ಸದ್ದಿಲ್ಲದೆ ಟ್ರಯಲ್ ಬ್ಲಾಸ್ಟ್‌ಗೆ ಮಂಡ್ಯ ಜಿಲ್ಲಾಡಳಿತ ಸಿದ್ಧತೆ..!

KannadaprabhaNewsNetwork |  
Published : Mar 05, 2024, 01:37 AM IST
(ಬೇಬಿ ಬೆಟ್ಟದ ಫೋಟೋ) | Kannada Prabha

ಸಾರಾಂಶ

ಹೈಕೋರ್ಟ್ ಆದೇಶದನ್ವಯ ಜಿಲ್ಲಾಡಳಿತ ಪರೀಕ್ಷಾರ್ಥ ಸ್ಫೋಟ ನಡೆಸುವ ಸಂಬಂಧ ಫೆ.೧೯ರಂದು ರೈತ ಮುಖಂಡರ ಸಭೆ ಕರೆದು ಚರ್ಚೆ ನಡೆಸಿತ್ತು. ಈ ಸಭೆಯಲ್ಲಿ ರೈತ ಮುಖಂಡರೆಲ್ಲರೂ ಟ್ರಯಲ್‌ ಬ್ಲಾಸ್ಟ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬಲವಂತವಾಗಿ ಟ್ರಯಲ್‌ ಬ್ಲಾಸ್ಟ್ ನಡೆಸಲು ಮುಂದಾದರೆ ರೈತ ಸಂಘದಿಂದ ಗೋ-ಬ್ಯಾಕ್ ಚಳವಳಿ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ರೈತರ ವ್ಯಾಪಕ ವಿರೋಧದ ನಡುವೆ ಜಿಲ್ಲಾಡಳಿತ ಕೆಆರ್‌ಎಸ್ ಬಳಿ ಸದ್ದಿಲ್ಲದೆ ಪರೀಕ್ಷಾರ್ಥ ಸ್ಫೋಟ ನಡೆಸುವುದಕ್ಕೆ ಸಿದ್ಧತೆ ನಡೆಸಿದೆ. ಈಗಾಗಲೇ ಪುಣೆ, ಜಾರ್ಖಂಡ್‌ನಿಂದ ತಜ್ಞರ ತಂಡ ಕೆಆರ್‌ಎಸ್‌ಗೆ ಆಗಮಿಸಿರುವ ಸುದ್ದಿ ಹರಡಿದ್ದು, ಟ್ರಯಲ್ ಬ್ಲಾಸ್ಟ್ ವಿರೋಧಿಸಿ ರೈತರು ಗೋ-ಬ್ಯಾಕ್ ಚಳವಳಿಗೆ ಸಜ್ಜಾಗಿದ್ದಾರೆ.

