ಕಟಕೋಳದಲ್ಲಿ ವ್ಯಕ್ತಿ ಕೊಲೆ: ನಾಲ್ವರ ಬಂಧನ

KannadaprabhaNewsNetwork | Published : Mar 11, 2025 12:48 AM

ಸಾರಾಂಶ

ರಾಮದುರ್ಗ ತಾಲೂಕಿನ ಕಟಕೋಳದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಮದುರ್ಗ ತಾಲೂಕಿನ ಕಟಕೋಳದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟಕೋಳ ಹೊರವಲಯದಲ್ಲಿ ಫೆ.25ರಂದು ರಾತ್ರಿ ನಡೆದ ಸಣ್ಣರಾಮಪ್ಪ ಪತ್ತಾರ ಎಂಬ ವ್ಯಕ್ತಿಯನ್ನು ಕೊಲೆ ಮಾಡಿ ಅದನ್ನು ಅಪಘಾತ ಎಂದು ಬಿಂಬಿಸಲಾಗಿತ್ತು. ಈ ಪ್ರಕರಣವನ್ನು ಭೇದಿಸಿರುವ ಕಟಕೋಳ ಪೊಲೀಸರು ಕಟಕೋಳದ ಶಂಕರ ಜಾಧವ, ಚಿಕ್ಕೋಡಿಯ ಸುಲ್ತಾನ್‌ ಕಿಲ್ಲೇದಾರ, ರಾಹುಲ್‌ ಬಾಗೇವಾಡಿ ಮತ್ತು ನಿಪ್ಪಾಣಿ ಟಿಪ್ಪು ಮುಜಾವರ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.ಸಣ್ಣರಾಮಪ್ಪ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರಂಭದಲ್ಲಿ ಬಿಂಬಿಸಲಾಗಿತ್ತು. ಆದರೆ, ಪೊಲೀಸರು ಪರಿಶೀಲಿಸಿದಾಗ, ಅದು ಅಪಘಾತ ಅಲ್ಲ ಎಂಬ ಸಂಶಯ ಬಂತು. ಇದು ಅಪಘಾತವಲ್ಲ ಎಂದು ಕುಟುಂಬಸ್ಥರೂ ಸಂಶಯ ವ್ಯಕ್ತಪಡಿಸಿದ್ದರು. ಮರಣೋತ್ತರ ಪರೀಕ್ಷಾ ವರದಿಯಲ್ಲೂ ಕೊಲೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಎಲ್ಲ ಆಯಾಮಗಳಲ್ಲಿ ತನಿಖೆ ಕೈಗೊಂಡಾಗ ಕೊಲೆ ಮಾಡಿರುವುದು ತಿಳಿದುಬಂದಿದೆ ಎಂದರು.

ಮಹಾರಾಷ್ಟ್ರದಲ್ಲಿ ನೆಲೆಸಿರುವ ಘಾಟಗೆ ಅವರಿಗೆ ಸೇರಿದ 7 ಎಕರೆ, 2 ಗುಂಟೆ ಕೃಷಿಭೂಮಿ ಕಟಕೋಳದಲ್ಲಿ ಇತ್ತು. ಶಂಕರ ಜಾಧವ ಅದನ್ನು ಉಳುಮೆ ಮಾಡುತ್ತಿದ್ದರು. ಉಳುವವನೇ ಭೂಮಿ ಒಡೆಯ ಯೋಜನೆಯಡಿ ಅದನ್ನು ಪಡೆಯಲು ಪ್ರಯತ್ನಿಸಿದ್ದರು. ಆದರೆ, ನ್ಯಾಯಾಲಯದಲ್ಲಿ ಘಾಟಗೆ ಪರವಾಗಿ ತೀರ್ಪು ಬಂದಿತ್ತು. ಈ ಮಧ್ಯೆ, ಸಣ್ಣರಾಮಪ್ಪ ಪತ್ತಾರ ಆ ಭೂಮಿ ಉಳುಮೆ ಮಾಡುತ್ತಿದ್ದರು. ಈ ವಿಷಯವಾಗಿ ಶಂಕರ ಮತ್ತು ಸಣ್ಣರಾಮಪ್ಪ ಮಧ್ಯೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೇಳಿದರು.

ಸಣ್ಣರಾಮಪ‍್ಪ ಹತ್ಯೆ ಮಾಡಲು ಶಂಕರ ಎಂಬಾತ, ಸುಲ್ತಾನ್‌ ಕಿಲ್ಲೇದಾರ ಮತ್ತು ಆತನ ಗೆಳೆಯರಿಗೆ ₹2.5 ಲಕ್ಷ ಸುಪಾರಿ ಕೊಟ್ಟಿದ್ದ. ಈಗಾಗಲೇ ₹1.5 ಲಕ್ಷ ಹಣ ಕೊಟ್ಟಿದ್ದ. ಈ ಹಿಂದೆ ನಾಲ್ಕೈದು ಬಾರಿ ಸಣ್ಣರಾಮಪ್ಪ ಕೊಲೆಗೆ ಪ್ರಯತ್ನ ನಡೆದಿತ್ತು ಎಂದು ತಿಳಿಸಿದರು.

ಸಿಪಿಐ ಐ.ಆರ್‌.ಪಟ್ಟಣಶೆಟ್ಟಿ, ಪಿಎಸ್‌ಐ ಬಸವರಾಜ ಕೊಣ್ಣೂರೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಈ ಪ್ರಕರಣವನ್ನು ಭೇದಿಸಿದ ಪೊಲೀಸ್‌ ಸಿಬ್ಬಂದಿ ಕಾರ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಲೆ ಪ್ರಕರಣ: ಓರ್ವನ ಬಂಧನ

ಬೈಲಹೊಂಗಲ: ತಾಲೂಕಿನ ದೊಡವಾಡ ಠಾಣೆ ವ್ಯಾಪ್ತಿಯ ಗುಡಿಕಟ್ಟೆ ಹೊರವಲಯದಲ್ಲಿ ಮಾ.5ರಂದು ಬಾಗಲಕೋಟೆ ಜಿಲ್ಲೆಯ ಕಟಗೇರಿಯ ಕಟ್ಟಡ ಕಾರ್ಮಿಕ ಬಸವರಾಜ ಕುಂಬಾರ (48) ಎಂಬಾತನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪ್ರಕರಣ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ. ಪೈಲ್ವಾನ್ ಬಸವರಾಜ ಕಲ್ಲಯ್ಯ ಪೂಜಾರ(58) ಹತ್ಯೆ ಮಾಡಿದ ಆರೋಪಿ. ಈತ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ನಡೆದ ವಿವಿಧ ಕುಸ್ತಿ ಪಂದ್ಯಗಳಲ್ಲಿ ಗೆದ್ದಿದ್ದ. ಹೊಲದಲ್ಲಿ ಮನೆ ಕಟ್ಟುವ ವಿಚಾರವಾಗಿ ಸಣ್ಣ ಕಾರಣಕ್ಕೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

Share this article