ಕನ್ನಡಪ್ರಭ ವಾರ್ತೆ ಕಲಬುರಗಿ
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಡಾ.ಶರಣಪ್ಪ ಮಾಹಿತಿ ನೀಡಿದರು. ಕಲಬುರಗಿ ಗಣೇಶ ನಗರದ ನಿವಾಸಿ ರಾಘವೇಂದ್ರ ನಾಯಕ್ ( 39) ಕೊಲೆಯಾದ ವ್ಯಕ್ತಿ.ಗುರುರಾಜ ಅಲಿಯಾಸ್ ಗುರು ಶೇಷಪ್ಪ ನೆಲೋಗಿ ( 36), ಅಶ್ವಿನಿ ಅಲಿಯಾಸ್ ತನು ರಾಜಶೇಖರ ಮಲ್ಲಾಬಾದ (26) ಮತ್ತು ಲಕ್ಷ್ಮೀಕಾಂತ ಮಲ್ಲಿಕಾರ್ಜುನ ಮಾಲಿ ಪಾಟೀಲ (28) ಬಂಧಿತ ಆರೋಪಿಗಳು.
ರಾಘವೇಂದ್ರ ನಾಯಕ್ ಎಂಬಾತ ಕಾಣೆಯಾಗಿದ್ದಾನೆಂದು ಮೇ 25 ರಂದು ಇಲ್ಲಿನ ಸ್ಟೇಷನ್ ಬಜಾರ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ತನಿಖೆಗೆ ಮುಂದಾದ ಪೊಲೀಸರಿಗೆ ರಾಘವೇಂದ್ರ ನಾಯಕನ ಬರ್ಬರ ಹತ್ಯೆಯಾಗಿರುದು ಗಮನಕ್ಕೆ ಬಂದಿದೆ. ಈ ಕುರಿತಂತೆ ವೈಜ್ಞಾನಿಕ ಸಾಕ್ಷಿ ಪುರಾವೆ ಸಂಗ್ರಹಿಸಿ ಪ್ರಕರಣದಲ್ಲಿ ಕಾಣೆಯಾದ ವ್ಯಕ್ತಿ ಕೊಲೆಯಾಗಿರುವುದನ್ನು ಪತ್ತೆಹಚ್ಚಲಾಗಿದೆ.ಘಟನೆಯ ವಿವರ:
ರಾಘವೇಂದ್ರನಿಗೆ ಕಲಬುರಗಿ ನಗರದ ಬ್ರಹ್ಮಪುರ ಬಡಾವಣೆ ವಡ್ಡರಗಲ್ಲಿ ಕೃಷ್ಣಾ ನಗರದ ಗುರುರಾಜನೊಂದಿಗೆ ತಕರಾರು ಇತ್ತು ಎಂದು ಮಾಹಿತಿ ದೊರೆಯಿತು.
ಮತ್ತಷ್ಟು ತನಿಖೆ ಚುರುಕುಗೊಳಿಸಿ ಮಾಹಿತಿ ಕಲೆಹಾಕಿದಾಗ ರಾಘವೇಂದ್ರ ಮೊದಲು ಅಶ್ವಿನಿ ಎಂಬ ಮಹಿಳೆಯೊಂದಿಗೆ ಸಹಜೀವನ ಸಂಬಂಧದಲ್ಲಿ ಇದ್ದ ಎಂದು ತಿಳಿಯಿತು. ಸ್ವಲ್ಪ ದಿನಗಳ ನಂತರ ಅಶ್ವಿನಿ ರಾಘವೇಂದ್ರನನ್ನು ಬಿಟ್ಟು ಗುರುರಾಜ ಜತೆ ಸಂಬಂಧ ಬೆಳೆಸಿದಳು. ಇದು ಇವರಿಬ್ಬರ ನಡುವೆ ವೈಷಮ್ಯಕ್ಕೆ ಕಾರಣವಾಯಿತು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.ಕಳೆದ ಮಾ.12 ರಂದು ರಾತ್ರಿ 8.30ರ ಸುಮಾರಿಗೆ ರಾಘವೇಂದ್ರ ಕಲಬುರಗಿ ನಗರದ ಸುಪರ ಮಾರ್ಕೆಟ್ ಹತ್ತಿರ ಇರುವ ಲಾಡ್ಜ್ ಹತ್ತಿರ ಇದ್ದ ಮಾಹಿತಿ ಪಡೆದ ಮೂವರು ಆರೋಪಿಗಳು ಅಲ್ಲಿಂದ ಕಾರಿನಲ್ಲಿ ಆತನನ್ನು ಕೂಡಿಸಿಕೊಂಡು ಕೃಷ್ಣಾ ನಗರದ ಸ್ಮಶಾನ ಭೂಮಿ ಹತ್ತಿರ ಕೈ ಮತ್ತು ಬಡಿಗೆಗಳಿಂದ ಹೊಡೆದು ಕೊಲೆಮಾಡಿ ನಂತರ ಶವವನ್ನು ಕಾರಿನಲ್ಲಿ ಹಾಕಿಕೊಂಡು ಶಹಾಬಾದ ಮೂಲಕ ರಾಯಚೂರ ಜಿಲ್ಲೆಯ ಶಕ್ತಿ ನಗರದ ಕೃಷ್ಣಾ ಬ್ರಿಡ್ಜ್ ಮೇಲಿಂದ ನದಿಯಲ್ಲಿ ಶವವನ್ನು ಎಸೆದು ಬಂದಿದ್ದಾರೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿರುವ ಶಂಕೆ ಇದೆ ಎಂದು ಡಾ.ಶರಣಪ್ಪ ಪ್ರಕರಣದ ಮಾಹಿತಿ ನೀಡಿದರು.
ಪ್ರಕರಣದಲ್ಲಿ ರಾಘವೇಂದ್ರನ ಜತೆ ಸಹಜೀವನ ಸಂಬಂಧದಲ್ಲಿದ್ದ ಮಹಿಳೆ ಅಶ್ವಿನಿ ಪ್ರಮುಖ ಪಾತ್ರ ವಹಿಸಿರುವುದು ತನಿಖೆಯಲ್ಲಿ ಬಯಲಾಗಿದೆ.