ಮಂಡ್ಯ: ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ನಿರಂತರ ಧರಣಿ ಪಿತೃಪಕ್ಷ ಹಬ್ಬದ ದಿನವಾದ ಶನಿವಾರವೂ ಮುಂದುವರೆಯಿತು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ನಿರಂತರ ಧರಣಿಗೆ ಮಳವಳ್ಳಿ ಮತ್ತು ಕೆ. ಎಂ.ದೊಡ್ಡಿ ಭಾಗದ ರೈತ ಸಂಘದ ಕಾರ್ಯಕರ್ತರು ಬೆಂಬಲ ಸೂಚಿಸಿ ಭಾಗಿಯಾದರು. ಕೇಂದ್ರ- ರಾಜ್ಯಸರ್ಕಾರ ಮತ್ತು ಕಾವೇರಿ ನದಿ ನೀರು ಪ್ರಾಧಿಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಜಲಾಶಯಗಳನ್ನು ಬರಿದು ಮಾಡುವ ಮೂಲಕ ರೈತರು ಮತ್ತು ಕನ್ನಡಿಗರನ್ನು ಸಂಕಷ್ಟಕ್ಕೆ ದೂಡಲಾಗಿದೆ ಎಂದು ಕಿಡಿಕಾರಿದರು. ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ರಾಜ್ಯದ ಕಾವೇರಿ ಕಣಿವೆ ನಾಲ್ಕೂ ಜಲಾಶಯಗಳಲ್ಲಿ ನೀರಿಲ್ಲವೆಂದರೂ ಯಾರೂ ಕೇಳಿಸಿಕೊಳ್ಳುವುದಕ್ಕೆ ತಯಾರಿಲ್ಲ. ನೀರು ನಿರ್ವಹಣಾ ಸಮಿತಿ, ನೀರು ನಿರ್ವಹಣಾ ಪ್ರಾಧಿಕಾರ ನೀರು ಬಿಡುಗಡೆಗೆ ನಿರಂತರವಾಗಿ ಆದೇಶ ಹೊರಡಿಸುತ್ತಿವೆ. ಇದು ನಿಜಕ್ಕೂ ಮರಣಶಾಸನವೇ ಸರಿ. ಪ್ರಾಧಿಕಾರದ ಆದೇಶದ ತಿರಸ್ಕರಿಸಿ ಕಾವೇರಿ ಕೊಳ್ಳದ ಜಲಾಶಯಗಳಿಂದ ಹರಿಯುತ್ತಿರುವ ನೀರು ಸ್ಥಗಿತ ಮಾಡಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಸರ್ಕಾರ ರೈತರು ಮತ್ತು ಜನಸಾಮಾನ್ಯರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ. ಈಗಾಗಲೇ ಬೆಳೆ ಬೆಳೆಯಲು ನೀರು ಕೊಡದೆ ರೈತರ ಬದುಕಿಗೆ ಕೊಳ್ಳಿ ಇಟ್ಟಿದೆ. ಕುಡಿಯುವ ನೀರನ್ನೂ ಉಳಿಸದೆ ಇದೀಗ ಕಾವೇರಿ ಕಣಿವೆ ಜನರ ಬದುಕನ್ನೂ ಸರ್ವನಾಶ ಮಾಡುತ್ತಿದೆ. ರೈತರ ಹಿತ ಕಾಪಾಡುವುದಾಗಿ ಬೊಗಳೆ ಬಿಡುತ್ತಲೇ ಇರುವ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು. ಚುನಾಯಿತ ಜನಪ್ರತಿನಿಧಿಗಳು ರಾಜ್ಯದ ರೈತರ ಹಿತ ಕಾಪಾಡದೇ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ. ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಜನರು ಎಚ್ಚೆತ್ತುಕೊಂಡು ದಂಗೆ ಏಳಬೇಕು. ಸರ್ಕಾರಗಳನ್ನು ನಂಬಿಕೊಂಡಿದ್ದರೆ ಕಾವೇರಿ ನೀರನ್ನು ಉಳಿಸಿಕೊಳ್ಳಲಾಗುವುದಿಲ್ಲ. ಜನರ ಜಾಗೃತರಾದಾಗ ಮಾತ್ರ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಪರಿಹಾರ ರೂಪಿಸಬೇಕಾಗಿತ್ತು. ಎರಡು ರಾಜ್ಯಗಳ ನಡುವೆ ಮಾತುಕತೆ ನಡೆಸಬೇಕಾಗಿತ್ತು. ಆದರೆ, ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಹೇಳಿದರು. ರೈತ ಸಂಘದ ರಾಮಲಿಂಗೇಗೌಡ, ಬಸವರಾಜೇಗೌಡ,ತಳಗವಾದಿ ಚೆನ್ನಯ್ಯ, ಎಚ್ ಡಿ ರಾಮೇಗೌಡ,ಚಿಕ್ಕಮೊಗ ಕುರಿ ಕೆಂಪನದೊಡ್ಡಿ, ಸಿದ್ದರಾಮು,ನಾರಾಯಣ, ಪುಟ್ಟಸ್ವಾಮಿ,ಬಸವರಾಜ,ಬೋರೇಗೌಡ, ಮಲ್ಲೇಶ್ ನೇತೃತ್ವ ವಹಿಸಿದ್ದರು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಕೆ ಬೋರಯ್ಯ, ಸಿದ್ದರಾಮೇಗೌಡ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕೃಷ್ಣ ಪ್ರಕಾಶ್, ಕನ್ನಡ ಸೇನೆ ಮಂಜುನಾಥ್, ನಾರಾಯಣ್ ಇತರರಿದ್ದರು.