ಟ್ರಯಲ್ ಬ್ಲಾಸ್ಟ್ ಕುರಿತು ಫೆ.೧೯ರಂದು ಜಿಲ್ಲಾಡಳಿತ ರೈತ ಮುಖಂಡರ ಜೊತೆ ನಡೆಸಿದ ಸಭೆ ವಿಫಲಗೊಂಡಿತ್ತು. ನಂತರ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಸಂಸದರು, ಶಾಸಕರ ಸಮ್ಮುಖದಲ್ಲಿ ಫೆ.೨೯ರಂದು ಕರೆದಿದ್ದ ಮತ್ತೊಂದು ಸಭೆ ರದ್ದುಗೊಂಡಿತ್ತು. ಇದೀಗ ಯಾವುದೇ ಸಭೆ-ಸಮಾಲೋಚನೆ, ಪರೀಕ್ಷಾರ್ಥ ಸ್ಫೋಟದ ಸಾಧಕ-ಬಾಧಕಗಳ ಕುರಿತು ಚರ್ಚಿಸದೆ ಏಕಾಏಕಿ ತಜ್ಞರ ತಂಡವನ್ನು ಕರೆಸಿ ಪರೀಕ್ಷಾರ್ಥ ಸ್ಫೋಟಕ್ಕೆ ಸಿದ್ಧತೆ ನಡೆಸಿರುವ ಜಿಲ್ಲಾಡಳಿತದ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯವಿರುವುದನ್ನು ಮನಗಂಡು ರಾಜ್ಯ ಉಚ್ಛ ನ್ಯಾಯಾಲಯ ಅಣೆಕಟ್ಟೆ ಸುತ್ತ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿ ಜ.೮ರಂದು ಆದೇಶ ಹೊರಡಿಸಿತ್ತು. ಇದರ ಜೊತೆಗೆ ಅಣೆಕಟ್ಟು ಸುರಕ್ಷತಾ ಸಮಿತಿಯಿಂದ ನಿಗದಿತ ಪ್ರದೇಶದೊಳಗೆ ಪರೀಕ್ಷಾರ್ಥ ಸ್ಫೋಟ ನಡೆಸಿ ಅಣೆಕಟ್ಟೆಗೆ ಅಪಾಯವಿದೆಯೋ, ಇಲ್ಲವೋ ಎಂಬ ಬಗ್ಗೆ ೬ ತಿಂಗಳೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು.

ಮೊದಲ ಸಭೆ ವಿಫಲ:

ಈಗಾಗಲೇ ಜಿಲ್ಲಾಡಳಿತ ಮೊದಲ ಬಾರಿಗೆ ರೈತ ಮುಖಂಡರೊಂದಿಗೆ ಪರೀಕ್ಷಾರ್ಥ ಸ್ಫೋಟ ಸಂಬಂಧ ನಡೆಸಿದ್ದ ಸಭೆ ವಿಫಲಗೊಂಡಿತ್ತು. ಇದೀಗ ಎರಡನೇ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರ ನೇತೃತ್ವದಲ್ಲಿ ರೈತಮುಖಂಡರ ಸಭೆ ಕರೆದಿದ್ದು, ಈ ಸಭೆಗೆ ಜನಪ್ರತಿನಿಧಿಗಳನ್ನೂ ಆಹ್ವಾನಿಸಲಾಗಿದೆ. ಪರೀಕ್ಷಾರ್ಥ ಸ್ಫೋಟದ ನೆಪದಲ್ಲಿ ಕೆಆರ್‌ಎಸ್ ಸಮೀಪ ಗಣಿಗಾರಿಕೆಗೆ ಅವಕಾಶ ಮಾಡಿಕೊಡುವ ಸಂಚು ಇದರ ಹಿಂದೆ ಅಡಗಿದ್ದು, ಇದಕ್ಕೆ ನಾವು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಬಿಗಿಪಟ್ಟು ಹಿಡಿದಿದ್ದರು.

ಕೆಆರ್‌ಎಸ್ ಸುತ್ತ ಜೀವ ವೈವಿಧ್ಯ ವಲಯ, ಅರಣ್ಯ, ಪಕ್ಷಿಧಾಮ, ಪ್ರಾಕೃತಿಕ ಸಂಪತ್ತಿದೆ. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕಿದೆ. ಪ್ರಾಕೃತಿಕ ಸಂಪತ್ತನ್ನು ಉಳಿಸುವುದರ ಮೇಲೆ ಆಸಕ್ತಿಯನ್ನೇ ತೋರದ ಜಿಲ್ಲಾಡಳಿತ, ಪರೀಕ್ಷಾರ್ಥ ಸ್ಫೋಟ ನಡೆಸುವುದಕ್ಕೆ ಹೆಚ್ಚಿನ ಮುತುವರ್ಜಿ, ಆಸಕ್ತಿ ತೋರುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಪ್ರಶ್ನಿಸಿದ್ದರು.

