ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ ಕಲಿಸಿ: ಸುಭಾಷ

KannadaprabhaNewsNetwork | Published : Aug 28, 2024 12:49 AM

ಸಾರಾಂಶ

ನಮ್ಮ ಆಚಾರ ವಿಚಾರ, ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಇಂದಿನ ದಿನಗಳಲ್ಲಿ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಬೇಕಾದ ಅನಿವಾರ್ಯತೆ ಹೆಚ್ಚಿದ್ದು, ಈ ಬಗ್ಗೆ ಪಾಲಕರ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಸುಭಾಷ ಎಂ. ಶೆಟ್ಟಿ ತಿಳಿಸಿದರು.

ಭಟ್ಕಳ: ಆಧುನಿಕ ಸಂಸ್ಕೃತಿಯಿಂದಾಗಿ ನಮ್ಮ ಪೂರ್ವಿಕರು ಹಾಕಿ ಕೊಟ್ಟ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಎಂದು ಗಾಣಿಗ ಸಮಾಜ ಸೇವಾ ಟ್ರಸ್ಟ್ ಭಟ್ಕಳದ ಅಧ್ಯಕ್ಷ ಸುಭಾಷ ಎಂ. ಶೆಟ್ಟಿ ವಿಷಾದಿಸಿದರು.

ಇಲ್ಲಿನ ಗೋಪಾಲಕೃಷ್ಣ ಸಭಾಭವನದಲ್ಲಿ ಗಾಣಿಗ ಸಮಾಜ ಸೇವಾ ಟ್ರಸ್ಟ್, ಶ್ರೀ ಗೋಪಾಲಕೃಷ್ಣ ಪತ್ತಿನ ಸಹಕಾರಿ ಸಂಘ, ಶ್ರೀ ಮುಗಳಿಕೋಣೆ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿಯ ಆಶ್ರಯದಲ್ಲಿ ಮುದ್ದು ರಾಧಾಕೃಷ್ಣ ವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಆಚಾರ ವಿಚಾರ, ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಇಂದಿನ ದಿನಗಳಲ್ಲಿ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಬೇಕಾದ ಅನಿವಾರ್ಯತೆ ಹೆಚ್ಚಿದ್ದು, ಈ ಬಗ್ಗೆ ಪಾಲಕರ ಜವಾಬ್ದಾರಿ ಮಹತ್ವದ್ದಾಗಿದೆ ಎಂದರು. ಸ್ಪರ್ಧೆಯಲ್ಲಿ ಮುದ್ದು ರಾಧೆಯಾಗಿ ಸಮೃದ್ಧಿ ಮಹೇಶ ಆಚಾರ್ಯ, ರುಹಾನಿ ರಾಜೇಂದ್ರ ಗಾಣಿಗ, ಮೌಲ್ಯ ಕೆ. ಮೊಗೇರ ಹಾಗೂ ಮುದ್ದು ಕೃಷ್ಣನಾಗಿ ಪುನರ್ವಿ ರಾಜೇಶ್ ಶೆಟ್ಟಿ, ಶಮಿಕಾ ನಾಯ್ಕ, ಧೀರಾ ಕಿರಣ ನಾಯ್ಕ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.

ಕಾರ್ಯಕ್ರಮದಲ್ಲಿ ಇಂಡಿಯಾ ಕಾಸ್ಟ್ ಮಿಡಿಯಾ ಡಿಸ್ಟ್ರಿಬ್ಯೂಷನ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ನಿರ್ದೇಶಕ ಎ.ಪಿ. ಗಿರೀಶ್, ಇವರು ವಿಜೇತ ಮುದ್ದುಮಕ್ಕಳಿಗೆ ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನವನ್ನು ವಿತರಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಎಂ.ಶೆಟ್ಟಿ, ವಿಶ್ವನಾಥ್ ಶೆಟ್ಟಿ ಸರ್ಪನ ಕಟ್ಟೆ, ಟ್ರಸ್ಟಿನ ಉಪಾಧ್ಯಕ್ಷೆ ರಾಧಾ ಶೆಟ್ಟಿ, ಗಜಾನನ ಶೆಟ್ಟಿ ಮುರ್ಡೇಶ್ವರ ಮುಂತಾದವರಿದ್ದರು.

ನಂತರ ನ್ಯೂ ಇಂಗ್ಲಿಷ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ಕೃಷ್ಣ ರೂಪಕ ನೃತ್ಯ, ಭಜನೆ ನಡೆಯಿತು. ಕಾರ್ಯಕ್ರಮ ಸಂಯೋಜಕ ಪ್ರಕಾಶ್ ಎಂ. ಶಿರಾಲಿ ಸ್ವಾಗತಿಸಿದರು. ಕಾರ್ಯದರ್ಶಿ ಮನೋಜ್ ಶೆಟ್ಟಿ ಮತ್ತು ಉಷಾ ಶೆಟ್ಟಿ ನಿರೂಪಿಸಿದರು. ಸಹಕಾರ್ಯದರ್ಶಿ ರಾಜೇಶ್ ಕೆ. ಶೆಟ್ಟಿ ವಂದಿಸಿದರು.

Share this article