ವಿಜಯಪುರ: ಕಾಲುಬಾಯಿ ರೋಗಕ್ಕೆ ರಾಸುಗಳು ತುತ್ತಾಗುವುದನ್ನು ತಪ್ಪಿಸಲು ರೈತರು, ರಾಸುಗಳಿಗೆ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿ ಎಂದು ಪಶು ಪಾಲನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ವಿನೋದ್ ಹೇಳಿದರು.
ಪಟ್ಟಣ ಸೇರಿದಂತೆ ಆಸ್ಪತ್ರೆ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿನ ರಾಸುಗಳಿಗೆ ಕಾಲುಬಾಯಿ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ ಈ ಲಸಿಕೆ ನೀಡಲಾಗುತ್ತಿದೆ. ದೇಶಾದ್ಯಂತ ನ.೩ರಿಂದ ಡಿಸೆಂಬರ್ ೨ರವರೆಗೆ ಈ ಅಭಿಯಾನ ನಡೆಯಲಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದು ಜಾನುವಾರುಗಳ ರೋಗ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದರು.ನಾಲ್ಕು ತಿಂಗಳ ಮೇಲ್ಪಟ್ಟ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿಸುವುದು ಕಡ್ಡಾಯ. ರಾಜ್ಯದಲ್ಲಿ ಇದು ಎಂಟನೇ ಸುತ್ತಿನ ಲಸಿಕಾ ಅಭಿಯಾನವಾಗಿದೆ. ರೋಗ ತಡೆಗಟ್ಟಲು ಲಸಿಕೆ ಹಾಕಿಸುವುದೇ ಉತ್ತಮ ಮಾರ್ಗ. ರೈತರು ಪ್ರತಿ ಆರು ತಿಂಗಳಿಗೊಮ್ಮೆ ಲಸಿಕೆ ಹಾಕಿಸಬೇಕು ಎಂದರು.
ರೋಗದ ಲಕ್ಷಣಗಳೆಂದರೆ, ಅತಿಯಾದ ಜ್ವರ, ಬಾಯಲ್ಲಿ ಹುಣ್ಣು, ಜೊಲ್ಲು ಸುರಿಸುವುದು, ಕಾಲು ಕುಂಟುವುದು, ಕೆಚ್ಚಲಿನ ಮೇಲೆ ಗುಳ್ಳೆ ಕಾಣಿಸಿಕೊಳ್ಳುವುದು, ಕಾಲುಬಾಯಿ ರೋಗ ರೋಗ ಗ್ರಸ್ಥ ಪ್ರಾಣಿಗಳಿಂದ ನೇರ ಸಂಪರ್ಕ, ವೈರಾಣುಗಳಿಂದ ಕಲುಷಿತಗೊಂಡ ಮೇವು ಮತ್ತು ನೀರು, ಗಾಳಿಯ ಮುಖಾಂತರ ಪ್ರಸರಣ, ದನಗಳ ಸಂತೆ ಮತ್ತು ಜಾತ್ರೆಗಳಲ್ಲಿ ಈ ರೋಗ ಹರಡುವುದು, ಕಾಲುಬಾಯಿ ರೋಗದ ಹುಣ್ಣನ್ನು ಅಡುಗೆ ಸೋಡಾ ದ್ರಾವಣ ಲೇಪನದಿಂದ ಶುದ್ಧಗೊಳಿಸುವುದು, ಮೃದುವಾದ ಗಂಜಿ ಬಾಳೆಹಣ್ಣು, ರಾಗಿ ಅಂಬಲಿ ತಿನಿಸುವುದು, ಶುಚಿತ್ವಕ್ಕೆ ಮಹತ್ವ ನೀಡಿ, ಕ್ರಿಮಿನಾಶಕ ದ್ರಾವಣ ಬಳಸಿ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕೊಟ್ಟಿಗೆ ಮತ್ತು ಆವರಣವನ್ನು ಶುಚಿಗೊಳಿಸುವುದು, ರೋಗ ಪೀಡಿತ ಜಾನುವಾರುಗಳಿಗೆ ಉಪಚರಿಸುವ ಮಾಲೀಕರು ಸಹ ಇತರೆ ಜಾನುವಾರಗಳ ಸಂಪರ್ಕದಿಂದ ದೂರ ಇರುವುದು, ಕಾಲುಬಾಯಿ ರೋಗದ ನಿಯಂತ್ರಣಕ್ಕೆ ಲಸಿಕೆ ಹಾಕುವುದೊಂದೇ ಉತ್ತಮ ಮಾರ್ಗವಾಗಿದೆ. ಸುರಕ್ಷಿತವಾಗಿ ಸತತ ಕನಿಷ್ಠ ಎರಡು ಬಾರಿ, ಲಸಿಕೆ ಹಾಕುವುದು ಅಗತ್ಯವಾಗಿದೆ ಎಂದು ಹೇಳಿದರು.