ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ವಿವಿಧ ಕಾಯ್ದೆಗಳ ಕುರಿತ ತರಬೇತಿ ಕಾರ್ಯಾಗಾರ
ಮಕ್ಕಳ ಮೇಲೆ ನಡೆಯುವ ಅನ್ಯಾಯ, ಹಿಂಸೆ, ದಬ್ಬಾಳಿಕೆ, ಶೋಷಣೆಗಳನ್ನು ತಡೆಗಟ್ಟಲು ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆಯನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ. ಹೇಳಿದರು.ಗುರುವಾರ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮತ್ತು ವಿವಿಧ ಇಲಾಖೆಗಳ ಭಾಗೀದಾರರಿಗೆ ಮಕ್ಕಳ ಹಕ್ಕುಗಳನ್ನು ಅನುಷ್ಠಾನಗೊಳಿಸಲು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ವಿವಿಧ ಕಾಯ್ದೆಗಳ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಮಕ್ಕಳ ಮೇಲೆ ಈ ಹಿಂದೆ ನಡೆಯುತ್ತಿದ್ದ ಬಾಲ ಕಾರ್ಮಿಕ ಪದ್ದತಿ, ಬಾಲ್ಯ ವಿವಾಹದಂತಹ ದೌರ್ಜನ್ಯಗಳ ಜೊತೆಗೆ ಹೊಸ ರೀತಿಯ ಸಮಸ್ಯೆಗಳು ಕಂಡುಬರುತ್ತಿದ್ದು, ಪೋಕ್ಸೋ ಪ್ರಕರಣ ಹೆಚ್ಚುತ್ತಿವೆ. ಇಂತಹ ಹಲವು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಕುರಿತು ಇಂತಹ ಕಾರ್ಯಾಗಾರಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ. ರಾಜ್ಯದಲ್ಲಿ ಈ ಬಾರಿ ಶಾಲಾ ಹಾಜರಾತಿಯ ಕೊರತೆಯಿಂದ ಸಾವಿರಾರು ಮಕ್ಕಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯದೇ ವಂಚಿತರಾಗಿದ್ದು, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಇಂತಹ ಮಕ್ಕಳ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.ನವದೆಹಲಿಯ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶೈಕ್ಷಣಿಕ ಸಲಹೆಗಾರ್ತಿ ಅನುಬಾ ಜೈನ್, ನಮ್ಮ ದೇಶ ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ದೇಶವಾಗಿರುವುದರಿಂದ ಮಕ್ಕಳನ್ನು ರಕ್ಷಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.ಜಿಪಂ ಮುಖ್ಯ ಕಾರ್ಯನಿರ್ವಾಧಿಕಾರಿ ಡಾ. ದಿಲೀಷ್ ಶಶಿ, ಸಮಾಜ ಅಭಿವೃದ್ಧಿಯಾಗಬೇಕಿದ್ದಲ್ಲಿ ಮಕ್ಕಳ ರಕ್ಷಣೆ ಮಾಡುವುದು ಅವಶ್ಯಕವಾಗಿದೆ. ಮಕ್ಕಳ ರಕ್ಷಣೆಯ ಬಗ್ಗೆ ಎಲ್ಲಾ ಇಲಾಖೆಗಳ ನಡುವೆ ಸಮನ್ವಯತೆ ಇರಬೇಕು ಹಾಗೂ ಈ ಕಾರ್ಯದಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಮುಖ್ಯ ಎಂದರು.