)
ಕನ್ನಡಪ್ರಭ ವಾರ್ತೆ ಬೆಂಗಳೂರು
ಹೊಸಕೋಟೆ ನಿವಾಸಿ ಜಿ.ಕೆ.ರಘುನಂದನ್ ಎಂಬುವರು ನೀಡಿದ ದೂರಿನನ್ವಯ ಸಂತೋಷ್ ಹೊಸಮನಿ, ರಾವ್, ಬಸವರಾಜ್ ಮತ್ತು ಮಹೇಶ್ ಎಂಬುವರ ಮೇಲೆ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತೋಷ್ ಹೊಸಮನಿ ತಾನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ (ಡಿಸಿಎಆರ್) ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ತನಗೆ ಕೆಪಿಎಸ್‌ಸಿ, ಉದ್ಯೋಗಸೌಧದ ಅಧಿಕಾರಿಗಳು ಮತ್ತು ವಿಧಾನಸೌಧದ ಸಚಿವಾಲಯದ ಅಧಿಕಾರಿಗಳು ನೇರ ಸಂಪರ್ಕ ಮತ್ತು ಪರಿಚಯವಿದ್ದು ನಿಮಗೆ ಕೆಪಿಎಸ್‌ಸಿ ಮುಖೇನ ಪಿಡಿಒ ಕೆಲಸ ಕೊಡಿಸುತ್ತೇನೆಂದು ನಂಬಿಸಿ 50 ಲಕ್ಷದ ಹಣದ ಬೇಡಿಕೆ ಇಟ್ಟಿದ್ದ. ಮುಂಗಡವಾಗಿ 20 ಲಕ್ಷ ರು. ನೀಡಬೇಕು ಹೇಳಿದ್ದ. ಇದನ್ನು ನಂಬಿದ್ದ ನಾನು 2024ರ ಡಿಸೆಂಬರ್ 5 ರಂದು ಒಡವೆ ಅಡವಿಟ್ಟು 10 ಲಕ್ಷ ರು. ಅನ್ನು ಮಹೇಶ್ ಮತ್ತು ನಂದೀಶ್ ಎಂಬುವರ ಮೂಲಕ ನೀಡಿದ್ದೆ. ನಂತರ 2025ರ ಮಾರ್ಚ್‌ನಲ್ಲಿ 2 ಲಕ್ಷ ರು. ಹೀಗೆ ಹಂತ ಹಂತವಾಗಿ ಒಟ್ಟು 26 ಲಕ್ಷ ರು.ನೀಡಿದ್ದೆ.ಹುದ್ದೆಯ ಆದೇಶ ಪ್ರತಿ ಬರುವುದು ತಡವಾಗಿದೆ ಎಂದು ತನ್ನನ್ನು ನಂಬಿಸಲು ಸಂತೋಷ್, ಬಸವರಾಜ್ ಎಂಬ ವ್ಯಕ್ತಿಯಿಂದ ವಾಟ್ಸ್ ಆ್ಯಪ್ ಕರೆ ಮಾಡಿಸಿ ಸಮಾಧಾನ ಪಡಿಸಲು ಯತ್ನಿಸಿದ್ದ. ನಂತರ ರಾವ್ ಎಂಬ ವ್ಯಕ್ತಿ ಕೆಪಿಎಸ್‌ಸಿ ಕಚೇರಿಯ ದೂರವಾಣಿಯಿಂದ ಕರೆ ಮಾಡಿ ಕೆಲಸ ಮಾಡಿಕೊಡುವ ಭರವಸೆ ನೀಡಿದ್ದರು. ಹೀಗೆ ಸುಳ್ಳು ಹೇಳುತ್ತಾ 26 ಲಕ್ಷ ರು. ಪಡೆದು ವಂಚನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಘುನಂದನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.