ಕನ್ನಡಪ್ರಭ ವಾರ್ತೆ ಮಾಲೂರು
ಸುಸಜ್ಜಿತ ಸರ್ಕಾರಿ ಆಸ್ಪತ್ರೆ, ಸರ್ಕಾರಿ ಕಚೇರಿಗಳ ಸಂಕೀರ್ಣ ನಿರ್ಮಾಣಕ್ಕಾಗಿ ಪಟ್ಟಣದ ಹೊರವಲಯದಲ್ಲಿ 20 ಎಕರೆ ಜಾಗ ಮೀಸಲಿಟ್ಟಿದ್ದು, ಈ ಸಂಬಂಧ ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಸಲ್ಲಿಸಿದ ಮನವಿಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.ಅವರು ಪಟ್ಟಣದ ಕೆ.ಎಲ್.ಇ ವಿದ್ಯಾಸಂಸ್ಥೆ ಸಮೀಪ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸಲಾಗುತ್ತಿರುವ ಮೆಟ್ರಿಕ್ ಪೂರ್ವ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡದ ಭೂಮಿಪೂಜೆ
ನೆರವೇರಿಸಿ ಮಾತನಾಡಿರು.ಚುನಾವಣಾ ಪೂರ್ವ ನೀಡಲಾಗಿದ್ದ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ಯಶಸ್ವಿಯಾಗಿ ಮುಂದುವರಿಸಿಕೊಂಡು ಬರುತ್ತಿರುವ ಸಿದ್ದರಾಮಯ್ಯ ಅವರ ಸರ್ಕಾರವು ಯಾವುದೇ ಅಭಿವೃದ್ಧಿ ಕಾಮಗಾರಿಗೆ ತೊಂದರೆಯಾಗದಂತೆ ಕ್ಷೇತ್ರಗಳಿಗೆ ಅನುದಾನ ನೀಡುತ್ತ ಬಂದಿದೆ, ಇಲ್ಲಿನ ಬಾಲಕಿಯರ ವಸತಿ ನಿಲಯ ನಿರ್ಮಿಸಲು ಸರ್ಕಾರ ಬಿಡುಗಡೆ ಮಾಡಿರುವ 5 ಕೋಟಿ 25 ಲಕ್ಷ ರು. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದ್ದು, ಮುಂದಿನ ಎರಡೂವರೆ ವರ್ಷವು ತಾಲೂಕಿನಲ್ಲಿ ಅಭಿವೃದ್ಧಿ ಪರ್ವ ನಡೆಯಲಿದೆ ಎಂದರು.
ತಾಲೂಕಿನಲ್ಲಿ ವಿರೋಧ ಪಕ್ಷದವರು ಟೀಕೆ ಮಾಡುತ್ತ ಇರುತ್ತಾರೆ. ನಾವು ಮಾತ್ರ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಿಕೊಂಡು ಹೋಗುತ್ತಾ ಇರೋಣ ಎಂದರು.ಏನು ಬೇಕಾದರೂ ಆಗಬಹುದು:
ತಾವು ಕೋಚಿಮುಲ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿನಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕ ನಂಜೇಗೌಡರು, ಪಕ್ಷಕ್ಕೆ ನಿಷ್ಠೆ, ತಾಳ್ಮೆ ಹಾಗೂ ಹಣೆಬರಹ ಇದ್ದರೆ ಏನಾದರೂ ಆಗಬಹುದು. ನನಗೆ ಕೋಚಿಮುಲ್ ಅಧ್ಯಕ್ಷ ಅಥವಾ ಕೆ.ಎಂ.ಎಫ್ ಅಧ್ಯಕ್ಷ ಸ್ಥಾನ ಸಿಗಬಹುದು ಅಥವಾ ಮಂತ್ರಿಯೂ ಆಗಬಹುದು. ಈ ಮೂರು ಆಯ್ಕೆಯೂ ನನಗೆ ಮುಕ್ತವಾಗಿದೆ ಎಂದರು.ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ, ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಕೃಷ್ಣಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ, ಸದಸ್ಯರಾದ ಮುರಳಿಧರ್, ಇಂತಿಯಾಜ್, ವೇಮನ, ಮುನಿರಾಜು ಕುಟ್ಟಿ, ಬುಲೆಟ್ ವೆಂಕಟೇಶ್, ಲಕ್ಷಮ್ಮ, ಜೆ.ಎಂ.ಸುರೇಶ್ ಕುಮಾರ್ , ರಂಗಪ್ಪ, ಸಮಾಜ ಕಲ್ಯಾಣ ಅಧಿಕಾರಿ ಶಿವಕುಮಾರ್, ಡೈರಿ ನಿರ್ದೇಶಕಿ ಕಾಂತಮ್ಮ ಸೋಮಣ್ಣ ಇನ್ನಿತರರು ಇದ್ದರು.