ಮಂಚೇನಹಳ್ಳಿ ತಾಲೂಕು ಬಂದ್ ಸಂಪೂರ್ಣ

KannadaprabhaNewsNetwork |  
Published : Apr 28, 2025, 11:50 PM IST
ಸಿಕೆಬಿ-1  ಬಂದ್ ಪ್ರಯುಕ್ತ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ಜನ ಸಂಚಾರವಿಲ್ಲದೇ  ಬಿಕೋ ಎನ್ನುತ್ತಿರುವ  ಮಂಚೇನಹಳ್ಳಿ ಪಟ್ಟಣ   ಸಿಕೆಬಿ-2 ಪ್ರತಿಭಟನಾ ನಿರತ ರೈತರು | Kannada Prabha

ಸಾರಾಂಶ

ಮಂಚೇನಹಳ್ಳಿ ಬಂದ್ ಪ್ರಯುಕ್ತ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ಜನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿರುವ ಮಂಚೇನಹಳ್ಳಿ ಪಟ್ಟಣ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಚೇನಹಳ್ಳಿ ತಾಲೂಕಿನ ಕನಗಾನಕೊಪ್ಪ ಗ್ರಾಮದ ಬಳಿ ಕಲ್ಲು ಕ್ವಾರಿ ವಿಚಾರದಲ್ಲಿ ಕಳೆದ ಏ.23 ರಂದು ರೈತನ ಮೇಲೆ ಗುಂಡು ಹಾರಿಸಿರುವುದನ್ನು ಖಂಡಿಸಿ, ಕೂಡಲೆ ಕ್ವಾರಿ ಪರವಾನಿಗೆ ರದ್ದು ಪಡಿಸಲು ಆಗ್ರಹಿಸಿ ವಿವಿಧ ರೈತ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಮಂಚೇನಹಳ್ಳಿ ಬಂದ್ ಯಶಸ್ವಿಯಾಗಿದೆ.

