ ಕುಟುಂಬವು ಈ ಮಕ್ಕಳ ಸೇವೆ ಮಾಡಿ ದೇವರನ್ನು ಕಾಣುತ್ತಿದ್ದೇವೆ ಎನ್ನುತ್ತಾರೆ ಶಿಕ್ಷಕ ಶಿವಾನಂದ ಕೆಲ್ಲೂರು.

ಹೊಳೆಆಲೂರಿನ ಜ್ಞಾನ ಸಿಂಧು ಶಾಲೆಯ ಮಕ್ಕಳು ಕಣ್ಣಿಲ್ಲದಿದ್ದರೂ ಯಾವ ಆತಂಕವಿಲ್ಲದೇ ಶಿಸ್ತಿನಿಂದ ಮಲ್ಲಗಂಬ, ಯೋಗ ಪ್ರದರ್ಶನ ಮಾಡಿದ್ದು, ದೇಶ ಸೇರಿದಂತೆ ನೆರೆಯ ರಾಷ್ಟ್ರಗಳಲ್ಲಿಯೂ ಮಲ್ಲಗಂಬದಲ್ಲಿ ಚಾಪು ಮೂಡಿಸಿದ್ದಾರೆ. ಕನಕಗಿರಿ ಉತ್ಸವದಲ್ಲೂ ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಎನ್ನುತ್ತಾರೆ ಜಿಲ್ಲಾಧಿಕಾರಿ ನಳಿನ್ ಅತುಲ್.

Share this article