ಕನ್ನಡಪ್ರಭ ವಾರ್ತೆ ಮಾಲೂರು
29.05.19 ರಂದು ನಡೆದಿದ್ದ ಪುರಸಭೆ ಸದಸ್ಯರ ಚುನಾವಣೆಯಲ್ಲಿ ಪಟ್ಟಣದ ವಾರ್ಡ್ 27 ರಲ್ಲಿ ಸ್ಪರ್ಧಿಸಿದ್ದ ಸುಮಿತ್ರ ಅವರ ವಯಸ್ಸು 19 ಆಗಿದ್ದು, ಸ್ಪರ್ಧಿಸಲು ಅವಕಾಶ ಇಲ್ಲದಿದ್ದರೂ ಸ್ಪರ್ಧಿಸಿ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ಗಾಯತ್ರಿ ಎಂಬುವರು ಇಲ್ಲಿಯ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ, ಪ್ರತಿವಾದ ಆಲಿಸಿದ ಇಲ್ಲಿನ ಸಿವಿಲ್ ಕೋರ್ಟ್ ನ್ಯಾಯಾಧೀಶೆ ಎಚ್.ಜೆ.ಶಿಲ್ಪ ಅವರು ವಾರ್ಡ್ ನಂ.27 ರ ಪುರಸಭೆ ಸದಸ್ಯೆ ಸಮಿತ್ರ ಅವರ ಆಯ್ಕೆ ಅಸಿಂಧು ಎಂದು ಆದೇಶಿಸಿದ್ದಾರೆ. ವಾದಿಗಳ ಪರವಾಗಿ ವೈ.ಎಸ್. ಹರೀಶ್ ವಾದಿಸಿದರು. ಪ್ರತಿವಾದಿ ಪರವಾಗಿ ಟಿ.ಬಿ.ಕೃಷ್ಣಪ್ಪ ವಾದಿಸಿದ್ದರು.ವಯಸ್ಸು ಕಡಿಮೆ ಇದ್ದರೂ ಸ್ಪರ್ಧೆ
ಅಂದು ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಸುಮಿತ್ರ ಅವರು ತಮ್ಮ ವಯಸ್ಸು 19 ಎಂದು ನಮೂದಿಸಿದ್ದರೂ ಚುನಾವಣಾ ಅಧಿಕಾರಿಗಳ ಬೇಜವಾಬ್ದಾರಿಯಿಂದ ನಾಮಪತ್ರ ತಿರಸ್ಕೃತವಾಗದೆ ಸುಮಿತ್ರ ಸ್ಪರ್ಧಿಸಲು ಅವಕಾಶ ನೀಡಿದ್ದರು. ಇದರಿಂದ ತಮಗೆ ಅನ್ಯಾಯವಾಗಿದೆ ಎಂದು ಗಾಯತ್ರಿ ಅವರು ಆರೋಪಿಸಿದ್ದರು. ತೀರ್ಪುನಲ್ಲಿ ಮತ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ತಮಗೆ ವಾರ್ಡ್ ಸದಸ್ಯೆಯಾಗಿ ನಿರ್ದೇಶನ ನೀಡಬೇಕೆಂದು ಗಾಯತ್ರಿ ಮನವಿ ಮಾಡಿದ್ದರು.ಆದರೆ ನ್ಯಾಯಾಲಯ ಸುಮಿತ್ರಳ ಆಯ್ಕೆ ಆಸಿಂಧು ಎಂದು ಮಾತ್ರ ತೀರ್ಪು ನೀಡಿದೆ. ಈಗಿನ ಪುರಸಭೆ ಅವಧಿ ಇನ್ನು 8 ತಿಂಗಳು ಇರುವ ಕಾರಣ ಉಪ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ತಾವು ಮತ್ತೇ ಸ್ಪರ್ಧಿಸುವುದಾಗಿ ಗಾಯತ್ರಿ ತಿಳಿಸಿದ್ದಾರೆ.