ಜಿಲ್ಲೆಯಾದ್ಯಂತ ಭಾರಿ ಸುದ್ದು ಮಾಡಿದ್ದ ಕನಗಾನಕೊಪ್ಪ ಗ್ರಾಮದ ಬಳಿ ಕ್ರಷರ್ ನಡೆಸುವ ಸಕಲೇಶ್ ಕುಮಾರ್ ಎಂಬುವವರು ರಸ್ತೆ ನಿರ್ಮಾಣ ವಿಚಾರದಲ್ಲಿ ಉಂಟಾದ ಘರ್ಷಣೆ ಹಿನ್ನೆಲೆಯಲ್ಲಿ ಓರ್ವ ರೈತನ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ ಪ್ರಕರಣ. ಹಾಗೂ ಈ ಪ್ರಕರಣದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಈ ಘಟನೆಯ ಹಿನ್ನೆಲೆಯಲ್ಲಿ ವಿವಿಧ ರೈತ ಸಂಘಟನೆಗಳು ಸೋಮವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಂಚೇನಹಳ್ಳಿ ಬಂದ್‌ಗೆ ಕರೆ ನೀಡಿದ್ದು ಬಂದ್ ಸಂಪೂರ್ಣ ಶಾಂತಿಯುತವಾಗಿ ಯಶಸ್ವಿಯಾಯಿತು.ಬೆಳಗ್ಗೆ ವಿವಿಧ ರೈತ ಸಂಘಟನೆಯ ಮುಖಂಡರು ರಸ್ತೆಗಿಳಿದು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಬಂದ್‌ಗೆ ಸಹಕರಿಸುವಂತೆ ಕೋರಿದರು. ಮಂಚೇನಹಳ್ಳಿ ತಾಲೂಕು ಬಂದ್ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ನಡುವಿನ ರಸ್ತೆ ಸಂಚಾರ ಸಂಪೂರ್ಣನಿಷಿದ್ಧವಾಗಿತ್ತು. ಕೆಎಸ್ಆರ್ಟಿಸಿ ಬಸ್ ಒಳಗೊಂಡಂತೆ ಯಾವುದೇ ವಾಹನಗಳಿಗೂ ಮಂಚೇನಹಳ್ಳಿ ಮೂಲಕ ಗೌರಿಬಿದನೂರು ಅನಂತರದ ಊರುಗಳಿಗೆ ಪ್ರಯಾಣಿಸಲು ಸಾಧ್ಯವಾಗಿಲ್ಲ. ಮಂಚೇನಹಳ್ಳಿಯಲ್ಲಿ ಅಂಗಡಿ, ಮುಂಗಟ್ಟು,ಹೋಟೆಲ್, ಪೆಟ್ರೋಲ್ ಬಂಕ್ ಸೇರಿದಂತೆ ಎಲ್ಲವೂ ಸ್ವಯಂಪ್ರೇರಿತವಾಗಿ ಬಂದ್ ಆಗಿದ್ದು ಮಂಚೇನಹಳ್ಳಿಯ ರಸ್ತೆಗಳು ಸಂಪೂರ್ಣ ಖಾಲಿ ಖಾಲಿಯಾಗಿದ್ದವು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ (ಪುಟ್ಟಣ್ಣಯ್ಯ ಬಣ) ರಾಜ್ಯ ಉಪಾಧ್ಯಕ್ಷ ಟಿ.ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಿಂದೆ ಅವರು ಪರವಾನಿಗೆ ಕೊಟ್ಟಿದ್ದರು, ಆದರೆ ತಡೆ ಹಿಡಿಯಲಾಗಿತ್ತು ಎಂದು ಹೇಳಿದ್ದಾರೆ. ಈಗಿನ ಶಾಸಕರು ಮತ್ತೆ ಅನುಮತಿ ನೀಡಿದ್ದಾರೆ ಎಂಬುದು ಸಂಸದರ ಆರೋಪವಾಗಿದೆ. ಈ ವಿಚಾರದಲ್ಲಿ ಸತ್ಯ ಏನೇ ಇದ್ದರೂ ಕೂಡಲೇ ಕ್ವಾರಿ ಪರವಾನಿಗೆ ರದ್ದು ಮಾಡಬೇಕು. ಆರೋಪಿ ಸಕಲೇಶ್‌ಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಎಂದೂ ಇಲ್ಲದ ಗನ್ ಸಂಸ್ಕೃತಿ ಪ್ರದರ್ಶನವಾಗುತ್ತಿದೆ. ಗಣಿ, ಕ್ರಷರ್, ಕ್ವಾರಿಗಳ, ಧಣಿಗಳಿಂದ ರೈತರು ಸಾರ್ವಜನಿಕರ ಮೇಲೆ ದಾಳಿ ದೌರ್ಜನ್ಯ ಪ್ರಾರಂಭವಾಗಿದೆ. ಕೂಡಲೆ ಈ ವಿಚಾರವನ್ನು ಸದನದಲ್ಲಿ ಪ್ರಸ್ಥಾಪಿಸಿ ಕ್ರಷರ್ ಪರವಾನಗಿ ರದ್ದು ಪಡಿಸಬೇಕು ಹಾಗೂ ಗಾಯಾಳು ರೈತ ರವಿಯ ಜೀವನೋಪಾಯಕ್ಕಾಗಿ ಕ್ರಷರ್ ಮಾಲಿಕರಿಂದ ಒಂದು ಕೋಟಿ ರು.ಗಳ ಪರಿಹಾರವನ್ನು ನೀಡುವಂತೆ ಒತ್ತಾಯಿಸಿದರು.

