-ಮೃತ ರೈತನ ಶವ ರಸ್ತೆ ಮೇಲಿಟ್ಟು ಗ್ರಾಮಸ್ಥರ ಪ್ರತಿಭಟನೆ । ಸರ್ಕಾರ ರೈತನ ಸಾಲ ಮನ್ನಾ ಒತ್ತಾಯ
----ಕನ್ನಡಪ್ರಭ ವಾರ್ತೆ ಚವಡಾಪುರ: ಅಫಜಲ್ಪುರದ ಬಸವಪಟ್ಟಣ ಗ್ರಾಮದ ರೈತ ಮರೇಪ್ಪ ಸೈಬಣ್ಣ ಬರ್ಮಾ(42) ಸಾಲಬಾಧೆ ತಾಳದೆ ಭೀಮಾ ನದಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ರೈತ ಮರೇಪ್ಪ ಫರಹತಾಬಾದನ ಬ್ಯಾಂಕ್ ಆಫ್ ಬರೋಡಾದಲ್ಲಿ 2.5 ಲಕ್ಷ ಸಾಲ ಹಾಗೂ ಖಾಸಗಿಯಾಗಿ 10ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದ, 2 ಎಕರೆ ಜಮೀನು ಹೊಂದಿದ್ದ ಮರೇಪ್ಪ, ಉತ್ತಮ ಫಸಲು ಬಂದು, ಕುಟುಂಬ ನಿರ್ವಹಣೆಗೆ ಮಾಡಿದ ಸಾಲ ತೀರಿಸಬಹುದೆಂದು ಆಸೆ ಹೊಂದಿದ್ದ. ಎರಡು ಗಂಡು, ಎರಡು ಹೆಣ್ಣು ಮಕ್ಕಳಿದ್ದು, ಅವರಿಗೆ ಉತ್ತಮ ಭವಿಷ್ಯ ರೂಪಿಸಬೇಕೆಂದುಕೊಂಡಿದ್ದ. ಆದರೆ, ಪ್ರವಾಹದಿಂದಾಗಿ ಬೆಳೆ ಹಾಳಾಗಿ ದ್ದು, ಸಾಲಬಾಧೆ ಹೆಗಲೇರಿ ಮರುಪಾವತಿ ಮಾಡಲಾಗುವುದಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಗ್ರಾಮಸ್ಥರು ಮೃತ ರೈತನ ಶವ ರಸ್ತೆ ಮೇಲಿಟ್ಟು ಪ್ರತಿಭಟನೆ ನಡೆಸಿ ಸರ್ಕಾರ ರೈತನ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ರೈತನ ಕುಟುಂಬಕ್ಕೆ ಗರಿಷ್ಠ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಬಸವಪಟ್ಟಣ ಗ್ರಾಪಂ ಸದಸ್ಯ ಕುಶಾಲ್, ಸರ್ಕಾರಗಳು ರೈತರಿಗೆ ಸಹಾಯಕ್ಕೆ ಧಾವಿಸಬೇಕು. ಪ್ರಕೃತಿಯೂ ರೈತರ ಮೇಲೆ ಮುನಿದರೆ ಅವರು ಎಲ್ಲಿಗೆ ಹೋಗಬೇಕು? ಮಾಡಿದ ಸಾಲ ಮರುಪಾವತಿ ಮಾಡಲಾಗದೆ ರೈತ ಮರೇಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಅವರ ಕುಟುಂಬವೀಗ ಬೀದಿಗೆ ಬಂದಂತಾಗಿದೆ. ಹೀಗಾಗಿ ಕೂಡಲೇ ಸರ್ಕಾರ ಸಾಲ ಮನ್ನಾ ಮಾಡುವುದರ ಜೊತೆಗೆ ಸೂಕ್ತ ಪರಿಹಾರ ಕೊಟ್ಟು ರೈತನ ಕುಟುಂಬಕ್ಕೆ ನೆರವಾಗಬೇಕೆಂದು ಒತ್ತಾಯಿಸಿದ್ದಾರೆ.ಸ್ಥಳಕ್ಕೆ ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ತಹಸೀಲ್ದಾರ ಆನಂದಶೀಲ ಭೇಟಿ ನೀಡಿ ರೈತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಪರಿಹಾರಕ್ಕೆ ಶೀಘ್ರ ಕ್ರಮವಹಿಸುವುದಾಗಿ ತಿಳಿಸಿದ್ದಾರೆ.