ಕಲ್ಲು ಗಣಿಗಾರಿಕೆ ವೇಳೆ ಬಂಡೆ ಉರುಳಿ ವ್ಯಕ್ತಿ ಸಾವು

KannadaprabhaNewsNetwork | Published : Jun 19, 2024 1:01 AM

ಸಾರಾಂಶ

ಸೋಮವಾರ ರಾತ್ರಿ ಮಳೆ ಸುರಿದಿದ್ದ ಹಿನ್ನೆಲೆ ಮಣ್ಣು ತೇವವಿತ್ತು, ಈ ವೇಳೆ ಕೆಲಸ ಮಾಡಲು ಹೋಗಿದ್ದಾಗ ಮೇಲಿಂದ ಬಂಡೆ ಕುಸಿದು ಹಿಟಾಚಿ ಮೇಲೆ ಬಿದ್ದಿದೆ. ಆಗ ಇಟಾಚಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದ ಚಾಲಕ ಮೃತಪಟ್ಟಿದ್ದಾನೆ

ಕನ್ನಡಪ್ರಭ ವಾರ್ತೆ ಟೇಕಲ್ಕಲ್ಲುಗಣಿಗಾರಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಹಿಟಾಚಿ ಮೇಲೆ ಬೃಹತ್ತಾದ ಕಲ್ಲು ಬಂಡೆಯೊಂದು ಬಿದ್ದ ಪರಿಣಾಮ ಹಿಟಾಚಿ ಚಾಲಕ ಬಂಡೆಯಡಿ ಸಿಲುಕಿ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಮಂಗಳವಾರ ಮಾಲೂರು ತಾಲೂಕಿನ ಹಳೇಪಾಳ್ಯ ಗ್ರಾಮದಲ್ಲಿ ನಡೆದಿದೆ.

ಹಿಟಾಚಿ ಚಾಲಕ ಸಾವು

ಸೋಮವಾರ ರಾತ್ರಿ ಮಳೆ ಸುರಿದಿದ್ದ ಹಿನ್ನೆಲೆ ಮಣ್ಣು ತೇವವಿತ್ತು, ಈ ವೇಳೆ ಕೆಲಸ ಮಾಡಲು ಹೋಗಿದ್ದಾಗ ಮೇಲಿಂದ ಬಂಡೆ ಕುಸಿದು ಹಿಟಾಚಿ ಮೇಲೆ ಬಿದ್ದಿದೆ. ಆಗ ಇಟಾಚಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದ ಚಾಲಕ ಕೆಜಿಎಫ್ ತಾಲೂಕು ಕ್ಯಾಸಂಬಳ್ಳಿ ಮೂಲದ ಪ್ರವೀಣ್(32) ಮೃತಪಟ್ಟಿದ್ದಾರೆ. ಸ್ಥಳದಲ್ಲಿದ್ದ ಒಂದು ಹಿಟಾಚಿ ಹಾಗೂ ಕಂಪ್ರೆಜರ್ ಹೊಂದಿದ್ದ ಟ್ರ್ಯಾಕ್ಟರ್‌ ನಜ್ಜುಗುಜ್ಜಾಗಿದೆ. ಹಳೇಪಾಳ್ಯದ ಬಳಿ ಭೂತಮ್ಮ ಬೆಟ್ಟಕ್ಕೆ ಹೊಂದಿಕೊಂಡಿರುವ ಬೆಟ್ಟದಲ್ಲಿ ಮಂಜುನಾಥ್‌ ಎಂಬುವರು ಕಲ್ಲು ಗುತ್ತಿಗೆ ಪಡೆದಿದ್ದ ಸ್ಥಳದಲ್ಲಿ ಕಲ್ಲು ಒಡೆಯುವ ವೇಳೆ ಬಂಡೆ ಉರುಳಿ ಈ ಅವಘಡ ಸಂಭವಿಸಿದೆ. ಪ್ರವೀಣ್‌ನ ಮೃತ ದೇಹ ಬೃಹತ್ ಬಂಡೆಯ ಕೆಳಗೆ ಸಿಲುಕಿಕೊಂಡಿರುವುದರಿಂದ ಮೃತದೇಹವನ್ನು ಮೇಲಕೆತ್ತುವ ಕೆಲಸ ನಡೆಯುತ್ತಿದೆ. ಕಂಪ್ರೇಜರ್‌ನಲ್ಲಿ ಕೆಲಸ ಮಾಡುತ್ತಿದ್ದ ಇನ್ನಿಬ್ಬರು ಬಂಡೆ ಕಳೆಗೆ ಸಿಲುಕಿದ್ದು ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಮಾಸ್ತಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.

ಎಸ್ಪಿ ನಾರಾಯಣ್‌ ಭೇಟಿ

ದುರ್ಘಟನೆ ನಡೆದ ಸ್ಥಳಕ್ಕೆ ಕೋಲಾರದ ಎಸ್.ಪಿ.ನಾರಾಯಣ್ ಭೇಟಿ ನೀಡಿ ಪರಿಶೀಲಿಸಿದರು. ಹಳೇಪಾಳ್ಯ ಮಂಜುನಾಥ ಎಂಬುವರಿಗೆ ಗುತ್ತಿಗೆ ಪಡೆದು ಕಲ್ಲು ಬಂಡೆ ಕೆಲಸ ಮಾಡಿಸುತ್ತಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಈ ಪ್ರದೇಶ ಅರಣ್ಯ ಇಲಾಖೆಗೆ ಸೇರಿದೆಯೋ ಅಥವಾ ಕಂದಾಯ ಇಲಾಖೆಯದ್ದೋ ಎಂಬುದು ಖಚಿತವಾಗಿಲ್ಲ ಎಂದರು.

ಗುತ್ತಿಗೆದಾರನ ವಿರುದ್ಧ ಕೇಸ್‌

ಈ ಸ್ಥಳದಲ್ಲಿ ಹಿಟಾಚಿ ಆಪರೇಟರ್ ಸಾವನ್ನಪ್ಪಿರುವುದು ಕಂಡು ಬಂದಿದ್ದು ಇನ್ನೂ ಕೆಲವರು ಸಿಲುಕಿರಬಹುದೆಂದು ಶಂಕಿಸಲಾಗಿದೆ. ಸ್ಥಳೀಯರ ಸಹಕಾರ ಹಾಗೂ ಇದರ ಕಾರ್ಯಾಚರಣೆಯನ್ನು ಎನ್‌ಡಿಆರ್‌ಎಫ್‌ಗೆ ವಹಿಸಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರನ ಮೇಲೆ ಮಾಸ್ತಿ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮಾಸ್ತಿ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಸುನಿಲ್‌ಕುಮಾರ್, ಟೇಕಲ್ ನಾಡಕಛೇರಿಯ ಆರ್‌ಐ ನಾರಾಯಣಸ್ವಾಮಿ, ಇತರೆ ಇಲಾಖೆಗಳವರು ಸ್ಥಳಕ್ಕೆ ಭೇಟಿ ನೀಡಿದರು.

Share this article