ಕನ್ನಡಪ್ರಭ ವಾರ್ತೆ ಮಂಡ್ಯ
ಮೊದಲ ಅವಧಿಯಲ್ಲಿ ನಗರಸಭೆ ಅಧ್ಯಕ್ಷರಾಗಿದ್ದ ಎಚ್.ಎಸ್.ಮಂಜು ಕಾಂಗ್ರೆಸ್ ಪಕ್ಷ ಸೇರಿದ್ದು, ಎರಡನೇ ಅವಧಿಯಲ್ಲೂ ಅಧ್ಯಕ್ಷರಾಗಿ ಮುಂದುವರೆಯುವ ಬಯಕೆಯೊಂದಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಜೆಡಿಎಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಿದ್ದರೂ ವರಿಷ್ಠರ ನಿರ್ಧಾರಕ್ಕೆ ಬಿಡಲಾಗಿದೆ.
ಕಾಂಗ್ರೆಸ್‌ನ ಮೂವರು ಜೆಡಿಎಸ್ ಬೆಂಬಲಕ್ಕೆ:ಚುನಾವಣೆ ಘೋಷಣೆಯಾದ ನಂತರದಲ್ಲಿ ಜೆಡಿಎಸ್ ಪಕ್ಷದ ೧೨ನೇ ವಾರ್ಡ್‌ನ ಭಾರತೀಶ್ ಮತ್ತು ೩೨ನೇ ವಾರ್ಡ್‌ನ ಸಿ.ಕೆ.ರಜನಿ ಕಾಂಗ್ರೆಸ್ ಕಡೆಗೆ ಜಿಗಿದಿದ್ದಾರೆಂದು ಹೇಳಲಾಗುತ್ತಿದ್ದು, ಕಾಂಗ್ರೆಸ್ ಪಕ್ಷದಿಂದ ೨೭ನೇ ವಾರ್ಡ್‌ನ ಟಿ.ಕೆ.ರಾಮಲಿಂಗು, ೨೩ನೇ ವಾರ್ಡ್‌ನ ಜಯೀದಾ ಬಾನು ಮತ್ತು ೩೧ನೇ ವಾರ್ಡ್‌ನ ಸೈಯದ್ ವಾಸಿಂ ಅವರು ಜೆಡಿಎಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ.
ಇದರೊಂದಿಗೆ ನಗರಸಭೆಯ ಒಟ್ಟು ೩೫ ಸದಸ್ಯ ಬಲದಲ್ಲಿ ಕಾಂಗ್ರೆಸ್-೭, ಕಾಂಗ್ರೆಸ್ ಬಂಡಾಯ-೩, ಪಕ್ಷೇತರ-೫ ಸದಸ್ಯರು ಹಾಗೂ ಶಾಸಕ ಪಿ.ರವಿಕುಮಾರ್ ಸೇರಿ ೧೫ ಸಂಖ್ಯಾ ಬಲವನ್ನು ಹೊಂದಿದೆ. ವಿಧಾನ ಪರಿಷತ್ ಶಾಸಕರ ಮತವಿದ್ದರೂ ಎರಡೂ ಪಕ್ಷದ ಶಾಸಕರು ಮಂಡ್ಯ ನಗರದಲ್ಲಿ ಮತ ಹಕ್ಕು ಹೊಂದಿಲ್ಲದಿರುವುದರಿಂದ ಆ ಮತ ಯಾರಿಗೂ ಸಿಗದಂತಾಗಿದೆ. ಜೆಡಿಎಸ್-೧೫, ಬಿಜೆಪಿ-೨, ಕಾಂಗ್ರೆಸ್ ಬಂಡಾಯ-೩ ಸದಸ್ಯರು ಹಾಗೂ ಸಂಸದ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ೧೯ ಸದಸ್ಯರ ಬಲವನ್ನು ಒಳಗೊಂಡಿದೆ. ಕಾಂಗ್ರೆಸ್ ಅಧಿಕಾರ ಹಿಡಿಯುವುದಕ್ಕೆ ಇನ್ನೂ ಐದು ಸದಸ್ಯರ ಕೊರತೆಯನ್ನು ಎದುರಿಸುತ್ತಿದೆ.
ಕಾಂಗ್ರೆಸ್ ಪಕ್ಷದಿಂದ ಸತತ ಎರಡನೇ ಬಾರಿ ಆಯ್ಕೆಯಾಗಿರುವ ಟಿ.ಕೆ.ರಾಮಲಿಂಗು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಅವಕಾಶ ಸಿಗದಿದ್ದರಿಂದ ಬೇಸತ್ತು ಜೆಡಿಎಸ್‌ಗೆ ಬೆಂಬಲ ಸೂಚಿಸಲು ಮುಂದಾಗಿದ್ದಾರೆ. ಅವರನ್ನೇ ಹಿಂಬಾಲಿಸಿರುವ ಜಯೀದಾ ಬಾನು ಮತ್ತು ಸೈಯದ್ ವಾಸಿಂ ಅವರು ಉಪಾಧ್ಯಕ್ಷ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ಬಿಟ್ಟುಕೊಡುವಂತೆ ಬೇಡಿಕೆ ಇಟಿದ್ದು, ಉಪಾಧ್ಯಕ್ಷ ಸ್ಥಾನವನ್ನು ಯಾವ ಪಕ್ಷ ಬಿಟ್ಟುಕೊಡುವುದೋ ಅವರಿಗೆ ಬೆಂಬಲ ಸೂಚಿಸುವುದಾಗಿ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ನಾಗಮಂಗಲ ಪುರಸಭೆ ನಂತರ ಕಾಂಗ್ರೆಸ್ ನಗರಸಭೆ ಗದ್ದುಗೆ ಮೇಲೆ ಕಣ್ಣಿಟ್ಟಿದೆ. ಬಹುಮತವನ್ನು ಹೊಂದಿದ್ದ ಜೆಡಿಎಸ್‌ನ್ನು ನಾಗಮಂಗಲ ಪುರಸಭೆ ಚುನಾವಣೆಯಲ್ಲಿ ಮಣಿಸಿದ ರೀತಿಯಲ್ಲೇ ಮಂಡ್ಯ ನಗರಸಭೆಯಲ್ಲೂ ಸೋಲುಣಿಸುವುದಕ್ಕೆ ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಅನಿರೀಕ್ಷಿತ ಬೆಳವಣಿಗೆಗಳೇನಾದರೂ ಘಟಿಸಿದರಷ್ಟೇ ಅಧಿಕಾರ ಕಾಂಗ್ರೆಸ್ ಪಾಲಾಗಬಹುದೆಂದು ಹೇಳಲಾಗುತ್ತಿದೆ.
ನಗರಸಭೆ ಮೇಲೂ ಕರಾಳ ಛಾಯೆ:
ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಗೆದ್ದೇ ಗೆಲ್ಲುವುದೆಂಬ ವಾತಾವರಣ ಸೃಷ್ಟಿಯಾದರಷ್ಟೇ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಚುನಾವಣೆಯಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ಇಲ್ಲದಿದ್ದರೆ ಮುಜುಗರ, ಮುಖಭಂಗ ಅನುಭವಿಸುವ ಪರಿಸ್ಥಿತಿ ಉಂಟಾಗುವ ಸಾಧ್ಯತೆಗಳಿದ್ದರೆ ಗೈರು ಹಾಜರಾಗಲಿದ್ದಾರೆಂಬುದು ಪಕ್ಷದ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ.