ಮಂಗಳೂರು: ಮುಡಿಪು ಉತ್ಸವ ಸಮಿತಿ, ಕೃಷಿಕ ಸಮಾಜ ಉಳ್ಳಾಲ ತಾಲೂಕು, ಯು.ಟಿ. ಫರೀದ್ ಚಾರಿಟೆಬಲ್ ಫೌಂಡೇಶನ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳು, ಸರ್ಕಾರಿ ಇಲಾಖೆಗಳ ಸಹಭಾಗಿತ್ವದಲ್ಲಿ ಬೃಹತ್ ಕೃಷಿ ಮೇಳ ಮತ್ತು ಮುಡಿಪು ಉತ್ಸವ ಅಲ್ಲಿನ ಶ್ರೀಕೃಷ್ಣ ಧ್ಯಾನ ಮಂದಿರ ವಠಾರದಲ್ಲಿ ಏ.24ರಿಂದ 26ರವರೆಗೆ ನಡೆಯಲಿದೆ.
ಮಂಗಳೂರು: ಮುಡಿಪು ಉತ್ಸವ ಸಮಿತಿ, ಕೃಷಿಕ ಸಮಾಜ ಉಳ್ಳಾಲ ತಾಲೂಕು, ಯು.ಟಿ. ಫರೀದ್ ಚಾರಿಟೆಬಲ್ ಫೌಂಡೇಶನ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳು, ಸರ್ಕಾರಿ ಇಲಾಖೆಗಳ ಸಹಭಾಗಿತ್ವದಲ್ಲಿ ಬೃಹತ್ ಕೃಷಿ ಮೇಳ ಮತ್ತು ಮುಡಿಪು ಉತ್ಸವ ಅಲ್ಲಿನ ಶ್ರೀಕೃಷ್ಣ ಧ್ಯಾನ ಮಂದಿರ ವಠಾರದಲ್ಲಿ ಏ.24ರಿಂದ 26ರವರೆಗೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಉತ್ಸವ ಸಮಿತಿ ಅಧ್ಯಕ್ಷ, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಏ.24ರಂದು ಬೆಳಗ್ಗೆ 9.30ಕ್ಕೆ ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರು ಕೃಷಿ ಮೇಳವನ್ನು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಡಿಪು ಉತ್ಸವ ಹಾಗೂ ಸಂಸದ ಕ್ಯಾ, ಬ್ರಿಜೇಶ್ ಚೌಟ ಅವರು ಆಹಾರ ಮೇಳ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಧ್ಯಾನ ಮಂದಿರದ ಸಂಸ್ಥಾಪಕ ಡಾ. ಮದನ್ ಮೋಹನ್ ನಾಯ್ಕ್ ಅವರಿಗೆ ‘ಸೇವಾ ಧುರಂಧರ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಮೂರು ದಿನದ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಮುಡಿಪುವನ್ನು ಕೇಂದ್ರವಾಗಿಟ್ಟುಕೊಂಡು ಸುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿ ಈ ಕೃಷಿ ಮೇಳ, ಉತ್ಸವ ಆಯೋಜಿಸಲಾಗಿದೆ ಎಂದು ಖಾದರ್ ಹೇಳಿದರು.
ಸಮಿತಿ ಕಾರ್ಯಾಧ್ಯಕ್ಷ ದೇವದಾಸ್ ಭಂಡಾರಿ ಮಾತನಾಡಿ, ಉತ್ಸವದ ಹಿನ್ನೆಲೆಯಲ್ಲಿ ಏ.22ರಂದು ಬೆಳಗ್ಗೆ ಗುಡ್ಡಗಾಡು ಓಟ, ಸ್ವಚ್ಛ ಮುಡಿಪು ಅಭಿಯಾನ, ಏ.24ರಂದು ಸೀರೆ ನಡಿಗೆ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಏ.25ರಂದು ದಫ್ ಪ್ರದರ್ಶನ, ಕ್ರಿಸ್ತ ಜನನ ನೃತ್ಯ ರೂಪಕ, ಏ.24ರಿಂದ 26ರವರೆಗೆ ಪ್ರತಿದಿನ ಸಂಜೆ 3.30ರಿಂದ 5ರವರೆಗೆ ಭಜನಾ ಸಂಕೀರ್ತನೆ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಕೃಷಿ ವಿಚಾರ ಸಂಕಿರಣದಲ್ಲಿ ಮಣ್ಣಿನ ಫಲವತ್ತತೆ, ಪೋಷಕಾಂಶ ನಿರ್ವಹಣೆ, ಉನ್ನತ ತಳಿಯ ಕರು ಪ್ರದರ್ಶನ ಮತ್ತು ಮಾಹಿತಿ, ಅಡಕೆ ಎಲೆ ಚುಕ್ಕೆ ರೋಗ, ತೋಟಗಾರಿಕಾ ಬೆಳೆಗಳಲ್ಲಿ ಸಮಗ್ರ ನಿರ್ವಹಣೆ, ಜೇನು ಸಾಕಣೆ, ಹೈನುಗಾರಿಕೆ ಮೊದಲಾದ ವಿಚಾರಗಳ ಕುರಿತು ಮಾಹಿತಿ ವಿನಿಮಯ, ಚರ್ಚೆಗಳು ನಡೆಯಲಿವೆ ಎಂದು ಹೇಳಿದರು.
ಮಹಿಳಾ ಸಮಿತಿ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಮಾತನಾಡಿ, ಉತ್ಸವದಲ್ಲಿ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 24ರಂದು ಬೆಳಗ್ಗೆ 9ಗಂಟೆಗೆ ಮುಡಿಪು ಜಂಕ್ಷನ್ ನಿಂದ ಧ್ಯಾನ ಮಂದಿರದ ವರೆಗೆ ಸೀರೆ ನಡಿಗೆ ಸ್ಪರ್ಧೆ, 25 ಸಂಜೆ 4 ಗಂಟೆಗೆ ಮೆಹಂದಿ ಸ್ಪರ್ಧೆ, ಬಳಿಕ ಬೆಂಕಿ ರಹಿತ ಅಡುಗೆ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.ಸಮಿತಿ ಗೌರವಾಧ್ಯಕ್ಷ ಡಾ. ಮದನ್ ಮೋಹನ್ ನಾಯ್ಕ್, ಪ್ರಧಾನ ಕಾರ್ಯದರ್ಶಿ ಹೈದರ್ ಕೈರಂಗಳ, ಕೋಶಾಧಿಕಾರಿ ರಾಧಾಕೃಷ್ಣ ರೈ ಉಮಿಯ, ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷೆ ಅಪ್ಪಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.