ನವೋದಯ ವಿದ್ಯಾಲಯಕ್ಕೆ ಸಂಸದ ರಾಜಶೇಖರ ಹಿಟ್ನಾಳ ಭೇಟಿ

KannadaprabhaNewsNetwork |  
Published : Aug 28, 2024, 12:49 AM IST
26ಕೆಕೆಆರ್3:ಸಂಸದ ರಾಜಶೇಖರ ಹಿಟ್ನಾಳ ಅವರು ಸೋಮವಾರ ಸಂಜೆ ಕುಕನೂರು ಪಟ್ಟಣದ ನವೋದಯ ವಿದ್ಯಾಲಯಕ್ಕೆ ಬೇಟಿ ನೀಡಿ ಪಾಲಕರೊಂದಿಗೆ ವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ಜರುಗಿದ ಹಲ್ಲೆ ಘಟನೆ ಕುರಿತು ಚರ್ಚೆ ನಡೆಸಿದರು.  | Kannada Prabha

ಸಾರಾಂಶ

ಪಟ್ಟಣದ ನವೋದಯ ವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯರ ಮೇಲೆ ಹಲ್ಲೆ ನಡೆಸಿದ್ದು, ಪಾಲಕರು ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆ ಸಂಸದರು ಸೋಮವಾರ ಸಂಜೆ ಪಟ್ಟಣದ ನವೋದಯ ವಿದ್ಯಾಲಯಕ್ಕೆ ಭೇಟಿ ನೀಡಿದರು.

ಶಿಸ್ತು ಪಾಲಿಸುವಂತೆ ಸೂಚನೆ । ಎಲ್ಲ ವಸತಿಗೃಹಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲು ಪಾಲಕರ ಮನವಿ

ಕನ್ನಡಪ್ರಭ ವಾರ್ತೆ ಕುಕನೂರು

ಪಟ್ಟಣದ ನವೋದಯ ವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯರ ಮೇಲೆ ಹಲ್ಲೆ ನಡೆಸಿದ್ದು, ಪಾಲಕರು ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆ ಸಂಸದರು ಸೋಮವಾರ ಸಂಜೆ ಪಟ್ಟಣದ ನವೋದಯ ವಿದ್ಯಾಲಯಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ವಿವರ ಪಡೆದು ವಿದ್ಯಾಲಯದಲ್ಲಿ ಈ ರೀತಿ ಘಟನೆಗಳು ಮರುಕಳಿಸದಂತೆ ಶಿಸ್ತು ಪಾಲಿಸಲು ವಿದ್ಯಾಲಯದ ಬೋಧಕ, ಸಿಬ್ಬಂದಿಗೆ ಸೂಚಿಸಿದ್ದಾರೆ.

