ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ
ಪಟ್ಟಣದ ವಿವಿಧ ಕಾಲೇಜುಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025 ರ ಜಾಗೃತಿ ಕಾರ್ಯಕ್ರಮ ಶನಿವಾರ ನಡೆಯಿತು.
ಸಿ. ಮಲ್ಲಿಕಾರ್ಜುನ್ ನಾಗಪ್ಪ ಮಹಾವಿದ್ಯಾಲಯದಲ್ಲಿ ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025 ರ ಜಾಗೃತಿ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಕಚೇರಿಯ ಚುನಾವಣಾ ವಿಭಾಗದ ಸಹಾಯಕ ಕೆ.ಈಶ್ವರ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಭಾರತದಲ್ಲಿ ಯುವ ಮತದಾರರ ಪ್ರಾಮುಖ್ಯತೆಯು ಪ್ರಮುಖವಾಗಿದೆ. ಸುಭದ್ರ ಹಾಗೂ ಸದೃಢ ದೇಶ ನಿರ್ಮಿಸಲು ಯುವ ಮತದಾರರ ಪಾತ್ರ ನಿರ್ಣಾಯಕ. ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿ ಎಂದು ಹೇಳಿದರು.
ಸಂವಿಧಾನ ಪ್ರಜೆಗಳಿಗೆ ಮತದಾನ ಹಕ್ಕನ್ನು ನೀಡಿದೆ. ಭವಿಷ್ಯದ ಪ್ರಜೆಗಳಾದ ಯುವ ಸಮೂಹ ಮತದಾನ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. 18 ವರ್ಷ ತುಂಬಿದ ಎಲ್ಲಾ ವಿದ್ಯಾರ್ಥಿಗಳು ಅಗತ್ಯವಾದ ವರ್ಗಾವಣೆ ಪ್ರಮಾಣಪತ್ರದ ಪ್ರತಿ, ಆಧಾರ ಕಾರ್ಡ ಪ್ರತಿ, 02 ಪಾಸ್ ಪಾರ್ಟ ಸೈಜ್ ಪೋಟೋ, ಪಾಲಕರ ಮತದಾನ ಗುರುತಿನ ಚೀಟಿಯ ಪ್ರತಿಯೊಂದಿಗೆ ನಿಮ್ಮ ಹತ್ತಿರದ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ ನೊಂದಣಿ ಮಾಡಿಕೊಳ್ಳಿ, ಮೊಬೈಲ್ ಮೂಲಕ ವೋಟರ್ ಹೆಲ್ಪ್ ಲೈನ್ ಆ್ಯಪ್ ನಲ್ಲಿ ಸಹ ಗುರುತಿನಿ ಚೀಟಿ ಪಡೆಯಬಹುದಾಗಿದೆ ಎಂದರು.ಕಾಲೇಜು ಪ್ರಾಂಶುಪಾಲ ಎನ್.ಎಸ್. ವೈದ್ಯ ಕಾಲೇಜ್ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕಡ್ಡಾಯವಾಗಿ ಗುರುತಿನ ಚೀಟಿ ಮಾಡಿಸಿಕೊಳ್ಳಬೇಕು ಎಂದರು.
ನಂತರ ಪಟ್ಟಣದ ಸರ್ಕಾರಿ ಪಿಯು ಕಾಲೇಜ್, ಕಸ್ತೂರ ಬಾ ಪಿಯು, ಡಿಗ್ರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025ರ ಜಾಗೃತಿ ಮೂಡಿಸಲಾಯಿತು.ಈ ಸಂದರ್ಭ ಪುರಸಭೆಯ ಕಂದಾಯ ನಿರೀಕ್ಷಕ ಬಿ.ಆದೆಪ್ಪ, ತಾಲೂಕು ಪಂಚಾಯಿತಿಯ ಅಜೀಜ್, ಐಇಸಿ ಸಂಯೋಜಕ ಸೋಮನಾಥ ಗೌಡರ್, ಎನ್ ಆರ್ ಎಲ್ ಎಮ್ ವಿಭಾಗದ ಶಿವರಾಜ್ ಸೇರಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.