ಕನ್ನಡಪ್ರಭ ವಾರ್ತೆ ಕೆಜಿಎಫ್ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆಯಡಿಯಲ್ಲಿ, ಸಮಾಜದ ದುರ್ಬಲ ವರ್ಗದವರಿಗೆ ಉಚಿತ ಕಾನೂನು ಸೇವೆಗಳ ನೆರವಿನ ಲಭ್ಯತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರತಿವರ್ಷ ನ.೦೯ ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ಆಚರಿಸಲಾಗುತ್ತದೆ ಎಂದು ೩ ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಶಿವಕುಮಾರ್ ಬಿ.ತಿಳಿಸಿದರು. ವಕೀಲರ ಭವನದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು, ಕಾನೂನು ಸೇವಾ ಪ್ರಾಧಿಕಾರಗಳ ಕಾಯಿದೆ ೧೯೮೭ ಜಾರಿಗೊಂಡ ದಿನದ ಸ್ಮರಣಾರ್ಥವಾಗಿ ಪ್ರತಿ ವರ್ಷ ನವೆಂಬರ್ ೦೯ ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ಆಚರಿಸಲಾಗುತ್ತದೆ ಎಂದರು.
ಈ ಕಾಯಿದೆ ೧೯೯೫, ನವೆಂಬರ್ ೦೯ ರಂದು ಜಾರಿಗೆ ಬಂದಿತು. ರಾಷ್ಟ್ರೀಯ ಕಾನೂನು ಸೇವೆಗಳ ದಿನದಂದು ಕಾನೂನು ಜಾಗೃತಿ ಶಿಬಿರಗಳು, ಉಚಿತ ಕಾನೂನು ಸೇವೆಗಳ ನೆರವಿನ ಲಭ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವಂತಹ ಕಾರ್ಯವನ್ನು ಮಾಡಲಾಗುತ್ತದೆ ಎಂದರು. ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎನ್.ರಾಜಗೋಪಾಲಗೌಡ ಮಾತನಾಡಿ, ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ ೧೯೮೭ ಏನೆಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ ೧೯೮೭ ನ್ನು ಕೇಂದ್ರ ಸರ್ಕಾರವು ಭಾರತದ ಸಂವಿಧಾನದ ೩೯೦ ಮತ್ತು ಅದರ ಸಮಿತಿಯು ಮಾಡಿದ ಶಿಫಾರಸುಗಳಿಗೆ ಅನುಗುಣವಾಗಿ ಜಾರಿಗೆ ತಂದಿದೆ ಎಂದರು.
ದುರ್ಬಲರಿಗೆ ಕಾನೂನು ನೆರವು೧೯೯೪ ರ ತಿದ್ದುಪಡಿ ಕಾಯಿದೆಯ ನಂತರ ಈ ಕಾಯಿದೆಯನ್ನು ನವೆಂಬರ್ ೧೯೯೫ ರಂದು ಜಾರಿಗೆ ತರಲಾಯಿತು. ಅಂದಿನಿಂದ ಈ ಮುಖ್ಯ ಕಾಯಿದೆಯಲ್ಲಿ ಹಲವಾರು ತಿದ್ದುಪಡಿಗಳನ್ನು ಮಾಡಲಾಗಿದೆ. ಈ ಕಾಯ್ದೆಯ ಮೂಲಕ ಸಮಾಜದ ಹಿಂದುಳಿದ ವರ್ಗಗಳು, ಆರ್ಥಿಕವಾಗಿ ದುರ್ಬಲವಿರುವ ವರ್ಗಗಳು ಮತ್ತು ವಿಕಲಚೇತನರಿಗೆ ಉಚಿತ ಕಾನೂನು ನೆರವನ್ನು ಪಡೆಯುವ ಹಕ್ಕನ್ನು ನೀಡಲಾಗಿದೆ ಎಂದರು.