ಸುಪ್ರೀಂ ಕೋರ್ಟ್ ಆದೇಶದಂತೆ ನಗರಸಭೆ ಅಧಿಕಾರಿಗಳಿಂದ ಗುರುವಾರ ಫುಟ್‌ಪಾತ್ ತೆರವು ಕಾರ್ಯಾಚರಣೆ ನಡೆಯಿತು. ಬೆಂಗಳೂರು-ಮೈಸೂರು ಹೆದ್ದಾರಿಯುದ್ದಕ್ಕೂ ಫುಟ್‌ಪಾತ್ ಮೇಲಿದ್ದ ತಳ್ಳುವ ಗಾಡಿಗಳು, ಅಂಗಡಿಗಳು, ನಾಮಫಲಕ ಬೋರ್ಡ್‌ಗಳು, ಅಂಗಡಿ ಮುಂಚಾಚುಗಳನ್ನೆಲ್ಲಾ ತೆರವುಗೊಳಿಸಿದರು. ಅಲ್ಲದೇ, ಫುಟ್‌ಪಾತ್‌ನಲ್ಲಿ ದ್ವಿಚಕ್ರವಾಹನಗಳ ನಿಲುಗಡೆಗೆ ಬ್ರೇಕ್.
ಕನ್ನಡಪ್ರಭ ವಾರ್ತೆ ಮಂಡ್ಯ
ಸುಪ್ರೀಂ ಕೋರ್ಟ್ ಆದೇಶದಂತೆ ನಗರಸಭೆ ಅಧಿಕಾರಿಗಳಿಂದ ಗುರುವಾರ ಫುಟ್‌ಪಾತ್ ತೆರವು ಕಾರ್ಯಾಚರಣೆ ನಡೆಯಿತು. ಬೆಂಗಳೂರು-ಮೈಸೂರು ಹೆದ್ದಾರಿಯುದ್ದಕ್ಕೂ ಫುಟ್‌ಪಾತ್ ಮೇಲಿದ್ದ ತಳ್ಳುವ ಗಾಡಿಗಳು, ಅಂಗಡಿಗಳು, ನಾಮಫಲಕ ಬೋರ್ಡ್‌ಗಳು, ಅಂಗಡಿ ಮುಂಚಾಚುಗಳನ್ನೆಲ್ಲಾ ತೆರವುಗೊಳಿಸಿದರು. ಅಲ್ಲದೇ, ಫುಟ್‌ಪಾತ್‌ನಲ್ಲಿ ದ್ವಿಚಕ್ರವಾಹನಗಳ ನಿಲುಗಡೆಗೆ ಬ್ರೇಕ್ ಹಾಕಿದರು.
ನಗರದ ಎಸ್.ಡಿ.ಜಯರಾಂ ವೃತ್ತ (ನಂದಾ ಸರ್ಕಲ್)ನಿಂದ ಆರಂಭವಾದ ತೆರವು ಕಾರ್ಯಾಚರಣೆ ಕಲ್ಲಹಳ್ಳಿಯವರೆಗೂ ನಡೆಯಿತು. ಪುಟ್‌ಪಾತ್ ಮೇಲೆ ತಳ್ಳುವ ಗಾಡಿಗಳು, ಸಂಚಾರಿ ವಾಹನಗಳ ಅಂಗಡಿಗಳನ್ನು ಸ್ಥಳದಿಂದ ತೆರವುಗೊಳಿಸಿದರು. ಫುಟ್‌ಪಾತ್ ಮೇಲೆ ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ತೆರವುಗೊಳಿಸಿ ರಸ್ತೆ ಪಕ್ಕದಲ್ಲಿ ನಿಲ್ಲಿಸುವಂತೆ ವಾಹನ ಸವಾರರಿಗೆ ಮೈಕ್ ಮುಖೇನ ಸೂಚಿಸಿದರು. ಮುಂದೆ ಯಾರೂ ಕೂಡ ಫುಟ್‌ಪಾತ್ ಮೇಲೆ ವಾಹನಗಳನ್ನು ನಿಲ್ಲಿಸಬಾರದು. ಒಮ್ಮೆ ನಿಲ್ಲಿಸಿದರೆ ಪೊಲೀಸ್ ಟೋಯಿಂಗ್ ವಾಹನದ ಮೂಲಕ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ಫುಟ್‌ಪಾತ್ ಮೇಲೆ ಫಿಕ್ಸ್ ಮಾಡಿದ್ದ ಕಬ್ಬಿನ ಜ್ಯೂಸ್ ಅಂಗಡಿ, ಪೆಟ್ಟಿ ಅಂಗಡಿಗಳನ್ನು ಜೆಸಿಬಿ ಮೂಲಕ ಅಡಿಪಾಯ ಕಿತ್ತು ಹಾಕಲಾಯಿತು. ಅಷ್ಟರಲ್ಲಿ ಅಂಗಡಿ ಮಾಲೀಕರು ಸ್ವಲ್ಪ ಸಮಯಾವಕಾಶ ನೀಡುವಂತೆ ಕೋರಿದಾಗ ಮಧ್ಯಾಹ್ನದೊಳಗೆ ತೆರವುಗೊಳಿಸದಿದ್ದರೆ ಮತ್ತೆ ಬಂದು ತೆರವುಗೊಳಿಸುವ ಎಚ್ಚರಿಕೆ ನೀಡಿದರು.
