ಕಾಡಾನೆ ದಾಳಿಗೆ ವ್ಯಕ್ತಿ ಸ್ಥಳದಲ್ಲೇ ದುರ್ಮರಣ

KannadaprabhaNewsNetwork |  
Published : Apr 27, 2026, 01:30 AM IST
ಕೆ ಕೆ ಪಿ ಸುದ್ದಿ 1(2) : ಕಾಡಾನೆ ದಾಳಿಯಿಂದ ಮೃತಪಟ್ಟ ರೈತ ಶಿವು ಮರಣೋತ್ತರ ಪರೀಕ್ಷೆ ಸ್ಥಳಕ್ಕೆ ಬೇಟೆ ನೀಡಿ ಮಾಹಿತಿ ಪಡೆದ ಮಾಜಿ ಸಂಸದ ಡಿ ಕೆ ಸುರೇಶ್. . | Kannada Prabha

ಸಾರಾಂಶ

ಕನಕಪುರ: ತಾಲೂಕಿನ ಸಂಗಮ ಅರಣ್ಯ ವ್ಯಾಪ್ತಿಯ ಕಾಡಂಚಿನ ಗ್ರಾಮದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬ ದುರ್ಮರಣ ಹೊಂದಿರುವ ಧಾರುಣ ಘಟನೆ ನಡೆದಿದೆ. ಉಯ್ಯಂಬಳ್ಳಿ ಹೋಬಳಿಯ ಶಿವಾಲ್ದಪ್ಪನ ಬೆಟ್ಟದ ಬಳಿಯ ಚೀಲಂದವಾಡಿ ಗ್ರಾಮದ ಹೊರ ವಲಯದ ಒಂಟಿ ಮನೆಯಲ್ಲಿ ವಾಸವಿದ್ದ ರೈತ ಶಿವು(53) ಕಾಡಾನೆ ದಾಳಿಗೆ ಮೃತಪಟ್ಟ ದುರ್ದೈವಿ

ಕನಕಪುರ: ತಾಲೂಕಿನ ಸಂಗಮ ಅರಣ್ಯ ವ್ಯಾಪ್ತಿಯ ಕಾಡಂಚಿನ ಗ್ರಾಮದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬ ದುರ್ಮರಣ ಹೊಂದಿರುವ ಧಾರುಣ ಘಟನೆ ನಡೆದಿದೆ. ಉಯ್ಯಂಬಳ್ಳಿ ಹೋಬಳಿಯ ಶಿವಾಲ್ದಪ್ಪನ ಬೆಟ್ಟದ ಬಳಿಯ ಚೀಲಂದವಾಡಿ ಗ್ರಾಮದ ಹೊರ ವಲಯದ ಒಂಟಿ ಮನೆಯಲ್ಲಿ ವಾಸವಿದ್ದ ರೈತ ಶಿವು(53) ಕಾಡಾನೆ ದಾಳಿಗೆ ಮೃತಪಟ್ಟ ದುರ್ದೈವಿ. ಗ್ರಾಮದ ಬಳಿ ಶೆಟ್ಟಿ ಕೆರೆಯಲ್ಲಿ ನೀರು ಕುಡಿಯಲು ಬಂದಿರುವ ಕಾಡಾನೆ, ಶನಿವಾರ ರಾತ್ರಿ ವೇಳೆ ರೈತ ಶಿವು ಮೇಲೆ ಏಕಾಏಕಿ ದಾಳಿ ಮಾಡಿ, ತಲೆ ಮೇಲೆ ಕಾಲಿಟ್ಟು ತುಳಿದು ಸಾಯಿಸಿದೆ. ಭಾನುವಾರ ಬೆಳಿಗ್ಗೆ ಸುದ್ದಿ ತಿಳಿದ ಅರಣ್ಯಾಧಿಕಾರಿಗಳು ಹಾಗೂ ಕೋಡಿಹಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ಮೃತ ದೇಹವನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಮೊನ್ನೆಯಷ್ಟೇ ಸಂಗಮದ ಕಾವೇರಿ ನದಿ ಬಳಿ ಪ್ರವಾಸಿಗರ ಮೇಲೆ ದಾಳಿ ಮಾಡಿದ್ದ ಕಾಡಾನೆ ನೆನಪು ಮಾಸುವ ಮುನ್ನವೇ ಈ ದುರ್ಘಟನೆ ನಡೆದಿರುವುದು ಕಳವಳಕಾರಿ.ಜನಸಾಮಾನ್ಯರು ಓಡಾಡುವುದೇ ಕಷ್ಟವಾಗಿದ್ದು, ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಭೇಟಿ:

ನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆನೆ ದಾಳಿಯಿಂದ ಮೃತಪಟ್ಟ ರೈತ ಶಿವು ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಅರಣ್ಯಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ತಾಲೂಕಿನ ಗಡಿ ಭಾಗದಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದೆ. ಇದನ್ನು ತಡೆಗಟ್ಟಬೇಕಾದ ಜವಾಬ್ದಾರಿ ಅರಣ್ಯ ಇಲಾಖೆಯದ್ದು. ಅಧಿಕಾರಿಗಳು ತಮ್ಮ ಬೇಜವಾಬ್ದಾರಿ ಬಿಟ್ಟು, ಆದಷ್ಟೂ ಬೇಗ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಬಾಕಿ ಉಳಿದಿರುವ ರೈಲ್ವೆ ಬ್ಯಾರಿಕೇಡ್ ಅಳವಡಿಕೆ, ಕಂದಕ ನಿರ್ಮಾಣ, ಸೋಲಾರ್ ತಂತಿ ಸೇರಿದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಖಡಕ್‌ ಸೂಚನೆ ನೀಡಿದರು.

ಈ ಡಿಸಿಎಫ್‌ ಸುರೇಂದ್ರ, ಆರ್‌ಎಫ್‌ಓ ಅನಿಲ್ ಕುಮಾರ್, ಡಿಆರ್‌ಓ ಸದಾಶಿವ, ಸಿಬ್ಬಂದಿ ಹಾಗೂ ಮುಖಂಡರಾದ ಎಳಗಳ್ಳಿರವಿ, ಕೆ.ಎನ್. ದಿಲೀಪ್, ನಾಗರಾಜು ಇತರರಿದ್ದರು.

ಕೋಟ್‌..........

ಅರಣ್ಯ ಪ್ರದೇಶದಲ್ಲಿ ನೀರಿನ ಅಭಾವ ಉಂಟಾಗಿ ವನ್ಯ ಜೀವಿಗಳು ನೀರನ್ನು ಅರಸಿ ಗ್ರಾಮಗಳತ್ತ ಬರುತ್ತಿವೆ. ಚೀಲಂದವಾಡಿ ಗ್ರಾಮ ಅರಣ್ಯ ಪ್ರದೇಶದೊಳಗಿದ್ದು ಇಲಾಖೆಯಿಂದ ಸೋಲಾರ್ ಗೇಟ್ ಅಳವಡಿಸಲಾಗಿದೆ. ಇಲಾಖೆಯಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಮೃತ ವ್ಯಕ್ತಿಯ ಕುಟುಂಬಸ್ಥರಿಗೆ ಕೂಡಲೆ 5 ಲಕ್ಷ, ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ 15 ಲಕ್ಷ ಪರಿಹಾರದ ಜೊತೆಗೆ ಆತನ ಪತ್ನಿಗೆ 5 ವರ್ಷ ತಿಂಗಳಿಗೆ 4 ಸಾವಿರ ರುಪಾಯಿ ಮಾಸಾಶನ ನೀಡಲಾಗುವುದು.

-ಮಾಲತಿ ಪ್ರಿಯಾ, ಸಿಸಿಎಫ್‌

ಕೋಟ್‌...........

ಗ್ರಾಮದ ಗಡಿಯಲ್ಲಿ ಇಲಾಖೆ ನಿರ್ಮಿಸಿರುವ ಸೋಲಾರ್ ಗೇಟ್ ಮುರಿದು ಒಳಗೆ ನುಗ್ಗಿ ದಾಳಿ ಮಾಡಿವೆ. ಕಾವೇರಿ ವನ್ಯಜೀವಿ ವಲಯ ವ್ಯಾಪ್ತಿಯ 250 ಕಿ.ಮೀ. ವ್ಯಾಪ್ತಿಯ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ಈಗಾಗಲೇ 100 ಕಿಮೀ ವ್ಯಾಪ್ತಿ ಪೂರ್ಣಗೊಂಡಿದೆ. ಬಾಕಿ 150 ಕಿ.ಮೀ ವ್ಯಾಪ್ತಿಯ ಕಾರ್ಯ ಶೀಘದಲ್ಲೇ ಪೂರ್ಣಗೊಳಿಸಲಾಗುವುದು.

-ನಾಗೇಂದ್ರ ಪ್ರಸಾದ್, ಎಸಿಎಫ್‌

(ಫೋಟೋ ಕ್ಯಾಫ್ಞನ್‌)

ಕಾಡಾನೆ ದಾಳಿಯಿಂದ ಮೃತಪಟ್ಟ ರೈತ ಶಿವು ಮರಣೋತ್ತರ ಪರೀಕ್ಷೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಮಾಜಿ ಸಂಸದ ಡಿ.ಕೆ.ಸುರೇಶ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆಮನೆಗಳಲ್ಲಿ ಶ್ರೀ ಶಂಕರ ಜಯಂತಿ ಆಚರಣೆ
ಹಣಕ್ಕಿಂತ ಆರೋಗ್ಯವೇ ಅಮೂಲ್ಯ ಎಂದ ಶಾಸಕ ಸ್ವರೂಪ್‌