ರಸ್ತೆ ಹೆಸರಿಗೆ ಮಂಡ್ಯ ನಗರಸಭೆ ಸದಸ್ಯರ ಕಿತ್ತಾಟ...!

KannadaprabhaNewsNetwork |  
Published : Sep 16, 2025, 12:03 AM IST
೧೫ಕೆಎಂಎನ್‌ಡಿ-೧ಮಂಡ್ಯ ನಗರಸಭೆ ಧರಣಪ್ಪ ಸಭಾಂಗಣದಲ್ಲಿ ಅಧ್ಯಕ್ಷ ಎಂ.ವಿ.ಪ್ರಕಾಶ್ ಅಧ್ಯಕ್ಷತೆಯಲ್ಲಿ ಸಾಮಾನ್ಯಸಭೆ ನಡೆಯಿತು. ಶಾಸಕ ಪಿ.ರವಿಕುಮಾರ್, ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್, ಆಯುಕ್ತೆ ಯು.ಪಿ.ಪಂಪಾಶ್ರೀ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ರವಿ ಇದ್ದರು. | Kannada Prabha

ಸಾರಾಂಶ

ಬೆಸಗರಹಳ್ಳಿ ರಾಮಣ್ಣ ಸರ್ಕಲ್‌ನಿಂದ ರಿಲಾಯನ್ಸ್ ಟ್ರೆಂಡ್‌ವರೆಗಿನ ರಸ್ತೆಗೆ ನಾಡಪ್ರಭು ಕೆಂಪೇಗೌಡ ಹಾಗೂ ಅಲ್ಲಿಂದ ಗೌರಿಶಂಕರ ಕಲ್ಯಾಣ ಮಂದಿರದವರೆಗಿನ ರಸ್ತೆಗೆ ಅಂಬೇಡ್ಕರ್ ಹೆಸರಿಡುವಂತೆ ಮಂಡ್ಯ ನಗರಸಭೆ ಸದಸ್ಯರ ಒತ್ತಾಯ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ನೂರಡಿ ರಸ್ತೆಗೆ ನಾಡಪ್ರಭು ಕೆಂಪೇಗೌಡ ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹೆಸರಿಡುವ ಸಂಬಂಧ ನಗರಸಭಾ ಸದಸ್ಯರು ಕಿತ್ತಾಟವಾಡಿದ ಘಟನೆ ಸೋಮವಾರ ನಡೆಯಿತು.

ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ಬಿರುಸಿನ ವಾಗ್ವಾದ ನಡೆಯಿತು. ಬೆಸಗರಹಳ್ಳಿ ರಾಮಣ್ಣ ಸರ್ಕಲ್‌ನಿಂದ ರಿಲಾಯನ್ಸ್ ಟ್ರೆಂಡ್‌ವರೆಗಿನ ರಸ್ತೆಗೆ ನಾಡಪ್ರಭು ಕೆಂಪೇಗೌಡ ಹಾಗೂ ಅಲ್ಲಿಂದ ಗೌರಿಶಂಕರ ಕಲ್ಯಾಣ ಮಂದಿರದವರೆಗಿನ ರಸ್ತೆಗೆ ಅಂಬೇಡ್ಕರ್ ಹೆಸರಿಡುವಂತೆ ಸದಸ್ಯ ಟಿ.ಕೆ.ರಾಮಲಿಂಗು ಒತ್ತಾಯಿಸಿದರು.

೧೯೭೬ರಲ್ಲಿ ನೂರಡಿ ರಸ್ತೆಗೆ ಅಂಬೇಡ್ಕರ್ ಹೆಸರಿಡುವ ನಿರ್ಣಯವನ್ನು ನಗರಸಭೆಯಲ್ಲಿ ಕೈಗೊಳ್ಳಲಾಗಿತ್ತು. ಈಗ ಮತ್ತೆ ಆ ಹೆಸರನ್ನು ಬದಲಾವಣೆ ಮಾಡುವುದು ಬೇಡ. ನೂರಡಿ ರಸ್ತೆಗೆ ಅಂಬೇಡ್ಕರ್ ಹೆಸರಿಡುವಂತೆ ಸದಸ್ಯರಾದ ಶ್ರೀಧರ್, ಶಿವಪ್ರಕಾಶ್ ಅವರು ಶಾಸಕ ಪಿ.ರವಿಕುಮಾರ್ ಅವರನ್ನು ಒತ್ತಾಯಿಸಿದರು.

