ಚರಂಡಿಗಳಲ್ಲಿ ಕಡ್ಡಾಯವಾಗಿ ಇಂಗು ಗುಂಡಿ ನಿರ್ಮಿಸಿ: ಎನ್ನಾರ್‌ ರಮೇಶ್‌

KannadaprabhaNewsNetwork | Updated : Mar 23 2024, 04:22 PM IST

ಸಾರಾಂಶ

 ಎಲ್ಲಾ ವಾರ್ಡ್‌ಗಳ ವ್ಯಾಪ್ತಿಯ ಚರಂಡಿಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸುವ ಮೂಲಕ ನೀರಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಮಾಜಿ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ವಾರ್ಡ್‌ಗಳ ವ್ಯಾಪ್ತಿಯ ಚರಂಡಿಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸುವ ಮೂಲಕ ನೀರಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಮಾಜಿ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಆಗ್ರಹಿಸಿದ್ದಾರೆ.

ಈ ಸಂಬಂಧ ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಅವರಿಗೆ ಪತ್ರ ಬರೆದಿದ್ದಾರೆ. ಮಳೆಗಾಲ ಪ್ರಾರಂಭವಾಗಲು 2-3 ತಿಂಗಳು ಬಾಕಿ ಇದ್ದು, ಬಿಬಿಎಂಪಿ ವ್ಯಾಪ್ತಿಯ ಬಹುತೇಕ ಚರಂಡಿಗಳ ಹೂಳನ್ನು ತೆಗೆಯುವ ಕಾರ್ಯ ನಡೆಯುತ್ತಿದೆ. 

ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿ ನೀರಿನ ಅಂತರ್ಜಲದ ಮಟ್ಟ ಸರಾಸರಿ 1,200-1,400 ಅಡಿಗಳಷ್ಟಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಬೆಂಗಳೂರು ನಾಗರಿಕರಿಗೆ ಕುಡಿಯುವ ನೀರು ಮತ್ತು ಇತರೆ ಕಾರ್ಯಗಳಿಗೆ ಬಳಸಲು ನೀರಿನ ಕೊರತೆ ಎದುರಾಗಿದೆ ಎಂದು ಹೇಳಿದ್ದಾರೆ.

ಹೀಗಾಗಿ 197 ವಾರ್ಡ್‌ಗಳ ವ್ಯಾಪ್ತಿಯ ಚರಂಡಿಗಳ ಹೂಳೆತ್ತುವ ಸಂದರ್ಭದಲ್ಲಿ ಮತ್ತು ಚರಂಡಿಗಳ ಪುನರ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಪ್ರತೀ 30ರಿಂದ 40 ಅಡಿಗಳಿಗೆ ಒಂದರಂತೆ ಕನಿಷ್ಠ 400 ಲೀಟರ್ ಸಾಮರ್ಥ್ಯದ ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಲು ಕಠಿಣ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. 

ಇದರಿಂದ ಮುಂದಿನ 4-5 ದಶಕಗಳ ಕಾಲ ಬೆಂಗಳೂರು ಮಹಾನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎಂದಿಗೂ ಬರುವುದಿಲ್ಲ ಎಂದಿದ್ದಾರೆ.

ಯಡಿಯೂರು ವಾರ್ಡಲ್ಲಿ ಇಂಗು ಗುಂಡಿ ಯಶಸ್ವಿ: ಯಡಿಯೂರು ವಾರ್ಡ್‌ನಲ್ಲಿ ಮುಂದಿನ ಹತ್ತಾರು ದಶಕಗಳ ಕಾಲಕ್ಕೆ ನೀರಿನ ಬವಣೆ ಬರಬಾರದೆಂದು 197 ರಸ್ತೆಗಳಲ್ಲಿನ ಎಲ್ಲಾ ಚರಂಡಿಗಳಲ್ಲಿ ಪ್ರತೀ 30 ಅಡಿಗೆ ಒಂದರಂತೆ 400 ಲೀಟರ್ ಸಾಮರ್ಥ್ಯದ ಮಳೆ ನೀರು ಇಂಗು ಗುಂಡಿಗಳನ್ನು ಕಡ್ಡಾಯವೆಂಬಂತೆ ನಿರ್ಮಿಸಲಾಗಿದೆ. 

ಅಲ್ಲದೇ, ಯಡಿಯೂರು ವಾರ್ಡ್ ವ್ಯಾಪ್ತಿಯ ಎಲ್ಲಾ 15 ಉದ್ಯಾನವನಗಳಲ್ಲಿ ಪ್ರತೀ 50 ರಿಂದ 75 ಮೀಟರ್‌ಗಳಿಗೆ ಒಂದರಂತೆ ತಲಾ 4 ಸಾವಿರದಿಂದ 12 ಸಾವಿರ ಲೀಟರ್ ಸಾಮರ್ಥ್ಯದ ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. 

ಇದರಿಂದ ನೀರಿನ ಅಂತರ್ಜಲದ ಮಟ್ಟ ಕೇವಲ 213 ಅಡಿಗಳು ಇದೆ. ಎಲ್ಲ 51 ಕೊಳವೆ ಬಾವಿಗಳೂ ಸಹ ಸದಾ ಕಾಲ ಯಥೇಚ್ಛವಾಗಿ ನೀರು ಪೂರೈಸಲು ಯಾವುದೇ ಸಮಸ್ಯೆ ಇದುವರೆಗೆ ತಲೆದೋರಿಲ್ಲ ಎಂದು ರಮೇಶ್‌ ತಿಳಿಸಿದ್ದಾರೆ.

Share this article