ನಗರಸಭೆ ಅಧಿಕಾರಿಗಳು ಕ್ರೇನ್ ಮತ್ತು ಜೆಸಿಬಿಯೊಂದಿಗೆ ಬರುತ್ತಿರುವುದನ್ನು ನೋಡಿ ಹಲವರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದರು. ಕೆಲವರು ಫುಟ್‌ಪಾತ್‌ನಿಂದ ಹಿಂದಕ್ಕೆ ಸರಿದು ವ್ಯಾಪಾರದಲ್ಲಿ ತೊಡಗಿದ್ದರು. ಮತ್ತೆ ಕೆಲವರು ಏಕಾಏಕಿ ಖಾಲಿ ಮಾಡುವಂತೆ ಹೇಳಿದರೆ ನಾವು ಎಲ್ಲಿಗೆ ಹೋಗೋಣ. ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದರು. ಸುಪ್ರೀಂ ಕೋರ್ಟ್ ಆದೇಶದಂತೆ ಫುಟ್‌ಪಾತ್ ತೆರವುಗೊಳಿಸುತ್ತಿದ್ದೇವೆ. ಅಡ್ಡಿಪಡಿಸಿದರೆ ಕಾನೂನಾತ್ಮಕ ಕ್ರಮ ಎದುರಿಸಬೇಕಾಗುತ್ತದೆ ಎಂದು ತಿಳಿಸಿದ ಬಳಿಕ ವ್ಯಾಪಾರಿಗಳು ವಾದ ಮುಂದುವರೆಸದೆ ಅಲ್ಲಿಂದ ಗೊಣಗುತ್ತಲೇ ತೆರಳಿದರು.
ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಫುಟ್‌ಪಾತ್‌ಗೆ ಹೊಂದಿಕೊಂಡಿದ್ದ ಕಬ್ಬಿನ ಜ್ಯೂಸ್ ಅಂಗಡಿಯನ್ನು ತೆರವುಗೊಳಿಸಲಾಯಿತು. ಬಸ್‌ಶೆಲ್ಟರ್ ಪಕ್ಕ ಅಕ್ರಮವಾಗಿ ನಿರ್ಮಿಸಿದ್ದ ಕಾಂಕ್ರೀಟ್ ಗೋಡೆಯನ್ನು ಜೆಸಿಬಿಯಿಂದ ಕಿತ್ತುಹಾಕಿದರು. ಕಿತ್ತುಹಾಕಿದ ಕಾಂಕ್ರೀಟ್ ಹಾಗೂ ಫುಟ್‌ಪಾತ್ ಮೇಲಿದ್ದ ಕಲ್ಲುಗಳನ್ನೆಲ್ಲಾ ವಾಹನಕ್ಕೆ ತುಂಬಿಕೊಂಡು ತೆರಳಿದರು.
ತೆರವು ಕಾರ್ಯಾಚರಣೆ ಬಳಿಕ ಈಗ ಹೆದ್ದಾರಿ ರಸ್ತೆಯ ಆಸು-ಪಾಸು ಮೊದಲಿಗಿಂತ ಸುಧಾರಿಸಿದಂತೆ ಕಂಡುಬರುತ್ತಿದೆ. ಕೆಲವರು ಅಂಗಡಿಗಳನ್ನು ತೆರವುಗೊಳಿಸಲು ಕಾಲಾವಕಾಶ ಕೋರಿರುವುದರಿಂದ ಅಂಗಡಿಯೊಳಗಿರುವ ಸಾಮಗ್ರಿಗಳು, ಮಿಷಿನರಿಗಳಿಗೆ ಅಪಾಯವಾಗದಂತೆ ಮಾನವೀಯತೆ ದೃಷ್ಟಿಯಿಂದ ಸಮಯ ನೀಡಿದ್ದಾರೆ. ಮತ್ತೆ ಅಂಗಡಿಗಳನ್ನು ಫುಟ್‌ಪಾತ್ ಮೇಲೆ ಇಡದಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನಗರಸಭೆ ಅಧಿಕಾರಿಗಳು ನೀಡಿದರು.
