ಕುಡಿದು ಟೆಸ್ಟ್‌ ಡ್ರೈವ್‌ ಕಾರು ಚಲಾಯಿಸಿ ವಾಹನಗಳಿಗೆ ಗುದ್ದಿಸಿದ್ದವನಿಗೆ ಗೂಸಾ

KannadaprabhaNewsNetwork |  
Published : Apr 18, 2026, 03:45 AM IST
Accident

ಸಾರಾಂಶ

 ಮದ್ಯ ಸೇವಿಸಿದ್ದರಿಂದ ಚಾಲನೆಗೆ ಅವಕಾಶ ನೀಡದ ಕಾರಣಕ್ಕೆ ಸಿಟ್ಟಿಗೆದ್ದು ಟೆಸ್ಟ್‌ ಡ್ರೈವ್‌ನ ಎಕ್ಸ್‌ಯುವಿ ಕಾರನ್ನು ಶೋ ರೂಂನಿಂದ ಏಕಾಏಕಿ ತೆಗೆದುಕೊಂಡು ಹೋಗಿ 4  ವಾಹನಗಳಿಗೆ ಗುದ್ದಿಸಿದ್ದ ಪ್ರತಿಷ್ಠಿತ ಕಾರು ಮಾರಾಟ ಮಳಿಗೆ ನೌಕರನೊಬ್ಬನಿಗೆ ಸಾರ್ವಜನಿಕರು ಥಳಿಸಿರುವ ಘಟನೆ ಮಹದೇವಪುರ ಸಮೀಪ ನಡೆದಿದೆ.

  ಬೆಂಗಳೂರು :  ತಾನು ಮದ್ಯ ಸೇವಿಸಿದ್ದರಿಂದ ಚಾಲನೆಗೆ ಅವಕಾಶ ನೀಡದ ಕಾರಣಕ್ಕೆ ಸಿಟ್ಟಿಗೆದ್ದು ಟೆಸ್ಟ್‌ ಡ್ರೈವ್‌ನ ಎಕ್ಸ್‌ಯುವಿ ಕಾರನ್ನು ಶೋ ರೂಂನಿಂದ ಏಕಾಏಕಿ ತೆಗೆದುಕೊಂಡು ಹೋಗಿ ನಾಲ್ಕು ವಾಹನಗಳಿಗೆ ಗುದ್ದಿಸಿದ್ದ ಪ್ರತಿಷ್ಠಿತ ಕಾರು ಮಾರಾಟ ಮಳಿಗೆ ನೌಕರನೊಬ್ಬನಿಗೆ ಸಾರ್ವಜನಿಕರು ಥಳಿಸಿರುವ ಘಟನೆ ಮಹದೇವಪುರ ಸಮೀಪ ನಡೆದಿದೆ.

ಬಿ.ನಾರಾಯಣಪುರದ ನಿವಾಸಿ, ಮಹೀಂದ್ರ ಕಾರು ಮಾರಾಟ ಮಳಿಗೆ ನೌಕರ ಅಭಿಲಾಷ್ ಹಲ್ಲೆಗೊಳಗಾಗಿದ್ದು, ಇತ್ತೀಚೆಗೆ ತನ್ನ ಮಳಿಗೆಯ ಟೆಸ್ಟ್‌ ಡ್ರೈವ್‌ಗೆ ಮೀಸಲಿಟ್ಟಿದ್ದ ಕಾರನ್ನು ತೆಗೆದುಕೊಂಡು ಹೋಗಿ ಅಭಿಲಾಷ್ ಈ ಕೃತ್ಯ ಎಸಗಿದ್ದಾನೆ. ಘಟನೆಯಲ್ಲಿ ನಾಲ್ಕು ಕಾರುಗಳು ಜಖಂಗೊಂಡಿದ್ದು, ಒಬ್ಬರ ಕಾಲಿಗೆ ಪೆಟ್ಟಾಗಿದೆ. ಅದೃಷ್ಟವಾಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

 ಸ್ನೇಹಿತರ ಜತೆ ಮದ್ಯ ಸೇವನೆ

ಕೆಲ ತಿಂಗಳಿಂದ ವಿಜ್ಞೇಶ್ವರ ನಗರ ಸಮೀಪದ ಮಹೀಂದ್ರ ಕಾರು ಮಾರಾಟ ಮಳಿಗೆಯಲ್ಲಿ ಅಭಿಲಾಷ್ ಕೆಲಸ ಮಾಡುತ್ತಿದ್ದ. ಏ.12 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಸಮೀಪದ ಮಳಿಗೆಯ ಗೋದಾಮಿನಿಂದ ಎರಡು ಹೊಸ ಎಕ್ಸ್‌ ಯುವಿ ಕಾರುಗಳನ್ನು ತರಲು ನಾಲ್ವರು ನೌಕರರು ತೆರಳಿದ್ದರು. ಆಗ ಹೊಸ ಕಾರುಗಳನ್ನು ಸಿಬ್ಬಂದಿ ತೆಗೆದುಕೊಂಡು ಮರಳುತ್ತಿದ್ದರು. ಆದರೆ ಮಾರ್ಗ ಮಧ್ಯೆ ಸ್ನೇಹಿತರ ಜತೆ ಊಟಕ್ಕೆ ಹೋದ ಅಭಿಲಾಷ್ ಮದ್ಯ ಸೇವಿಸಿದ್ದ. ಈ ಸಂಗತಿ ತಿಳಿದ ಸಹೋದ್ಯೋಗಿಗಳು, ಆತನಿಗೆ ಕಾರು ಓಡಿಸಲು ಅವಕಾಶ ನೀಡಿಲ್ಲ. ಆದರೆ ತಾನು ಎಕ್ಸ್‌ಯುವಿ ಚಲಾಯಿಸುವ ಇಚ್ಛೆಯನ್ನು ಆತ ವ್ಯಕ್ತಪಡಿಸಿದ್ದ. ಕೊನೆಗೆ ಗೋಗರೆದರೂ ಆತನಿಗೆ ಕಾರು ಓಡಿಸಲು ಕೊಡದೆ ಸಹೋದ್ಯೋಗಿಗಳು ಮಳಿಗೆಗೆ ಬಂದಿದ್ದರು.

ಇದರಿಂದ ಅಭಿಲಾಷ್‌ಗೆ ಕೋಪ ಬಂದಿದೆ. ಆಗ ಶೋ ರೂಂ ಆವರಣದಲ್ಲಿ ಹೊಸ ಕಾರುಗಳನ್ನು ನಿಲುಗಡೆ ಮಾಡಲು ಸಿಬ್ಬಂದಿ ತೆರಳುತ್ತಿದ್ದಂತೆ ಆತ, ಕೂಡಲೇ ಟೆಸ್ಟ್ ಡ್ರೈವ್‌ಗೆ ಮೀಸಲಿಟ್ಟಿದ್ದ ಎಕ್ಸ್‌ಯುವಿ ಚಲಾಯಿಸಿಕೊಂಡು ರಸ್ತೆಗೆ ನುಗ್ಗಿದ್ದಾನೆ. ಮದ್ಯದ ಅಮಲಿನಲ್ಲಿ ಕಾರನ್ನು ಅತಿವೇಗವಾಗಿ ಅಭಿಲಾಷ್ ಚಲಾಯಿಸಿದ್ದಾನೆ. ಆಗ ನಿಯಂತ್ರಣ ತಪ್ಪಿ ಮೂರು ಕಾರುಗಳಿಗೆ ಗುದ್ದಿಸಿದ್ದಾನೆ. ಇದರಿಂದ ಕೆರಳಿದ ಸಾರ್ವಜನಿಕರು, ಅಭಿಲಾಷ್‌ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಹಲ್ಲೆಗೊಳಗಾಗಿದ್ದ ಆತನನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಬಗ್ಗೆ ಮಹದೇವಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಭಿಲಾಷ್ ವಿಚಾರಣೆ ನಡೆಸಿದ ಪೊಲೀಸರು

ಟೆಸ್ಟ್ ಡ್ರೈವ್ ಕಾರು ಅಪಘಾತ ಪ್ರಕರಣ ಸಂಬಂಧ ಆರೋಪಿ ಅಭಿಲಾಷ್‌ನನ್ನು ವಿಚಾರಣೆ ನಡೆಸಿ ಮಹದೇವಪುರ ಸಂಚಾರ ಠಾಣೆ ಪೊಲೀಸರು ಹೇಳಿಕೆ ಪಡೆದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತನಿಗೆ ನೋಟಿಸ್ ನೀಡಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಗೊಂಡ ಕೂಡಲೇ ಆರೋಪಿ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಅತಿಥಿ ತಂದು ಕೊಟ್ಟಿದ್ದ ಮಾವಿನ ಹಣ್ಣು ಸೇವಿಸಿ ಇಬ್ಬರು ಬಾಲಕಿಯರು ಸಾವು!
ಮೆಡಿಕಲ್‌ ಸೀಟು ಶುಲ್ಕ ಈ ವರ್ಷ ಹೆಚ್ಚಿಸದಿರಲು ಸರ್ಕಾರ ನಿರ್ಧಾರ