ಸಂಸದ ರಾಜಶೇಖರ ಹಿಟ್ನಾಳ ಅವರೊಂದಿಗೆ ಚರ್ಚಿಸಿದ ಪಾಲಕರು, ಆ. 20ರಂದು ವಿದ್ಯಾಲಯದ ಆವರಣದಲ್ಲಿ ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳ ಮೇಲೆ ಅತ್ಯಂತ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಕಟ್ಟಿಗೆ, ಬೆಲ್ಟ್ ಹಾಗೂ ಪೈಪ್ ಗಳ ಮೂಲಕ ಹೊಡೆದಿದ್ದಾರೆ. ಕೆಲ ವಿದ್ಯಾರ್ಥಿಗಳ ಗುಪ್ತಾಂಗಗಳಿಗೆ ಹೊಡೆದು ಅಮಾನುಷವಾಗಿ ನಡೆದುಕೊಂಡಿದ್ದಾರೆ. ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಹಲ್ಲೆ ಆಗಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿದ್ದು ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಇಷ್ಟೆಲ್ಲ ನಡೆದರೂ ಅಲ್ಲಿಯ ಪ್ರಾಚಾರ್ಯರಾಗಲಿ, ಶಿಕ್ಷಕರಾಗಲಿ, ಸಿಬ್ಬಂದಿಯಾಗಲಿ ಯಾವುದೇ ಪಾಲಕರ ಗಮನಕ್ಕೆ ತಂದಿಲ್ಲ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯವಾಗಿ ವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಿದ್ದು ಕಂಡು ಬಂದಿದೆ. ಬೀಡಿ, ಸಿಗರೇಟ್, ಗುಟ್ಕಾ ಹಾಗೂ ಮದ್ಯ ಸೇವನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ‌. ಹೀಗಾಗಿ ಆಡಳಿತ ವೈಫಲ್ಯಕ್ಕೆ ಕಾರಣರಾದ ವಿದ್ಯಾಲಯದ ಪ್ರಾಚಾರ್ಯರನ್ನು ಅಮಾನತು ಮಾಡಬೇಕು. ಹಲ್ಲೆ ಮಾಡಿದ ವಿದ್ಯಾರ್ಥಿಗಳನ್ನು ವಿದ್ಯಾಲಯದಿಂದ ಶಾಶ್ವತವಾಗಿ ಹೊರಹಾಕಬೇಕು. ಅಲ್ಲಿಯ ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು. ಎಲ್ಲ ವಸತಿಗೃಹಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ಪೊಲೀಸ್ ಸಿಬ್ಬಂದಿ ಗಸ್ತು ಹಾಕಬೇಕು ಎಂದು ಪಾಲಕರು ಸಂಸದರಿಗೆ ಮನವಿ ಮಾಡಿದರು.

ಬಳಿಕ ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ವಿದ್ಯಾಲಯದಲ್ಲಿ ಈ ರೀತಿ ಅವಘಡಗಳು ಸಂಭವಿಸಬಾರದು. ವಿದ್ಯಾರ್ಥಿಗಳಲ್ಲಿ ಶಿಸ್ತು, ಶಿಕ್ಷಣ ಬೆಳೆಯಲಿ ಎಂದು ನವೋದಯ ವಿದ್ಯಾಲಯಗಳು ಇವೆ. ಆದರೆ ಇಲ್ಲಿ ಶಿಸ್ತು ಕಣ್ಮರೆ ಆಗುತ್ತಿದೆ. ಇದಕ್ಕೆ ಬೋಧಕರು, ನಿಲಯ ಪಾಲಕ ಹಾಗೂ ಇಲ್ಲಿನ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣವಾಗಿದೆ. ಕೂಡಲೇ ತಮ್ಮ ತಪ್ಪನ್ನು ಸಿಬ್ಬಂದಿ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಜವಾಬ್ದಾರಿಯಿಂದ ಕಾರ್ಯ ಮಾಡಬೇಕು ಎಂದು ವಿದ್ಯಾಲಯದ ಪ್ರಾಚಾರ್ಯೆ ಜಯಾ ಅವರಿಗೆ ಸೂಚಿಸಿದರು.

ಈ ವೇಳೆ ಪಾಲಕರಾದ ಕುಬೇರ ಮಜ್ಜಿಗಿ, ಶಿವಾನಂದ ಪ್ಯಾಟಿ, ಬಸವರಾಜ ಹುಬ್ಬಳ್ಳಿ, ಜಗನ್ನಾಥ ಬಿಸರಳ್ಳಿ, ಹನುಮಂತಪ್ಪ ಹಳ್ಳಿ, ಯಲ್ಲಪ್ಪ ರಕ್ಕಸಗಿ, ಟಿ.ಎನ್.ಚವ್ಹಾಣ್. ಗಂಗಾಧರ ಡೊಳ್ಳಿನ, ರಂಗನಾಥ ಮೇಟಿ, ನಾಗರಾಜ ಹೊನಗಡ್ಡ, ದ್ಯಾಮಣ್ಣ ವಡ್ರಕಲ್, ಮಲ್ಲಪ್ಪ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!