ಕನ್ನಡಪ್ರಭ ವಾರ್ತೆ ಮಳವಳ್ಳಿ
ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಅನುದಾನ ಕಡಿತಗೊಳಿಸಿರುವುದನ್ನು ವಿರೋಧಿಸಿ ಹಾಗೂ ಬಿಜೆಪಿ ಸರ್ಕಾರದಲ್ಲಿ ನಡೆದಿದೆ ಎನ್ನಲಾದ 21 ಹಗರಣಗಳ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಜನಾಂದೋಲನ ಕಾರ್ಯಕ್ರಮ ಮಂಡ್ಯದಲ್ಲಿ ಆಗಸ್ಟ್ 6 ಹಾಗೂ ಮೈಸೂರಿನಲ್ಲಿ 9 ರಂದು ನಡೆಯಲಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜನಾಂದೋಲನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಜ್ಯದ ಮತದಾರರು ಕಾಂಗ್ರೆಸ್‌ಗೆ ಸ್ವಷ್ಟ ಬಹುಮತ ಕೊಟ್ಟು ಅಧಿಕಾರ ಕೊಟ್ಟಿದ್ದಾರೆ. ಈ ಸರ್ಕಾರವನ್ನು ಅಸ್ಥಿರ ಗೊಳಿಸುವ ಹುನ್ನಾರದಿಂದ ಬಿಜೆಪಿ-ಜೆಡಿಎಸ್ ಪಕ್ಷದವರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ವಿಪಕ್ಷಗಳ ಪಾದಯಾತ್ರೆಗೆ ತಕ್ಕ ಉತ್ತರ ನೀಡಲು ಕಾಂಗ್ರೆಸ್‌ನಿಂದ ಜನಂದೋಲನ ಹಮ್ಮಿಕೊಳ್ಳಲಾಗುತ್ತಿದೆ ಎಂದರು.ರಾಜ್ಯಪಾಲರ ಮುಖಾಂತರ ಸರ್ಕಾರಕ್ಕೆ ನೋಟಿಸ್ ನೀಡಿಸಿದ್ದಾರೆ. ಅಧಿವೇಶನದಲ್ಲಿ ತಕ್ಕ ಉತ್ತರ ನೀಡಿದ್ದೇವೆ. ಬಿಜೆಪಿ ಪಕ್ಷದವರು ಜೆಡಿಎಸ್ ಮುಖಂಡರಾದ ಕುಮಾರಸ್ವಾಮಿ ಅವರನ್ನು ಮುಂದೆ ಬಿಟ್ಟುಕೊಂಡು ಕುಲ್ಲಕ್ಷ ರಾಜಕಾರಣ ಮಾಡುತ್ತಿದ್ದಾರೆ. ಇದು ಫಲ ಕೊಡುವುದಿಲ್ಲ ಎಂದು ಛೇಡಿಸಿದರು.
ಬಹುಮತ ಕಳೆದುಕೊಂಡ ಬಿಜೆಪಿ-ಜೆಡಿಎಸ್ ಯಾವುದೇ ಆರೋಪಗಳಿಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಪಾದಯಾತ್ರೆ ನಡೆಸುತ್ತಿವೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯದಲ್ಲಿರುವ ಸರ್ಕಾರವನ್ನು ರಾಜ್ಯಪಾಲರ ಮೂಲಕ ಅಸ್ಥಿರಗೊಳಿಸಲು ಹೊರಟ್ಟಿದ್ದಾರೆ. ಇದು ಸಾಧ್ಯವಿಲ್ಲ. ಇದನ್ನು ಪ್ರಶ್ನೆ ಮಾಡುವ ಹಕ್ಕು ನಮ್ಮಲ್ಲಿರುವುದರಿಂದ ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಲು ತಾಲೂಕಿನಾದ್ಯಂತ ಪ್ರತಿಯೊಂದು ಗ್ರಾಮದಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರು ಜನಾಂದೋಲನ ಕಾರ್ಯದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊಡ್ಡಯ್ಯ, ಸಿ.ಪಿ ರಾಜು, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಅಧ್ಯಕ್ಷ ಚಿಕ್ಕಲಿಂಗಯ್ಯ, ಜಿಪಂ ಮಾಜಿ ಸದಸ್ಯ ಆರ್.ಎನ್ ವಿಶ್ವಾಸ್, ಕೆಪಿಸಿಸಿ ಸದಸ್ಯರಾದ ಚನ್ನಪಿಳ್ಳೇಕೊಪ್ಪಲು ಸಿದ್ದೇಗೌಡ, ಪುಟ್ಟಸ್ವಾಮಿ, ತಾಪಂ ಮಾಜಿ ಉಪಾಧ್ಯಕ್ಷ ಮಾರ್ಕಾಲು ಮಾಧು, ಟಿಎಪಿಸಿಎಂಎಸ್ ಅಧ್ಯಕ್ಷ ಬಸವರಾಜು, ಮಾಜಿ ಅಧ್ಯಕ್ಷ ಕುಳ್ಳಚನ್ನಂಕಯ್ಯ, ಮುಖಂಡರಾದ ಅಂಬರೀಷ್, ದೇವರಾಜು, ಚಂಧ್ರಕುಮಾರ್, ಕುಂದೂರು ಕೆ.ಎಸ್ ಪ್ರಕಾಶ್, ಹುಸ್ಕೂರು ಕೃಷ್ಣಮೂರ್ತಿ ಸೇರಿದಂತೆ ಇತರರು ಇದ್ದರು.