ಆಗ ಮಧ್ಯಪ್ರವೇಶಸಿದ ಸದಸ್ಯ ಟಿ.ಕೆ.ರಾಮಲಿಂಗು, ೧೯೭೬ರಲ್ಲಿ ನಗರಸಭೆಯಲ್ಲಿ ನಿರ್ಣಯವನ್ನಷ್ಟೇ ಕೈಗೊಳ್ಳಲಾಗಿತ್ತು. ಆಗ ಅದಕ್ಕೆ ಸರ್ಕಾರದಿಂದ ಅನುಮೋದನೆ ಪಡೆದುಕೊಂಡಿರಲಿಲ್ಲ. ೨೦೨೧ರಲ್ಲೂ ಕೂಡ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಡುವುದಕ್ಕೆ ನಗರಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಮಾಡಲಾಗಿದೆ. ಅದನ್ನೇ ಮುಂದುವರೆಸುವಂತೆ ಆಗ್ರಹಪಡಿಸಿದರು.

೧೯೭೬ ಹಾಗೂ ೨೦೨೧ರಲ್ಲಿ ನಗರಸಭೆಯಲ್ಲಿ ಆಗಿರುವ ನಿರ್ಣಯಗಳಿಗೆ ಸರ್ಕಾರದಿಂದ ಅನುಮೋದನೆ ದೊರಕದಿರುವುದರಿಂದ ನೂರಡಿ ರಸ್ತೆಗೆ ಕೆಂಪೇಗೌಡರ ಹೆಸರನ್ನಿಡುವುದು ಸೂಕ್ತ ಎಂದು ಟಿ.ಕೆ.ರಾಮಲಿಂಗು ಹೇಳಿದರೆ, ಅಂಬೇಡ್ಕರ್ ಹೆಸರಿನಲ್ಲಿ ವೃತ್ತವಿದೆ. ಅವರ ಹೆಸರಿನಲ್ಲೇ ಭವನವನ್ನೂ ನಿರ್ಮಿಸಲಾಗಿದೆ. ಆದರೆ, ನಿತ್ಯಸಚಿವ ಕೆ.ವಿ.ಶಂಕರಗೌಡರ ಹೆಸರು ಯಾವ ರಸ್ತೆಗೂ ಇಲ್ಲ. ಆ ಹೆಸರನ್ನೇ ನೂರಡಿ ರಸ್ತೆಗೆ ಇಡುವಂತೆ ಮನವಿ ಮಾಡಿದರು.

ಆಗ ಮಧ್ಯಪ್ರವೇಶಿಸಿದ ಆಸಕ ಪಿ.ರವಿಕುಮಾರ್ ಮಾತನಾಡಿ, ಕೆಂಪೇಗೌಡ ಮತ್ತು ಅಂಬೇಢ್ಕರ್ ಇಬ್ಬರೂ ಮಹಾನ್ ವ್ಯಕ್ತಿಗಳೇ. ಯಾರು ಹೆಚ್ಚು, ಯಾರು ಕಡಿಮೆ ಎನ್ನುವಂತೆಯೇ ಇಲ್ಲ. ಈಗಾಗಲೇ ನೂರಡಿ ರಸ್ತೆಗೆ ಅಂಬೇಡ್ಕರ್ ಹೆಸರನ್ನಿಡುವ ಬಗ್ಗೆ ನಿರ್ಣಯ ಕೈಗೊಂಡಿರುವುದರಿಂದ ಅದನ್ನು ಬದಲಾವಣೆ ಮಾಡಲು ಬರುವುದಿಲ್ಲ. ಬೆಸಗರಹಳ್ಳಿ ರಾಮಣ್ಣ ಸರ್ಕಲ್‌ನಿಂದ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದವರೆಗೆ ಹಾಗೂ ಶ್ರೀಕನ್ನಿಕಾ ಪರಮೇಶ್ವರಿ ದೇವಸ್ಥಾನದಿಂದ ಗೌರಿಶಂಕರ ಕಲ್ಯಾಣ ಮಂದಿರದವರೆಗಿನ ರಸ್ತೆಗೆ ಕೆಂಪೇಗೌಡರ ಹೆಸರನ್ನಿಡಲು ಸಲಹೆ ನೀಡಿದಾಗ ಬಹುತೇಕ ಸದಸ್ಯರು ಮೇಜು ತಟ್ಟಿ ಸಹಮತ ಸೂಚಿಸಿದರು.