ಕಾಂಗ್ರೆಸ್ ಬೆಂಬಲಿತ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ನಾವು ಟ್ರಯಲ್ ಬ್ಲಾಸ್ಟ್ ವಿರೋಧಿಗಳಾಗಿದ್ದೇವೆ. ನಮಗೆ ಕೃಷ್ಣರಾಜಸಾಗರ ಅಣೆಕಟ್ಟು ಉಳಿಸುವುದೇ ಮುಖ್ಯವಾಗಿದೆ. ಕೈಕುಳಿಗೆ ಸೀಮಿತವಾಗಿ ಗಣಿಗಾರಿಕೆ ನಡೆಸುವುದಾದರೆ ಆಕ್ಷೇಪವಿಲ್ಲ. ಒಮ್ಮೆ ಸ್ಫೋಟದೊಂದಿಗೆ ಗಣಿಗಾರಿಕೆ ನಡೆಸುವುದಾದರೆ ಅದಕ್ಕೆ ನಾವೂ ವಿರುದ್ಧವಿದ್ದೇವೆ ಎಂದು ತಿಳಿಸಿದ್ದರು.

ಸಂಸದೆ ಸುಮಲತಾ ಕೂಡ ಕೆಆರ್‌ಎಸ್ ಅಣೆಕಟ್ಟು ಸುತ್ತ ಟ್ರಯಲ್ ಬ್ಲಾಸ್ಟ್ ನಡೆಸುವ ಅವಶ್ಯಕತೆ ಏನಿದೆ. ಗಣಿಗಾರಿಕೆ ಪ್ರದೇಶದಲ್ಲಿ ನಡೆಯುವ ಸ್ಫೋಟದಿಂದ ಅಣೆಕಟ್ಟೆಗೆ ತುಂಬಾ ಅಪಾಯವಿದೆ. ಯಾವುದೇ ಕಾರಣಕ್ಕೂ ಸ್ಫೋಟ ಮಾಡಬಾರದು. ಇದರ ವಿರುದ್ಧ ನಾನೂ ಸಹ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.

ಟ್ರಯಲ್ ಬ್ಲಾಸ್ಟ್‌ಗೆ ರೈತಸಂಘ ವಿರೋಧ:

ಹೈಕೋರ್ಟ್ ಆದೇಶದನ್ವಯ ಜಿಲ್ಲಾಡಳಿತ ಪರೀಕ್ಷಾರ್ಥ ಸ್ಫೋಟ ನಡೆಸುವ ಸಂಬಂಧ ಫೆ.೧೯ರಂದು ರೈತ ಮುಖಂಡರ ಸಭೆ ಕರೆದು ಚರ್ಚೆ ನಡೆಸಿತ್ತು. ಈ ಸಭೆಯಲ್ಲಿ ರೈತ ಮುಖಂಡರೆಲ್ಲರೂ ಟ್ರಯಲ್‌ಬ್ಲಾಸ್ಟ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬಲವಂತವಾಗಿ ಟ್ರಯಲ್‌ ಬ್ಲಾಸ್ಟ್ ನಡೆಸಲು ಮುಂದಾದರೆ ರೈತಸಂಘದಿಂದ ಗೋ-ಬ್ಯಾಕ್ ಚಳವಳಿ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಜೊತೆಗೆ ಕೃಷ್ಣರಾಜಸಾಗರ ಜಲಾಶಯದ ಉತ್ತರದಾಯಿತ್ವವನ್ನು ರೈತ ಸಂಘದವರು ಮಾತ್ರ ತೆಗೆದುಕೊಂಡಿಲ್ಲ. ಜಿಲ್ಲೆಯ ಮಂತ್ರಿಗಳು, ಏಳು ಮಂದಿ ಶಾಸಕರು, ವಿಧಾನ ಪರಿಷತ್ ಸದಸ್ಯರೂ ಇದ್ದಾರೆ. ಅವರನ್ನೂ ಸಭೆಗೆ ಕರೆಯಿರಿ. ಅವರ ಅಭಿಪ್ರಾಯ ಏನೆಂಬುದನ್ನೂ ತಿಳಿದುಕೊಳ್ಳೋಣ. ಯಾರು ಪ್ರಾಯೋಗಿಕ ಸ್ಫೋಟದ ಪರವಾಗಿದ್ದಾರೆ. ಯಾರು ವಿರೋಧವಾಗಿದ್ದಾರೆ. ಅಣೆಕಟ್ಟು ಸುರಕ್ಷತೆ ಬಗ್ಗೆ ಯಾರಿಗೆ ಎಷ್ಟು ಕಾಳಜಿ ಇದೆ ಎನ್ನುವುದು ಜನರಿಗೂ ಗೊತ್ತಾಗುತ್ತದೆ ಎಂದು ಹೇಳಿದ್ದರು.

ರೈತರ ಒತ್ತಾಯಕ್ಕೆ ಮಣಿದು ಫೆ.೨೯ರಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ರೈತ ಮುಖಂಡರನ್ನು ಆಹ್ವಾನಿಸಿ ಸಭೆ ನಿಗದಿ ಪಡಿಸಲಾಗಿತ್ತು. ಪರೀಕ್ಷಾರ್ಥ ಸ್ಫೋಟದ ಸಾಧಕ-ಬಾಧಕಗಳ ಕುರಿತು ಸಮಾಲೋಚನೆ ನಡೆಸಬೇಕಿದ್ದ ಸಭೆ ಕಾರಣಾಂತರಗಳಿಂದ ರದ್ದುಗೊಂಡಿತ್ತು.

ಇದೀಗ ಏಕಾಏಕಿ ತೀರ್ಮಾನ ಕೈಗೊಂಡು ಜಿಲ್ಲಾಡಳಿತ ಒಂದೆಡೆ ಪರೀಕ್ಷಾರ್ಥ ಸ್ಫೋಟಕ್ಕೆ ಸಿದ್ಧತೆ ನಡೆಸಿದ್ದರೆ, ಮತ್ತೊಂದೆಡೆ ಮೈಸೂರು ಮಹಾರಾಣಿ ಪ್ರಮೋದಾದೇವಿ ಸೇರಿದಂತೆ ಹೋರಾಟಗಾರರಲ್ಲಿ ಕೆಲವರು ಪರೀಕ್ಷಾರ್ಥ ಸ್ಫೋಟಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತರುವುದಕ್ಕೆ ಮುಂದಾಗಿದ್ದಾರೆ. ಮಂಗಳವಾರ (ಮಾ.೪) ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ ಎನ್ನಲಾಗುತ್ತಿದ್ದು, ಮುಂದಿನ ಬೆಳವಣಿಗೆಗಳು ಎಲ್ಲರಲ್ಲೂ ಕುತೂಹಲ ಕೆರಳಿಸುವಂತೆ ಮಾಡಿವೆ.ಎರಡು ಬಾರಿ ಪರೀಕ್ಷಾರ್ಥ ಸ್ಫೋಟ ಯತ್ನ ವಿಫಲ