ಕರ್ನಾಟಕ ರೈತ ಜನ ಸೇನಾ ಸಂಸ್ಥಾಪಕ ಅಧ್ಯಕ್ಷೆ ಸಿ.ಎನ್.ಸುಷ್ಮಾ ಶ್ರೀನಿವಾಸ್ ಮಾತನಾಡಿ, ರೈತ ರವಿ ಕುಮಾರ್ ಮೇಲೆ ಗುಂಡು ಹಾರಿಸಿರುವ ಸಕಲೇಶ್ ಕುಮಾರ್‌ಗೆ ಬೆಂಬಲ ನೀಡಿದ ಎಲ್ಲಾ ಗೂಂಡಾಗಳನ್ನು ಬಂಧಿಸಿ ಜೈಲಿಗಟ್ಟಬೇಕು, ಸಕಲೇಶ್ ಮೇಲೆ ಈಗಾಗಲೇ 45ಕ್ಕೂ ಹೆಚ್ಚು ಪ್ರಕರಣಗಳಿದ್ದು, ಆತನನ್ನು ಗಡಿಪಾರು ಮಾಡಬೇಕೇಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಹಾಗೂ ಭಗತ್ ಸಿಂಗ್ ಚಾರಿಟಬಲ್ ಅಧ್ಯಕ್ಷ ಸಂದೀಪ್ ಬಿ.ರೆಡ್ಡಿ ಮಾತನಾಡಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಯಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ರೈತರ ಮೇಲೆ ಕ್ರಷರ್ ಮಾಲಿಕರಿಂದ ಗುಂಡಿನ ದಾಳಿ ನಡೆದಿರುವುದು ಗೂಂಡಾ ಸಂಸ್ಕೃತಿಗೆ ನಾಂದಿ ಹಾಡಿದಂತಾಗಿದೆ. ಪೊಲೀಸ್ ವ್ಯವಸ್ಥೆ ಹದಗೆಟ್ಟು ಹೋಗಿದೆ. ಕಾನೂನು ಸತ್ತು ಹೋಗಿದೆ. ರೈತರಿಗೆ ರಕ್ಷಣೆ ಒದಗಿಸುವರಿಲ್ಲ ಹೋರಾಟ ಮಾಡಿದವರ ಮೇಲೆ ಶೂಟೌಟ್ ಮಾಡಿದರೆ, ನಾವ್ಯಾರು ಪ್ರಜಾಪ್ರಭುತ್ವದಲ್ಲಿ ಬದುಕುವಂತಿಲ್ಲ ಎಂದು ಕಿಡಿಕಾರಿದರು.

ಮನವಿ ಪತ್ರ ಸ್ವೀಕರಿಸಲು ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ನಾವು ಈಗಾಗಲೇ ಕ್ರಷರ್ ಭಾಗಕ್ಕೆ ರಸ್ತೆಗಾಗಿ ಮೀಸಲಿಟ್ಟಿದ್ದ ಜಾಗವನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದೇವೆ. ಕ್ರಷರ್ ಪರವಾನಗಿಯನ್ನು ಕಾನೂನು ರೀತಿಯಾಗಿ ರದ್ದು ಮಾಡಲು ಒಂದು ತಿಂಗಳು ಕಾಲಾವಕಾಶ ಬೇಕು ಎಂದು ತಿಳಿಸಿದರು. ಬಂದ್‌ನಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು.ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ಮುಖಂಡರಾದ ಕೋಲಾರದ ರಾಮುಶಿವಣ್ಣ, ಪಿ.ಎನ್.ಜಗನ್ನಾಥ್. ಪ್ರಕಾಶ್ ರೆಡ್ಡಿ. ನಾರಾಯಣಸ್ವಾಮಿ, ಸುಬ್ಬಾರೆಡ್ಡಿ, ಸುದರ್ಶನ್ ರೆಡ್ಡಿ,ನಾರಾಯಣಗೌಡ, ಪ್ರಭಾ ನಾರಾಯಣಗೌಡ, ಹನುಮೇಗೌಡ, ಬಾಲಕೃಷ್ಣ, ಕೆ.ವಿ.ಹನುಪ್ಪರೆಡ್ಡಿ. ಸಂದೀಪ್, ನರಸಿಂಹ ರೆಡ್ಡಿ, ಅಜಿತ್ ಕುಮಾರ್ ಜೈನ್, ರಾಜಶೇಖರ್ ಹಾಗೂ ಎಲ್ಲಾ ರೈತರು ಎಲ್ಲಾ ಸಂಘಟನೆ ಪದಾಧಿಕಾರಿಗಳು. ಮಂಚೇನಹಳ್ಳಿ ವ್ಯಾಪ್ತಿಯ ಸಾರ್ವಜನಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