ಆದರೆ, ಇದಕ್ಕೆ ಸಮ್ಮತಿ ಸೂಚಿಸದ ಸದಸ್ಯ ಟಿ.ಕೆ.ರಾಮಲಿಂಗು, ಬೆಸಗರಹಳ್ಳಿ ರಾಮಣ್ಣ ಸರ್ಕಲ್‌ನಿಂದ ರಿಲಾಯನ್ಸ್ ಟ್ರೆಂಡ್‌ವರೆಗಿನ ರಸ್ತೆಗೆ ನಾಡಪ್ರಭು ಕೆಂಪೇಗೌಡ, ಅಲ್ಲಿಂದ ಮುಂದಕ್ಕೆ ಅಂಬೇಡ್ಕರ್ ಹೆಸರನ್ನಿಡುವಂತೆ ಆಗ್ರಹಪಡಿಸಿದರು. ಈ ಮಧ್ಯೆ ಮೀನಾಕ್ಷಿ ಪುಟ್ಟಸ್ವಾಮಿ ಅವರು, ನಗರದ ನೂರಡಿ ರಸ್ತೆಗೆ ನಿತ್ಯ ಸಚಿವ ಕೆ.ವಿ.ಶಂಕರಗೌಡ ಹೆಸರಿಡಬೇಕು. ನಗರದಲ್ಲೆಲ್ಲೂ ಶಂಕರಗೌಡ ಹೆಸರಿನ ರಸ್ತೆ ಇರುವುದಿಲ್ಲ ಎಂದು ಹೇಳಿದರು.

ಆಗ ಶಾಸಕ ಪಿ.ರವಿಕುಮಾರ್ ಅವರು, ಈಗ ವಿವಾದ ಬೇಡ. ನೂರಡಿ ರಸ್ತೆಗೆ ಹೆಸರಿಡುವ ಸಂಬಂಧಿಸಿದಂತೆ ಕೆಂಪೇಗೌಡ ಮತ್ತು ಅಂಬೇಡ್ಕರ್ ಎರಡೂ ಹೆಸರನ್ನು ಕಳುಹಿಸೋಣ. ರಾಜ್ಯ ಸರ್ಕಾರ ಯಾವುದನ್ನು ಅಂತಿಮಗೊಳಿಸುವುದೋ ಅದನ್ನು ಒಪ್ಪಿಕೊಂಡು ನಡೆಯೋಣ ಎಂದು ತಿಳಿಸಿದಾಗ ಎಲ್ಲರೂ ಒಪ್ಪಿಗೆ ಸೂಚಿಸಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪಾಧ್ಯಕ್ಷ ಎಂ.ವಿ.ಅರುಣ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ರವಿ, ಪೌರಾಯುಕ್ತೆ ಯು.ಪಿ.ಪಂಪಾಶ್ರೀ ಇದ್ದರು.ಇಬ್ಬರೂ ಮಹಾನ್ ವ್ಯಕ್ತಿಗಳೇ. ಯಾರನ್ನೂ ಕಡೆಗಣಿಸುವಂತಿಲ್ಲ. ನೂರಡಿ ರಸ್ತೆಗೆ ಅಂಬೇಡ್ಕರ್ ಹೆಸರು, ಶ್ರೀಕನ್ನಿಕಾಪರಮೇಶ್ವರಿ ದೇವಸ್ಥಾನದಿಂದ ಗೌರಿಶಂಕರ ಕಲ್ಯಾಣ ಮಂದಿರದವರೆಗೆ ಕೆಂಪೇಗೌಡರ ಹೆಸರಿಡಲು ಶಾಸಕರು ಸಲಹೆ ನೀಡಿದ್ದಾರೆ. ಇದೇ ಅಂತಿಮವಲ್ಲ. ನೂರಡಿ ರಸ್ತೆಗೆ ಸಂಬಂಧಿಸಿದಂತೆ ಕೆಂಪೇಗೌಡ ಮತ್ತು ಅಂಬೇಡ್ಕರ್ ಇಬ್ಬರ ಹೆಸರನ್ನೂ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಸರ್ಕಾರ ಒಪ್ಪಿಗೆ ಸೂಚಿಸುವ ಹೆಸರನ್ನು ನೂರಡಿ ರಸ್ತೆಗೆ ಇಡಲಾಗುವುದು.

- ಎಂ.ವಿ.ಪ್ರಕಾಶ್ (ನಾಗೇಶ್), ಅಧ್ಯಕ್ಷರು, ನಗರಸಭೆ

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