ಪರಿಸರ ಅಭಿಯಂತರ ರುದ್ರೇಗೌಡ, ಆರೋಗ್ಯ ನಿರೀಕ್ಷಕರಾದ ಅಶ್ವತ್ಥ್, ಮಂಜೇಶ್, ಶ್ರೀನಿವಾಸ್, ಕಂದಾಯ ವಿಭಾಗದಿಂದ ಪುನೀತ್, ಮಂಜು, ಸಂತೋಷ್, ಎಂಜಿನಿಯರಿಂಗ್ ವಿಭಾಗದಿಂದ ಮಹೇಶ್, ಗೌತಮ್, ಮುಖೇಶ್‌ಗೌಡ ಫುಟ್‌ಪಾತ್ ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಫುಟ್‌ಪಾತ್ ತೆರವು ವೇಳೆ ಯಾವುದೇ ವಿರೋಧಗಳು ವ್ಯಕ್ತವಾಗದಂತೆ ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತೆಯನ್ನು ಒದಗಿಸಲಾಗಿತ್ತು. ಪೊಲೀಸ್ ರಕ್ಷಣೆಯಲ್ಲಿ ಫುಟ್‌ಪಾತ್ ತೆರವು ಕಾರ್ಯ ಸುಗಮವಾಗಿ ನಡೆಯಿತು.
ಸುಪ್ರೀಂ ಕೋರ್ಟ್ ಆದೇಶದಂತೆ ಪಾದಚಾರಿಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಫುಟ್‌ಪಾತ್ ಒತ್ತುವರಿ ತೆರವು ಮಾಡಲಾಗುತ್ತಿದೆ. ಜು.೧೮ ರಂದು ಸ್ವರ್ಣಸಂದ್ರದಿಂದ ನಂದಾ ವೃತ್ತದವರೆಗೆ ಮಾಡಲಾಗಿತ್ತು. ಈಗ ನಂದಾ ವೃತ್ತದಿಂದ ಕಲ್ಲಹಳ್ಳಿಯವರೆಗೆ ಫಟ್‌ಪಾತ್ ತೆರವು ಕಾರ್ಯಾಚರಣೆ ಮಾಡಲಾಗಿದೆ. ಫುಟ್‌ಪಾತ್ ತೆರವಿನ ಬಗ್ಗೆ ನಿನ್ನೆಯೇ ಸೂಚನೆ ನೀಡಲಾಗಿತ್ತು. ಫುಟ್‌ಪಾತ್ ಮೇಲಿದ್ದ ಅಂಗಡಿಗಳು, ಅಂಗಡಿ ಮುಂಚಾಚುಗಳು, ಅಕ್ರಮ ನಿರ್ಮಾಣಗಳನ್ನೆಲ್ಲಾ ತೆರವುಗೊಳಿಸಲಾಗಿದೆ. ವ್ಯಾಪಾರಿಗಳೂ ಅಂಗಡಿಗಳ ತೆರವಿಗೆ ಸಹಕರಿಸಿದ್ದಾರೆ.
- ಯು.ಪಿ.ಪಂಪಾಶ್ರೀ, ಆಯುಕ್ತರು, ನಗರಸಭೆ, ಮಂಡ್ಯ
ಪಾದಚಾರಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಲಾಗುತ್ತಿದೆ. ಮುನ್ಸೂಚನೆ ನೀಡಿದ್ದರಿಂದ ಕೆಲವರು ನಿನ್ನೆ ರಾತ್ರಿಯೇ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ತೆಗೆಯಲು ಸಾಧ್ಯವಾಗದಂತಹ ಪೆಟ್ಟಿ ಅಂಗಡಿ, ಬೋರ್ಡ್‌ಗಳನ್ನು ತೆರವುಗೊಳಿಸುತ್ತಿದ್ದೇವೆ. ನಂದಾ ಸರ್ಕಲ್‌ನಿಂದ ಕಲ್ಲಹಳ್ಳಿಯವರೆಗೆ ತೆರವು ಮಾಡಲಾಗಿದೆ. ಸಣ್ಣಪುಟ್ಟ ವಿರೋಧ ಬಿಟ್ಟರೆ ಯಾರಿಂದಲೂ ದೊಡ್ಡಮಟ್ಟದ ವಿರೋಧಗಳು ವ್ಯಕ್ತವಾಗಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆದಿದೆ. ಮತ್ತೆ ಫುಟ್‌ಪಾತ್ ಒತ್ತುವರಿ ಮಾಡದಂತೆ ಸೂಚನೆ ನೀಡಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.