೨೦೧೮ರ ಸೆ.೨೫ರಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೇಬಿ ಬೆಟ್ಟದ ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯಗಳಿರುವ ಸಾಧ್ಯತೆ ಕುರಿತು ವರದಿ ನೀಡಿದ ನಂತರ ೨೯ ಜನವರಿ ೨೦೧೯ರಂದು ಸೆಂಟ್ರಲ್ ವಾಟರ್ ಅಂಡ್ ಪವರ್ ರೀಸರ್ಚ್ ಸ್ಟೆಷನ್ ಪುಣೆ ವಿಜ್ಞಾನಿಗಳ ತಂಡ ಪ್ರಾಯೋಗಿಕ ಸ್ಫೋಟ ಪರೀಕ್ಷೆಗೆ ಆಗಮಿಸಿತ್ತು. ಪ್ರಯೋಗಾತ್ಮಕ ಪರೀಕ್ಷೆಗೆ ಆಗಮಿಸಿದ್ದ ಹುಲಿಕೆರೆ ಬಳಿ ಇರುವ ಹೆರಿಟೇಜ್ ಶೆಲ್ಟರ್ ಹೋಟೆಲ್‌ನಲ್ಲಿ ತಂಗಿದ್ದರು. ಕೆಆರ್‌ಎಸ್ ಉಳಿಸಿ ಜನಾಂದೋಲನ ಸಮಿತಿಯವರ ತೀವ್ರ ವಿರೋಧದಿಂದ ಸೆಂಟ್ರಲ್ ವಾಟರ್ ಅಂಡ್ ಪವರ್ ರೀಸರ್ಚ್ ಸ್ಟೆಷನ್ ವಿಜ್ಞಾನಿಗಳಾದ ಎ.ಕೆ ಘೋಷ್, ವಿಜಯಘೋಡ್ಕೆ, ರಿಸರ್ಚ್ ಅಸಿಸ್ಟೆಂಟ್ ರಾಜೇಂದ್ರ ಗುರ್ಜಾರ್, ಲ್ಯಾಬ್ ಟೆಕ್ನಿಷಿಯನ್ ನಿಖಿಲ್ ತರಾಡೆ ಹೋಟೆಲ್ ಬಿಟ್ಟು ಹೊರ ಬರಲಿಲ್ಲ. ಪರೀಕ್ಷೆ ನಡೆಸದೆ ವಾಪಸಾಗಿದ್ದರು.

ಮತ್ತೆ ೨೦೨೨ರ ಜುಲೈ ೨೫ ರಿಂದ ೩೧ರವರೆಗೆ ಬೇಬಿ ಬೆಟ್ಟದಲ್ಲಿ ಪ್ರಾಯೋಗಿಕ ಸ್ಫೋಟ ನಡೆಸಲು ರಾಜ್ಯಸರ್ಕಾರ ನಿರ್ಧರಿಸಿತ್ತು. ಇದಕ್ಕಾಗಿ ಕೆಆರ್‌ಎಸ್ ಜಲಾಶಯಕ್ಕೆ ಜಾರ್ಖಂಡ್‌ನ ಧನಬಾದ್‌ನಿಂದ ವಿಶೇಷ ತಂಡವೊಂದು ಆಗಮಿಸಿತ್ತು. ಅದೂ ಕೂಡ ಯಶಸ್ವಿಯಾಗಿ ನಡೆದಿರಲಿಲ್ಲ.

ಕೆಆರ್‌ಎಸ್ ಸಮೀಪ ಟ್ರಯಲ್ ಬ್ಲಾಸ್ಟ್ ನಡೆಸುವಂತೆ ಹೈಕೋರ್ಟ್ ಸೂಚಿಸಿದೆ. ಅದರಂತೆ ಪರಿಶೀಲನೆಗೆ ತಜ್ಞರು ಆಗಮಿಸಲಿದ್ದಾರೆ. ನಾಳೆ ಟ್ರಯಲ್ ಬ್ಲಾಸ್ಟ್ ಮಾಡಬೇಕೇ, ಬೇಡವೇ, ಪೂರ್ಣ ಪ್ರಮಾಣದಲ್ಲಿ ಸಭೆ ನಡೆಸಿ ಎಲ್ಲರನ್ನೂ ಮನವೊಲಿಸಿ ಮಾಡಬೇಕೇ ಎನ್ನುವುದನ್ನು ತಜ್ಞರ ಜೊತೆ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ.

- ಎನ್.ಚಲುವರಾಯಸ್ವಾಮಿ, ಕೃಷಿ, ಜಿಲ್ಲಾ ಉಸ್ತುವಾರಿ ಸಚಿವರು

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