ಕನ್ನಡಪ್ರಭ ವಾರ್ತೆ ಮೈಸೂರುಪ್ರೊ. ಬಸವರಾಜಪ್ಪ ಅವರು ಮಾನವೀಯ ಮೌಲ್ಯಗಳನ್ನು ಹೊಂದಿದ ಒಳಗಣ್ಣಿನ ಬೆಳಕು ಎಂದು ವಿಶ್ರಾಂತ ಕುಲಪತಿ ಪ್ರೊ.ಎಚ್.ಎ. ರಂಗನಾಥ್ ಹೇಳಿದರು.ಮಾನಸ ಗಂಗೋತ್ರಿಯ ಪ್ರಾಣಿಶಾಸ್ತ್ರ ವಿಭಾಗದ ಪ್ರೊ. ರಾಜಶೇಖರ ಶೆಟ್ಟಿ ಸಭಾಂಗಣದಲ್ಲಿ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಪ್ರೊ.ಎಸ್. ಬಸವರಾಜಪ್ಪ ಅವರಿಗೆ ಬುಧವಾರ ಆಯೋಜಿಸಿದ್ದ ವಯೋ ನಿವೃತ್ತಿ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, ಕರ್ತವ್ಯ ನಿರ್ವಹಿಸುತ್ತಿದ್ದಾಗ ಯಾರ ಚಾಡಿ ಮಾತನ್ನೂ ಕೇಳುತ್ತಿರಲಿಲ್ಲ. ವ್ಯಕ್ತಿಯಲ್ಲಿನ ಪ್ರತಿಭೆ ಗುರುತಿಸಿ ಬೆನ್ನು ತಟ್ಟುವ ಕೆಲಸ ಮಾಡುವ ಗುಣ ಹೊಂದಿದ್ದ ಪ್ರೊ.ಎಸ್. ಬಸವರಾಜಪ್ಪ ಅವರು ಪ್ರೇರಣೆ ಆಗಿದ್ದಾರೆ. ಕೆಲವು ಪ್ರಾಧ್ಯಾಪಕರು ಪಾಠಕ್ಕೆ ಸೀಮಿತರಾಗಿರುತ್ತಾರೆ. ಆದರೆ, ಇವರು ನಮ್ಮೆಲ್ಲರಿಗೂ ಆದರ್ಶರಾಗಿದ್ದಾರೆ ಎಂದು ಶ್ಲಾಘಿಸಿದರು.ಮನುಷ್ಯನ ಪ್ರವೃತ್ತಿ ಸಮಾಜದ ಒಳಿತಿಗೆ ಪೂರಕವಾಗಿರಬೇಕು. ಅಂತೆಯೇ ವೃತ್ತಿಯಲ್ಲಿ ಅಧ್ಯಾಪಕರಾಗಿ ಪ್ರವೃತ್ತಿಯಲ್ಲಿ ಬಹುಮುಖ ಸಾಧನೆ ತೋರಿದ ವ್ಯಕ್ತಿ ಪ್ರೊ.ಎಸ್. ಬಸವರಾಜಪ್ಪ. ನಾನು ಪ್ರೊ.ಎಸ್. ಬಸವರಾಜಪ್ಪ ಅವರಲ್ಲಿ ಸಮಾನ ವ್ಯಕ್ತಿತ್ವವನ್ನು ಕಂಡಿದ್ದೇನೆ. ಮೈಸೂರಿನ ವಿಶಿಷ್ಟತೆಯ ಬಗ್ಗೆ ಅವರು ಸದಾ ಯೋಚಿಸುತ್ತಾರೆ. ಪ್ರಾಣಿಶಾಸ್ತ್ರದ ಬಗ್ಗೆ ಅವರಿಗೆ ಅಪಾರ ಪ್ರೀತಿ. ಮೈಸೂರು ವಿವಿಗೆ ಸಮರ್ಥ ಆಡಳಿತ ಮತ್ತು ಶೈಕ್ಷಣಿಕ ವ್ಯವಸ್ಥೆಯನ್ನು ಅವರು ಕಟ್ಟಿಕೊಟ್ಟಿದ್ದಾರೆ. ತಮ್ಮ ನಗು ಮೊಗ, ಸ್ನೇಹ ಹೃದಯ ಹಾಗೂ ಶಿಸ್ತಿನಿಂದಲೇ ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಹೇಳಿದರು.ಯಾವುದೇ ಕೆಲಸವನ್ನು ತಾಂತ್ರಿಕವಾಗಿ ಮಾಡದೆ ತನು, ಮನದಿಂದ ಒಪ್ಪಿ ಅದರಲ್ಲಿ ಕಾರ್ಯ ಪ್ರವೃತ್ತರಾಗಿದ್ದರಿಂದ ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ. ಅವುಗಳ ಪೋಷಕರಾಗಿ, ಪದಾಧಿಕಾರಿಯಾಗಿ, ಸಲಹೆಗಾರರಾಗಿ, ಮಾರ್ಗದರ್ಶಕರಾಗಿ ಶ್ರಮಿಸುತ್ತಿದ್ದಾರೆ ಎಂದರು.ಪ್ರೊ.ಎಸ್. ಬಸವರಾಜಪ್ಪ ಅವರು ಇಡೀ ಪ್ರಾಣಿಶಾಸ್ತ್ರ ವಿಭಾಗವನ್ನು ಕುಟುಂಬದಂತೆ ನೋಡಿಕೊಂಡರು. ಮಾತೃ ಹೃದಯಿಯಂತೆ ಎಲ್ಲರನ್ನೂ ಸಲಹಿದರು. ಜೊತೆಗೆ ಅವರ ಜೀವನ ಬೆಂಕಿಯಲ್ಲಿ ಅರಳಿದ ಹೂವಿನಂತೆ. ನಮ್ಮಿಬ್ಬರಿಗೂ ಏನೋ ಒಂದು ಅವಿನಾಭಾವ ಸಂಬಂಧ ಇದೆ ಎಂದು ಅವರು ಹೇಳಿದರು.ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಬಸವರಾಜಪ್ಪ ಅವರು ವಿಶಿಷ್ಟ ವಿದ್ವಾಂಸ, ಶ್ರೇಷ್ಠ ವಿಜ್ಞಾನಿ, ಸಮರ್ಪಿತ ಶಿಕ್ಷಕ, ಸಮರ್ಥ ಆಡಳಿತಗಾರ ಹಾಗೂ ಅನೇಕ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಮಾರ್ಗದರ್ಶಕರಾಗಿರುವ ಡಾ.ಎಸ್. ಬಸವರಾಜಪ್ಪ ಅವರ ನಿವೃತ್ತಿಯ ವೇಳೆ ಅವರನ್ನು ಸನ್ಮಾನಿಸಲು, ಮಾತನಾಡಲು ಅವಕಾಶ ದೊರೆತಿರುವುದು ಹೆಮ್ಮೆಯ ಸಂಗತಿ ಎಂದರು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರೊ.ಎಸ್. ಬಸವರಾಜಪ್ಪ, ಸಮಾಜಕ್ಕೆ ಒಳ್ಳೆಯದನ್ನು ಬಯಸುವವರಿಂದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಒಳ್ಳೆಯ ಪುಸ್ತಕಗಳನ್ನು, ಸಮಾಜದ ಪ್ರಗತಿಗೆ ಶ್ರಮಿಸಿದವರ ಪುಸ್ತಕಗಳನ್ನು ಓದಬೇಕು. ಒಳ್ಳೆಯವರ ಜೀವನ, ಸಾಧನೆ ಪುಸ್ತಕ ದಾಖಲಾಗಬೇಕು ಎಂದರು.ಪ್ರೊ.ವಿ. ಶಕುಂತಲಾ ಮೊದಲಾದವರು ಇದ್ದರು.