ಜನ್ಮಾಂತರಗಳ ಪುಣ್ಯದ ಫಲವೇ ಮನುಷ್ಯ ಜನ್ಮ: ಅಮರೇಶ್ವರ ಶ್ರೀ

KannadaprabhaNewsNetwork | Published : Jun 25, 2024 12:32 AM

ಸಾರಾಂಶ

ಸೊರಬ ತಾಲೂಕಿನ ಬಂಕಸಾಣ ಗ್ರಾಮದ ವರದಾ ಉತ್ತರವಾಹಿನಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಮಾಸಿಕ ಶಿವಾನುಭವ ಹಾಗೂ ಅರಿವಿನೆಡೆಗೆ ಕಾರ್ಯಕ್ರಮದಲ್ಲಿ ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸೊರಬ

ಮನುಷ್ಯ ಜನ್ಮ ಬಹು ಅಮೂಲ್ಯವಾದುದು. ಈ ಜನ್ಮವನ್ನು ಪಡೆಯುವುದಕ್ಕಾಗಿ ಹಿಂದಿನ ಜನ್ಮದಲ್ಲಿ ಬಹಳ ಕಷ್ಟಪಟ್ಟಿದ್ದೇವೆ. ಲಕ್ಷಾಂತರ ಜನ್ಮಗಳಲ್ಲಿ ಕ್ರಿಮಿ, ಕೀಟಾದಿಗಳಾಗಿ, ಜಂತು ಜೀವವಾಗಿ ಜನಿಸಿ ಆ ಜನ್ಮದ ಸುಖ ದುಃಖವನ್ನು ಅನುಭವಿಸಿ ಆ ಜನ್ಮಗಳಲ್ಲಿ ಮಾಡಿದ ಪುಣ್ಯದ ಫಲವಾಗಿ ಈಗ ಮನುಷ್ಯ ಜನ್ಮ ಸಿಕ್ಕಿದೆ. ಆದ್ದರಿಂದ ಇಂತಹ ಮನುಷ್ಯ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಜಡೆ ಬಂಕಸಾಣ ಸಮಾಧಾನ ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಜಡೆ ಸಮೀಪದ ಬಂಕಸಾಣ ಗ್ರಾಮದ ವರದಾ ಉತ್ತರವಾಹಿನಿ ಕ್ಷೇತ್ರದ ಸಮಾಧಾನದಲ್ಲಿ ಆಯೋಜಿಸಿದ್ದ ಮಾಸಿಕ ಶಿವಾನುಭವ ಹಾಗೂ ಅರಿವಿನೆಡೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಎಲ್ಲರಿಗೂ ಎರಡೆರಡು ಕೈ, ಎರಡೆರಡು ಕಾಲ ಎರಡೆರಡು ಕಣ್ಣುಗಳೇ ಇರುತ್ತವೆ. ಕೆಲವೊಬ್ಬರಿಗೆ ಇದೆ ಕೈಗಳಿಂದ ಶಿಲ್ಪವನ್ನು ಕೆತ್ತಬೇಕು ಎನ್ನಿಸಿದರೆ ಮತ್ತೆ ಕೆಲವೊಬ್ಬರಿಗೆ ಅದೇ ಕಲ್ಲನ್ನು ಜಲ್ಲಿ ಮಾಡಬೇಕು ಎನ್ನಿಸುತ್ತದೆ. ಆದ್ದರಿಂದಲೇ ಒಂದು ಕಲ್ಲಿನ ಗುಡ್ಡ ಹಂಪಿಯಾಯಿತು. ಮತ್ತೊಂದು ಕ್ರಷರ್ ಆಯಿತು.

ನಿಸರ್ಗ ಬಹು ಅಪರೂಪವಾದದು. ಬಚ್ಚಲ ರೊಚ್ಚಿಯ ನೀರು ಹೋಗುವಲ್ಲಿ ಒಂದು ತೆಂಗಿನ ಸಸಿ ನೆಟ್ಟರೆ ಅದು ರುಚಿ ರುಚಿಯಾದ ಎಳೆನೀರನ್ನು ಕೊಡುತ್ತದೆ. ಸ್ವಾದಿಷ್ಟಕರವಾದ ತರಕಾರಿಗಳನ್ನು ನೀಡುತ್ತದೆ. ಇದು ನಿಸರ್ಗದ ನಿಯಮ. ಆದರೆ ಮನುಷ್ಯ ಈ ನಿಸರ್ಗವನ್ನು ಬಳಸಿ ಅದನ್ನು ವಿರೂಪಗೊಳಿಸುತ್ತಾನೆ ಎಂದರು.

ಶಿರಾಳಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಪ್ರಿಯದರ್ಶಿನಿ ಜಂಬೂರುಮಠ ಉಪನ್ಯಾಸ ನೀಡಿದರೆ, ಸಾಗರ ತಾಲೂಕು ವೀರಶೈವ ಸಮಾಜದ ನಿಕಟ ಪೂರ್ವ ಅಧ್ಯಕ್ಷ ಸಿದ್ಧಲಿಂಗೇಶ್ವರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾತೋಶ್ರೀ ಸುಶೀಲಮ್ಮ ಚನ್ನಬಸವಯ್ಯನವರ ಶ್ರದ್ಧಾಂಜಲಿ ನಡೆಯಿತು. ನಿಶ್ಚಿಂತ ಪ್ರಾರ್ಥಿಸಿದರು. ಸನ್ಮತಿ ನಿರೂಪಿಸಿದರು. ಶಿವಕುಮಾರಸ್ವಾಮಿ, ರೇಣುಕಯ್ಯಸ್ವಾಮಿ, ಬಂಗಾರಸ್ವಾಮಿ, ತಾರಕೇಶ್ವರ, ಸಿದ್ಧಲಿಂಗಯ್ಯ, ಪಂಚಾಕ್ಷರಿ, ಗಂಗಣ್ಣ, ಹೊಳೆಬಸಯ್ಯನವರು, ಮಹೇಶಯ್ಯ, ಮಧುಮತಿ ವರ್ಷಭೇಂದ್ರ ಗೌಡ್ರು ಹೇಮಲತಾ, ಸುಮಂಗಳಾ, ಶಿವಲೀಲಾ, ಇರಾಜಮ್ಮ ಮುಂತಾದವರು ಹಾಜರಿದ್ದರು.

Share this article