ಮಂಗಳೂರು: ಉದ್ಯೋಗಕ್ಕಾಗಿ ಇಸ್ರೇಲ್‌ಗೆ ತೆರಳಿದ್ದ ಮಂಗಳೂರು ಮೂಲದ ವ್ಯಕ್ತಿ ಕಳೆದ ಹಲವು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಈ ಬಗ್ಗೆ ಕುಟುಂಬಸ್ಥರು ಮಂಗಳೂರು ನಗರ ಪೊಲೀಸ್ ಆಯುಕ್ತರ ಜೊತೆಗೆ ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೂ ಅಧಿಕೃತ ಇಮೇಲ್ ದೂರು ಸಲ್ಲಿಸಿ ತುರ್ತು ರಕ್ಷಣೆಗೆ ಮನವಿ ಮಾಡಿದ್ದಾರೆ. ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡೆಕ್ಕಲ್ ನಿವಾಸಿ ಶಡ್ರಕ್ ಇಮ್ಯಾನುವಲ್ (41) ನಾಪತ್ತೆಯಾದ ವ್ಯಕ್ತಿ. ಶಡ್ರಕ್ ಇಮ್ಯಾನುವಲ್ ಮಂಗಳೂರಿನ ನೇಮಕಾತಿ ಸಂಸ್ಥೆಯೊಂದರ ಮೂಲಕ ಅಧಿಕೃತ ಉದ್ಯೋಗ ವೀಸಾ ಪಡೆದುಕೊಂಡು 2025ರ ಮೇ 16ರಂದು ಇಸ್ರೇಲ್‌ಗೆ ಪ್ರಯಾಣ ಬೆಳೆಸಿದ್ದು, ಇಸ್ರೇಲ್‌ನ ನಜರೆತ್ ಸಮೀಪದ ನೊಫ್ ಹಗಲಿಲ್ ಎಂಬಲ್ಲಿರುವ ಯುಸಿಟಿ ಲಿಕ್ವಿಡ್ ಸೊಲ್ಯೂಷನ್ಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅ.16ರ ರಾತ್ರಿ ವಾಟ್ಸ್‌ಆ್ಯಪ್ ವೀಡಿಯೋ ಕಾಲ್ ಮೂಲಕ ಕುಟುಂಬದೊಂದಿಗೆ ಮಾತನಾಡಿದ್ದರು. ನಂತರ ಅವರ ಮೊಬೈಲ್ ಸಂಪರ್ಕ ಸಂಪೂರ್ಣವಾಗಿ ಕಡಿದುಹೋಗಿದೆ. ಅ.18ರಂದು ಕುಟುಂಬಸ್ಥರು ಹಾಗೂ ಇಸ್ರೇಲ್‌ನಲ್ಲಿರುವ ಅವರ ಸ್ಥಳೀಯ ಸ್ನೇಹಿತರು ನಿರಂತರವಾಗಿ ವಾಟ್ಸ್‌ಆ್ಯಪ್ ಕರೆ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಕಂಪನಿಯ ಕೆಲಸದ ಸ್ಥಳದಲ್ಲೂ ಅವರು ಕಾಣಿಸದೆ ಇರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.